ಕೂಡಿಗೆ, ಆ. ೧೭: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬೀದಿನಾಯಿಗಳ ಹಾವಳಿ ಮಿತಿಮೀರಿದೆ ಎಂದು ಆರೋಪಿಸಿ ಕೂಡಿಗೆ ಗ್ರಾಮ ಪಂಚಾಯಿತಿ ಮುಂಭಾಗದಲ್ಲಿ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.
ಶ್ರೀ ಬಸವೇಶ್ವರ ದೇವಾಲಯ ಸಮಿತಿ, ಸಾರ್ವಜನಿಕರು, ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಮಹಿಳಾ ಘಟಕದ ಪದಾಧಿಕಾರಿಗಳು, ಸೇರಿದಂತೆ ನೂರಾರು ಮಂದಿ ಗ್ರಾಮ ಪಂಚಾಯಿತಿ ಅಧಿಕಾರಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
ಬೀದಿ ನಾಯಿಗಳು ಶಾಲಾ ಮಕ್ಕಳು, ಮಹಿಳೆಯರು ಸೇರಿದಂತೆ ಪುರುಷರ ಮೇಲೆ ದಾಳಿ ಮಾಡುತ್ತಿವೆ. ಬೀದಿ ನಾಯಿಗಳಿಂದ ಸಾರ್ವಜನಿಕರನ್ನು ರಕ್ಷಿಸಬೇಕಿದೆ, ನಾಯಿಗಳ ಹಾವಳಿ ನಿಯಂತ್ರಿಸಬೇಕಿದೆ ಎಂದು ಆಗ್ರಹಿಸಿ ಘೋಷಣೆ ಕೂಗಲಾಯಿತು.
ಕೂಡಿಗೆ ಕೊಪ್ಪಲು ಗ್ರಾಮದ ರಂಗಣ್ಣ ಅವರ ಮೇಲೆ ದಾಳಿ ನಡೆಸಿದ ನಾಯಿಗಳು ಮಾರಣಾಂತಿಕವಾಗಿ ಘಾಸಿಗೊಳಿಸಿವೆ. ಜಾನುವಾರುಗಳ ಮೇಲೂ ಬೀದಿ ನಾಯಿಗಳು ದಾಳಿನಡೆಸುತ್ತಿವೆ. ಪ್ರತಿಭಟನೆ ಬಗ್ಗೆ ಸೂಚನೆಯಿದ್ದರೂ ಕೂಡ ಅಭಿವೃದ್ಧಿ ಅಧಿಕಾರಿ ರಜೆ ಪಡೆದಿರುವುದು ಸಮಂಜಸವಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಈ ಹಿಂದೆ ಹಲವು ಬಾರಿ ನಾಯಿಗಳ ಹಾವಳಿ ಬಗ್ಗೆ ಎಚ್ಚರಿಸಿದ್ದರೂ ಕೂಡ ಸೂಕ್ತ ಕ್ರಮಕೈಗೊಂಡಿಲ್ಲ. ನಾಯಿ ದಾಳಿ ಹಿನ್ನೆಲೆಯಲ್ಲಿ ಅಧಿಕಾರಿಗಳ ಮೇಲೆ ದೂರು ನೀಡಬೇಕಾಗುತ್ತದೆ. ಗಾಯಾಳು ಚಿಕಿತ್ಸೆಗೆ ಪಂಚಾಯಿತಿ ಯಿಂದ ಕ್ರಮವಹಿಸಬೇಕಿದೆ ಎಂದು ಟಿ.ಎ.ನಾರಾಯಣ ಗೌಡರ ಕರವೇ ಜಿಲ್ಲಾ ಸಂಚಾಲಕ ಗೋವಿಂದ ರಾಜ್ ದಾಸ್, ತಾಲೂಕು ಅಧ್ಯಕ್ಷ ಬಿ.ಜೆ.ಅಣ್ಣಯ್ಯ ಆಗ್ರಹಿಸಿದರು.
ಸ್ಧಳಕ್ಕೆ ಅಗಮಿಸಿದ್ದ ಗ್ರಾಮ ಪಂಚಾಯಿತಿ ಆಡಳಿತ ಅಧಿಕಾರಿ ಅವರಿಗೆ ಪ್ರತಿಭಟನಾಕಾರರು ಮನವಿ ಪತ್ರ ನೀಡಿ ಒಂದು ವಾರದ ಗಡುವು ನೀಡಿರುತ್ತಾರೆ. ಗ್ರಾಮ ಪಂಚಾಯಿತಿ ವತಿಯಿಂದ ನಿಯಮಾನುಸಾರ ಕ್ರಮ ತೆಗೆದುಕೊಳ್ಳದಿದ್ದರೆ ಮುಂದಿನ ಸೋಮವಾರ ಗ್ರಾಮ ಪಂಚಾಯಿತಿ ಮುಂಭಾಗ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.
ಈ ಸಂದರ್ಭ ಗ್ರಾಮ ಪಂಚಾಯಿತಿ ಮಾಜಿ ಸದಸ್ಯರಾದ ಅರುಣ್ ರಾವ್, ಅನಂತ, ಶಿವಕುಮಾರ್, ಶ್ರೀ ಬಸವೇಶ್ವರ ದೇವಾಲಯ ಸಮಿತಿ ಅಧ್ಯಕ್ಷ ಕೆ.ಎಸ್. ಚಂದ್ರು, ಉಪಾಧ್ಯಕ್ಷ ಪ್ರಕಾಶ್, ಜಿಲ್ಲಾ ಐ.ಎನ್ ಟಿ ಸಿ. ಅಧ್ಯಕ್ಷ ಅಣ್ಣಯ್ಯ, ಸಮಾಜ ಸೇವಕ ಉದ್ಯಮಿ ಹಕ್ಕೆಮೋಹನ್, ಕರವೇ ತಾಲೂಕು ಉಪಾಧ್ಯಕ್ಷ ಫಯಾಜುದ್ದಿನ್, ಪ್ರಧಾನ ಕಾರ್ಯದರ್ಶಿ ಗೀತಾ, ಕಾರ್ಯದರ್ಶಿ ಕುಮಾರ್, ಖಜಾಂಚಿ ರೊನಾಲ್ಡ್, ಪ್ರಮುಖರಾದ ಕೆ.ಆರ್.ಗಣೇಶ್, ಬಿ.ಡಿ.ಅಣ್ಣಯ್ಯ, ಚಂದ್ರು, ಸುಬ್ಬಯ್ಯ, ನಾಗರಾಜು, ಮಹಮ್ಮದ್, ರಜಾಕ್, ಇಸ್ಮಾಯಿಲ್, ಧರ್ಮ, ಕೆ.ಪಿ ಸೋಮಣ್ಣ, ಕೆ.ಎಸ್. ಕಾಂತರಾಜು ಸೇರಿದಂತೆ ಮಹಿಳಾ ಘಟಕದ ಪದಾಧಿಕಾರಿಗಳು, ಮತ್ತಿತರರು ಇದ್ದರು.