ಮಡಿಕೇರಿ, ಆ. ೧೬: ಹಿರಿಯ ಪತ್ರಕರ್ತ ಎಂ. ಶ್ರೀಧರ್ ಹೂವಲ್ಲಿ ಅವರು ರಚಿಸಿರುವ ೨ನೇ ಕೃತಿ, ಕೊಡವ ಮಕ್ಕಡ ಕೂಟದ ೧೨೬ನೇ ಪುಸ್ತಕ ಕಥಾಂಜಲಿ ಲೋಕಾರ್ಪಣೆಗೊಂಡಿತು.

ನಗರದ ಪತ್ರಿಕಾ ಭವನದಲ್ಲಿ ನಡೆದ ಸಮಾರಂಭದಲ್ಲಿ ಕಥಾಂಜಲಿ ಪುಸ್ತಕವನ್ನು ಮಾಜಿ ಸಚಿವ ಹಾಗೂ ಸಾಹಿತಿ ಅಡಗೂರು ಹೆಚ್.ವಿಶ್ವನಾಥ್ ಅವರು ಬಿಡುಗಡೆಗೊಳಿಸಿದರು.

ನಂತರ ಮಾತನಾಡಿದ ಅವರು ಕಥಾಂಜಲಿ ಪುಸ್ತಕದ ಲೇಖಕ ಶ್ರೀಧರ್ ಅವರು ತಮ್ಮ ಪುಸ್ತಕದಲ್ಲಿ ಪತ್ನಿ ತಮಗೆ ಬೆನ್ನೆಲುಬಾಗಿ ಇದ್ದ ಬಗ್ಗೆ ಬದುಕಿನ ಕಥೆಯನ್ನು ಅತ್ಯಂತ ಮನೋಜ್ಞವಾಗಿ ಉಲ್ಲೇಖಿಸಿದ್ದಾರೆ. ಆದರೆ ಇಂದಿನ ಕಾಲಘಟ್ಟದಲ್ಲಿ ಪತ್ನಿಯೇ ಪತಿಯನ್ನು ಕೊಲೆ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇಂದು ಮಾಧ್ಯಮಗಳಲ್ಲಿ ಪತಿಯನ್ನು ಪತ್ನಿ ಕೊಲೆ ಮಾಡಿದ ಸುದ್ದಿಗಳೇ ಹೆಚ್ಚು ಹರಿದಾಡುತ್ತಿವೆ. ಇದು ಅತ್ಯಂತ ಆತಂಕಕಾರಿ ಬೆಳವಣಿಗೆಯಾಗಿದ್ದು, ಪುರುಷರ ರಕ್ಷಣೆಗೆ ಪ್ರತ್ಯೇಕ ಕಾನೂನು ಜಾರಿಗೆ ತರುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.

ಪುರುಷರಿಂದ ಮಹಿಳೆಯರ ಮೇಲೆ ದೌರ್ಜನ್ಯವಾದರೆ ಪೊಲೀಸ್ ಠಾಣೆಗಳಲ್ಲಿ ತಕ್ಷಣ ದೂರು ದಾಖಲಾಗುತ್ತದೆ. ಆದರೆ ಮಹಿಳೆಯಿಂದ ದೌರ್ಜನ್ಯವಾಗಿದೆ ಎಂದು ಪುರುಷ ದೂರು ಸಲ್ಲಿಸಿದರೆ ಅದನ್ನು ನಿರ್ಲಕ್ಷಿಸಲಾಗುತ್ತಿದೆ. ಹಿಂದೆ ಪುರುಷ ಪ್ರಧಾನ ಸಮಾಜವಿತ್ತು, ಆದರೆ ಇಂದು ಪುರುಷ ಮತ್ತು ಮಹಿಳಾ ಶಕ್ತಿ ಶೇ.೫೦ ರ ಅನುಪಾತದಲ್ಲಿದ್ದು, ಸಮಾನ ಪ್ರಾತಿನಿಧ್ಯವಿದೆ. ಎಲ್ಲಾ ಕ್ಷೇತ್ರಗಳಲ್ಲೂ ಮಹಿಳೆಯರಿಗೆ ಸಮಾನ ಅವಕಾಶ ನೀಡಲಾಗಿದೆ. ಮಹಿಳೆಯರ ರಕ್ಷಣೆಗೆ ಪ್ರತ್ಯೇಕ ಕಾನೂನು ಇರುವಂತೆ ಪುರುಷರ ರಕ್ಷಣೆಗೂ ಪ್ರತ್ಯೇಕ ಕಾನೂನು ಜಾರಿಗೆ ತರಬೇಕು. ಈ ಬೇಡಿಕೆ ತಮಾಷೆ ಎನಿಸಿದರೂ ಪರಿಸ್ಥಿತಿ ಕಟುವಾಗಿದೆ ಎಂದರು.

