ಸೋಮವಾರಪೇಟೆ, ಆ. ೧೬: ಏರು ರಸ್ತೆಯಲ್ಲಿ ಚಲಿಸುತ್ತಿದ್ದ ಬಸ್ ದಿಢೀರನೆ ಚಾಲಕನ ನಿಯಂತ್ರಣ ತಪ್ಪಿ ಹಿಂಬದಿಗೆ ಚಲಿಸಿ ರಸ್ತೆ ಬದಿಯ ಚರಂಡಿಗೆ ಮಗುಚಿದ ಘಟನೆ ಸಮೀಪದ ತೋಳೂರುಶೆಟ್ಟಳ್ಳಿಯ ಇನಕನಹಳ್ಳಿ ಮುಖ್ಯರಸ್ತೆಯಲ್ಲಿ ಸಂಭವಿಸಿದೆ. ಅದೃಷ್ಟವಶಾತ್ ಬಸ್‌ನಲ್ಲಿದ್ದ ೨೦ ಪ್ರವಾಸಿಗರು ಅಪಾಯದಿಂದ ಪಾರಾಗಿದ್ದಾರೆ.
ಬೆಂಗಳೂರಿನಿAದ ಕೊಡಗು ಹಾಗೂ ಸಕಲೇಶಪುರ ಭಾಗದ ಪ್ರವಾಸಿ ತಾಣಗಳನ್ನು ವೀಕ್ಷಿಸಲು ಆಗಮಿಸಿದ್ದ ಪ್ರವಾಸಿಗರು, ಸೋಮವಾರಪೇಟೆ ಭಾಗದ ಪ್ರವಾಸಿ ತಾಣ ವೀಕ್ಷಿಸಿ ಕುಶಾಲನಗರ ಮಾರ್ಗವಾಗಿ ಬೆಂಗಳೂರಿಗೆ ಹಿಂತಿರುಗುತ್ತಿದ್ದರು.
ಇAದು ಮಧ್ಯಾಹ್ನ ಇನಕನಳ್ಳಿ ಬಳಿಯ ಏರು ರಸ್ತೆಯಲ್ಲಿ ಸಾಗುತ್ತಿದ್ದ ಸಂದರ್ಭ ಏಕಾಏಕಿ ಚಾಲಕನ ನಿಯಂತ್ರಣ ತಪ್ಪಿ ಹಿಂಬದಿಗೆ ಚಲಿಸಿದ್ದು, ರಸ್ತೆ ಬದಿಯ ಚರಂಡಿಗೆ ಮಗುಚಿದೆ. ಚರಂಡಿಯ ಸಮೀಪದಲ್ಲಿದ್ದ ಹೊಳೆಗೆ ಒಂದು ವೇಳೆ ಬಸ್ ಮಗುಚಿದ್ದರೆ ಭಾರೀ ಅನಾಹುತ ಸಂಭವಿಸುವ ಸಾಧ್ಯತೆ ಇತ್ತು. ಅದೃಷ್ಟವಶಾತ್ ಪ್ರವಾಸಿಗರಿಗೆ ಯಾವುದೇ ಗಾಯಗಳಾಗಿಲ್ಲ.