ನಾಪೋಕ್ಲು, ಆ. ೧೭: ಪೆರಾಜೆಯಲ್ಲಿ ಬಿಜೆಪಿ ಶಕ್ತಿ ಕೇಂದ್ರದ ಸಭೆ ನಡೆಯಿತು. ಸಭೆಯನ್ನುದ್ದೇಶಿಸಿ ಮಾತನಾಡಿದ ಮಡಿಕೇರಿ ಗ್ರಾಮಾಂತರ ಮಂಡಲ ಅಧ್ಯಕ್ಷ ನಾಗೇಶ್ ಕುಂದಲ್ಪಾಡಿ, ವಿಕಲಚೇತನರ ವೇತನ ಹಾಗೂ ವೃದ್ಧಾಪ್ಯ ವೇತನಗಳನ್ನು ರಾಜ್ಯ ಸರ್ಕಾರ ಉದ್ದೇಶಪೂರ್ವಕವಾಗಿ ತಡೆಹಿಡಿದಿದೆ. ಇದನ್ನು ತೀವ್ರವಾಗಿ ಖಂಡಿಸುವುದಾಗಿ ಹೇಳಿದರು.
ವಿಕಲಚೇತನರಿಗೆ ಹಾಗೂ ವೃದ್ಧರಿಗೆ ವೇತನ ನೀಡಲು ರೂ.೩೨,೦೦೦ ಆದಾಯ ನಿಗದಿಪಡಿಸಿದೆ. ಆದಾಯ ಪ್ರಮಾಣ ಪತ್ರ ನೀಡಿದರೆ ಮಾತ್ರ ವಿಕಲಚೇತನರ ವೇತನ ಹಾಗೂ ವೃದ್ಧಾಪ್ಯ ವೇತನಗಳನ್ನು ನೀಡುವುದಾಗಿ ತಿಳಿಸಿದ್ದು ಇದು ಖಂಡನೀಯ. ಇದರಿಂದಾಗಿ ವಿಕಲಚೇತನರು, ಮಹಿಳೆಯರು ಹಾಗೂ ವೃದ್ಧರು ಮಾನಸಿಕವಾಗಿ ಕುಗ್ಗಿ ಹೋಗಿದ್ದಾರೆ. ಮಂಡಲ ಬಿಜೆಪಿ ವತಿಯಿಂದ ಹಾಗೂ ಶಕ್ತಿ ಕೇಂದ್ರದ ವತಿಯಿಂದ ಇದನ್ನು ಸಂಪೂರ್ಣವಾಗಿ ಖಂಡಿಸುವುದಾಗಿ ಅವರು ತಿಳಿಸಿದರು.
ಶಕ್ತಿ ಕೇಂದ್ರದ ಪ್ರಮುಖ್ ಸುಭಾಶ್ಚಂದ್ರ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಸಹ ಪ್ರಮುಖ ಉದಯ ಕುಂಬಳಚೇರಿ, ಮಹಾಶಕ್ತಿ ಕೇಂದ್ರದ ಅಧ್ಯಕ್ಷ ನಂಜಪ್ಪ ಮತ್ತು ಬೂತ್ ಮಟ್ಟದ ಅಧ್ಯಕ್ಷರು, ಶಕ್ತಿ ಕೇಂದ್ರದ ಸದಸ್ಯರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.