ಮಡಿಕೇರಿ, ಆ. ೧೬: ಐತಿಹಾಸಿಕ ಮಡಿಕೇರಿ ದಸರಾದ ಪ್ರಮುಖ ಆಕರ್ಷಣೆಯಾದ ದಶಮಂಟಪ ಶೋಭಾಯಾತ್ರೆ ವೇಳೆ ಧ್ವನಿವವರ್ಧಕ ಬಳಕೆಗೆ ಉಂಟಾಗಿರುವ ಕಾನೂನಾತ್ಮಕ ಅಡ್ಡಿ ನಿವಾರಣೆಗೆ ಸರಕಾರದ ಗಮನ ಸೆಳೆಯುವ ನಿಟ್ಟಿನಲ್ಲಿ ಶಾಸಕರು ಸದನದಲ್ಲಿ ಪ್ರಸ್ತಾಪಿಸುವಂತೆ ದಶಮಂಟಪ ಸಮಿತಿಯವರು ಕೋರಿದ್ದಾರೆ.

ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಸಮ್ಮುಖದಲ್ಲಿ ನಗರದ ಸುದರ್ಶನ ಅತಿಥಿಗೃಹದಲ್ಲಿ ನಡೆದ ಸಭೆಯಲ್ಲಿ ದಶಮಂಟಪ ಶೋಭಾಯಾತ್ರೆ ಸಂಬAಧ ಚರ್ಚೆಗಳು ನಡೆದವು. ಈ ವೇಳೆ ಕಳೆದ ಕೆಲವು ವರ್ಷಗಳಿಂದ ಶೋಭಾಯಾತ್ರೆ ವೇಳೆ ಡಿಜೆ ಬಳಸಲು ಮಾಲಿನ್ಯ ನಿಯಂತ್ರಣ ಮಂಡಳಿ, ಪೊಲೀಸ್ ಇಲಾಖೆಯಿಂದ ನಿರ್ಬಂಧ ಬರುತ್ತಿದ್ದು, ಕಾನೂನಾತ್ಮಕ ಕ್ರಮಗಳನ್ನು ಸಮಿತಿಯವರು ಎದುರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆ ಸರಕಾರದ ಮಟ್ಟದಿಂದಲೇ ಹಲವು ವರ್ಷಗಳಿಂದ ನಡೆದುಕೊಂಡು ಬಂದಿರುವ ಈ ಕಾರ್ಯಕ್ರಮಕ್ಕೆ ಧ್ವನಿವರ್ಧಕ ಬಳಕೆಗೆ ವಿನಾಯಿತಿ ನೀಡುವಂತೆ ಕ್ರಮಕೈಗೊಳ್ಳಬೇಕೆಂದು ಶಾಸಕರಲ್ಲಿ ದಶಮಂಟಪ ಪ್ರಮುಖರು ಮನವಿ ಮಾಡಿದರು.

ಶಾಸಕ ಮಂತರ್ ಮಾತನಾಡಿ, ಕಾನೂನಾತ್ಮಕವಾಗಿ ೧೦ ಗಂಟೆಯೊಳಗೆ ಧ್ವನಿವರ್ಧಕ ಬಳಕೆ ಸ್ಥಗಿತಗೊಳಿಸಬೇಕಾಗಿದೆ. ಇದು ನ್ಯಾಯಾಂಗ ವಿಚಾರವಾಗಿದ್ದು, ಕಾನೂನಾತ್ಮಕ ಕ್ರಮದ ಅವಕಾಶಗಳಿದೆಯ ಎಂಬುದರ ಬಗ್ಗೆ ಚಿಂತಿಸಬೇಕಾಗಿದೆ. ಅಲ್ಲದೆ, ಸರಕಾರದ ಗಮನ ಸೆಳೆಯುವ ಕೆಲಸವನ್ನು ಮಾಡಲಾಗುವುದು ಎಂದರು.

ಬೆಂಗಳೂರಿಗೆ ನಿಯೋಗ ತೆರಳಿ ಸರಕಾರದ ಗಮನ ಸೆಳೆಯುವ ನಿಟ್ಟಿನಲ್ಲಿ ಕಾರ್ಯೋನ್ಮುಖಗೊಳ್ಳಲು ನಿರ್ಧರಿಸಲಾಯಿತು.

ಸಭೆಯಲ್ಲಿ ದಸರಾ ಸಮಿತಿ ಕಾರ್ಯಾಧ್ಯಕ್ಷ ಬಿ.ಕೆ. ಅರುಣ್ ಕುಮಾರ್, ಪ್ರಧಾನ ಕಾರ್ಯದರ್ಶಿ ಅರುಣ್ ಶೆಟ್ಟಿ, ದಶಮಂಟಪ ಸಮಿತಿ ಅಧ್ಯಕ್ಷ ಬಿ.ಎಂ. ಹರೀಶ್, ೧೦ ಮಂಟಪ ಸಮಿತಿ, ೪ ಕರಗ ಸಮಿತಿಯ ಪ್ರತಿನಿಧಿಗಳು ಭಾಗವಹಿಸಿದ್ದರು.