ಸುಂಟಿಕೊಪ್ಪ, ಆ. ೧೭: ಭತ್ತದ ಗದ್ದೆಗಳು ಕೇವಲ ಕ್ರೀಡಾಕೂಟಕ್ಕೆ ಸಿಮೀತವಾಗದೆ ಆಹಾರ ಉತ್ಪಾದನೆಯಲ್ಲಿ ಬಳಕೆಗೆ ಬರಬೇಕೆಂದು ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಹೇಳಿದರು.

ಇಲ್ಲಿಗೆ ಸಮೀಪದ ಗದ್ದೆಹಳ್ಳದಲ್ಲಿ ಗದ್ದೆಯ ಆಟ ತಂಡದ ವತಿಯಿಂದ ೨ನೇ ವರ್ಷದ ಜಿಲ್ಲಾ ಮಟ್ಟದ ಮುಕ್ತ ಕೆಸರುಗದ್ದೆ ಕ್ರೀಡಾಕೂಟದ ಸಮಾರೋಪ ಸಮಾರಂಭ ಮತ್ತು ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.

ಭತ್ತದ ಗದ್ದೆಗಳು ಅಂತರ್‌ಜಲ ಮಟ್ಟವನ್ನು ಕಾಯ್ದುಕೊಳ್ಳಲು ಸಹಕಾರಿಯಾಗಿದ್ದು ದುರದೃಷ್ಟವಶಾತ್ ಭತ್ತದ ಗದ್ದೆಗಳೆಲ್ಲ ಮನೆ ನಿವೇಶನದ ಬಡಾವಣೆಗಳಾಗಿ, ಅಡಿಕೆ ತೋಟಗಳಾಗಿ ಮಾರ್ಪಾಡು ಆಗುತ್ತಿವೆ ಎಂದು ವಿಷಾದಿಸಿದರು. ಗದ್ದೆಹಳ್ಳದಲ್ಲಿ ಗದ್ದೆಯಾಟ ಜಾತಿ ಮತ ಭೇದವಿಲ್ಲದೆ ಊರಿನ ಹಬ್ಬವಾಗಿ ರೂಪುಗೊಂಡಿರುವುದು ಪ್ರಶಂಸನೀಯ; ಕ್ರೀಡಾಕೂಟಗಳು ಸಮುದಾಯಗಳನ್ನು ಬೆಸೆಯುತ್ತವೆ. ಊರಿನ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಪ್ರಸ್ತುತ ಯುವಜನತೆ ದಾರಿ ತಪ್ಪುವ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದು ಅವರನ್ನು ಕ್ರೀಡೆಗಳತ್ತ, ಅದರಲ್ಲೂ ವಿಶೇಷವಾಗಿ ಗ್ರಾಮೀಣ ಕ್ರೀಡಾಕೂಟಗಳತ್ತ ಮನಸ್ಸು ತೊಡಗಿಸಿಕೊಳ್ಳುವಂತೆ ಮಾಡಬೇಕೆಂದು ಅವರು ಕರೆ ನೀಡಿದರು

ಕ್ರೀಡಾ ಕ್ಷೇತ್ರ ಮತ್ತು ದೇಶ ಸೇವೆಯ ನಿವೃತ್ತಿ ನಂತರ ಸಂಪೂರ್ಣ ಕೃಷಿ ಕಾಯಕದಲ್ಲಿ ತೊಡಗಿಸಿಕೊಂಡಿರುವ ಮಾಗಲು ವಸಂತ, ಕ್ರೀಡಾಪಟುಗಳಾದ ಪಟ್ಟೆಮನೆ ನವನೀತಾ, ಶಾಯಿಲ್ ಉಸ್ಮಾನ್, ಶಿಕ್ಷಣ ವಿವಿಧ ಕ್ಷೇತ್ರದಲ್ಲಿ ಸಾಧಕರಿಗೆ ಶಾಸಕ ಡಾ.ಮಂತರ್‌ಗೌಡ, ವೇದಿಕೆಯಲ್ಲಿದ್ದ ಅತಿಥಿಗಳು ಸನ್ಮಾನಿಸಿ ಗೌರವಿಸಿದರು. ಸುಂಟಿಕೊಪ್ಪ ನಾಡು ಗೌಡ ಸಮಾಜದ ಅಧ್ಯಕ್ಷ ಯಂಕನ ಉಲ್ಲಾಸ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಕಾಫಿ ಬೆಳೆಗಾರ ಪಟ್ಟೆಮನೆ ಉದಯ ಕುಮಾರ್ ಕ್ರೀಡಾಕೂಟದ ಉದ್ಘಾಟನೆ ನೆರವೇರಿಸಿದರು. ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ. ಶಶಿಧರ್, ಕಾಫಿ ಬೆಳೆಗಾರರಾದ ಪಟ್ಟೆಮನೆ ಗೋಪಾಲಕೃಷ್ಣ, ಪಟ್ಟೆಮನೆ ರಾಧಾಕೃಷ್ಣ, ಪಟ್ಟೆಮನೆ ಪ್ರಸನ್ನ, ಯಂಕನ ಎಲ್. ಶೇಖರ್, ಯಂಕನ ವಿಮಲ, ಬೆಂಗಳೂರಿನ ಎಚ್‌ಡಿಎಫ್ ಬ್ಯಾಂಕ್ ಸಹಾಯಕ ವ್ಯವಸ್ಥಾಪಕರಾದ ಪಟ್ಟೆಮನೆ ಹರ್ಷಿತ, ನಾಕೂರು ಶಿರಂಗಾಲ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಮಂಡೋಡಿ ಜಗನ್ನಾಥ್, ಹೇರೂರು ಕಾಫಿ ಬೆಳೆಗಾರ ಮಂಡೋಡಿ ದಯನ್, ಮಂದೋಡಿ ಹೇಮಚಂದ್ರ, ಮೊಟ್ಟನ ಕರುಣ, ಹೇರೂರು ಉದ್ಯಮಿ ಕುರುಂಜಿ ದಯನ್, ಬಳ್ಳಾರಿಯ ಆನೆರ ಮಾಲಾ ಕಿರಣ್, ಬೆಂಗಳೂರಿನ ಪರಿವಾರ ನಮಿತಾ, ಟಿಂಬರ್ ವ್ಯಾಪಾರಿ ವಿಲಿಯಂ, ಗ್ರಾ.ಪಂ. ಮಾಜಿ ಸದಸ್ಯರುಗಳಾದ ಹೆಚ್.ಯು. ರಫೀಕ್ ಖಾನ್, ಎಂ.ಎಸ್. ಜಿನಾಸುದ್ದೀನ್, ಹಾಗೂ ಸುಂಟಿಕೊಪ್ಪ ನಾಡು ಗೌಡ ಸಮಾಜದ ಅಧ್ಯಕ್ಷರು ಮತ್ತು ಸದಸ್ಯರುಗಳು ಉಪಸ್ಥಿತರಿದ್ದರು.