ಸಾಹಿತ್ಯ ಓದುಗನಿಗೆ ಸಂತೋಷವನ್ನು ನೀಡುತ್ತದೆ, ಪ್ರತಿಯೊಬ್ಬ ಮನುಷ್ಯನ ಜೀವನದಲ್ಲೂ ಒಂದೊAದು ಕಥೆಗಳಿರುತ್ತವೆ. ಈ ಕಥೆಗಳು ಬರವಣಿಗೆಯ ರೂಪದಲ್ಲಿ ಸಾಹಿತ್ಯವಾಗಿ ಮಾರ್ಪಡಬೇಕು. ಇಂದು ಬರೆಯುವವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಬರಹಗಾರರಿಗೆ ಶಕ್ತಿ ತುಂಬುವವರು ಬೇಕಾಗಿದ್ದಾರೆ, ಓದುಗರ, ಪ್ರಕಾಶಕರ ಹಾಗೂ ದಾನಿಗಳ ಪ್ರೋತ್ಸಾಹದ ಅಗತ್ಯವಿದೆ. ಕೊಡಗಿನಲ್ಲಿ ಬರಹಗಾರರಿಗೆ ನಿರಂತರ ಶಕ್ತಿ ತುಂಬುತ್ತಾ ಬರುತ್ತಿರುವ ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಅಯ್ಯಪ್ಪ ಅವರ ಕಾರ್ಯ ಶ್ಲಾಘನೀಯವೆಂದು ಅಡಗೂರು ಹೆಚ್. ವಿಶ್ವನಾಥ್ ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷ ಎಂ.ಪಿ.ಕೇಶವ ಕಾಮತ್, ಮನೆಗೊಂದು ಗ್ರಂಥಾಲಯ ಇಂದಿನ ಅಗತ್ಯತೆಯಾಗಿದೆ, ಮನೆಯಲ್ಲೇ ಗ್ರಂಥಾಲಯವಿದ್ದರೆ ಯಾರು, ಯಾವಾಗ ಬೇಕಾದರು ಓದಬಹುದು. ಪುಸ್ತಕಗಳನ್ನು ಓದುವುದರಿಂದ ಜ್ಞಾನವನ್ನು ಹೆಚ್ಚಿಸಿಕೊಳ್ಳಬಹುದು ಎಂದು ಅಭಿಪ್ರಾಯಪಟ್ಟರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಅವರು ಪ್ರತಿದಿನ ಪತ್ರಿಕೆ ಮತ್ತು ಪುಸ್ತಕಗಳನ್ನು ಓದುವುದರಿಂದ ಜ್ಞಾನವನ್ನು ಹೆಚ್ಚಿಸಿಕೊಳ್ಳಬಹುದಾಗಿದೆ. ಹಿಂದೆ ಮಹಿಳೆಯರಲ್ಲಿ ಪುಸ್ತಕಗಳನ್ನು ಓದುವ ಹವ್ಯಾಸ ಕಡ್ಡಾಯವಾಗಿತ್ತು. ಆದರೆ ಇಂದು ಓದುಗರ ಸಂಖ್ಯೆಯೇ ಕಡಿಮೆಯಾಗಿದೆ, ಪುಸ್ತಕ ಅಂಗಡಿಗಳಲ್ಲಿ ಪುಸ್ತಕವನ್ನೇ ಕೊಳ್ಳುವವರಿಲ್ಲದಾಗಿದೆ. ಬರಹ ಗಾರರಿಗೆ ಪ್ರೋತ್ಸಾಹ ನೀಡಲು ಪುಸ್ತಕಗಳನ್ನು ಮುದ್ರಿಸಲು ದಾನಿಗಳೇ ಸಿಗುತ್ತಿಲ್ಲ ವೆಂದು ಬೇಸರ ವ್ಯಕ್ತಪಡಿಸಿದರು.

ಸಾಹಿತ್ಯ ಕ್ಷೇತ್ರಕ್ಕೆ ಆದ್ಯತೆ ನೀಡಿ ಯಾವುದೇ ಜಾತಿ, ಧರ್ಮ, ಭಾಷೆ, ಭೇದವಿಲ್ಲದೆ ಎಲ್ಲರ ಪುಸ್ತಕಗಳನ್ನು ಬಿಡುಗಡೆ ಮಾಡಲಾಗುತ್ತಿದೆ. ಯಾವುದೇ ಲಾಭವನ್ನು ನಿರೀಕ್ಷೆ ಮಾಡದೆ ಇಲ್ಲಿಯವರೆಗೆ ದಾಖಲೆಯ ೧೨೬ ಪುಸ್ತಕಗಳನ್ನು ಲೋಕಾರ್ಪಣೆ ಮಾಡಲಾಗಿದೆ. ಪುಸ್ತಕಗಳನ್ನು ಉಚಿತವಾಗಿ ನೀಡಲಾಗಿದೆ ಎಂದು ತಿಳಿಸಿದರು.

ಹಿರಿಯ ಪತ್ರಕರ್ತ ಶ್ರೀಧರ್ ಹೂವಲ್ಲಿ ಅವರು “ಕಥಾಂಜಲಿ” ಪುಸ್ತಕದಲ್ಲಿ ತಮ್ಮ ಬದುಕಿನ ಚಿತ್ರಣವನ್ನು ಮನೋಜ್ಞವಾಗಿ ವಿವರಿಸಿದ್ದಾರೆ. ಅಲ್ಲದೆ ಸಾಮಾಜಿಕ ಕಳಕಳಿಯ ಉತ್ತಮ ಕಥೆಗಳನ್ನು ರಚಿಸಿದ್ದಾರೆ. ಇನ್ನು ಮುಂದೆಯೂ ಹೆಚ್ಚಿನ ಸಂಖ್ಯೆಯ ಪುಸ್ತಕಗಳನ್ನು ರಚಿಸಲಿ ಎಂದು ಬೊಳ್ಳಜಿರ ಅಯ್ಯಪ್ಪ ಶುಭ ಹಾರೈಸಿದರು.

ಸಮಾಜ ಸೇವಕ ಕೆ.ಎಂ.ಗಣೇಶ್ ಮಾತನಾಡಿ, ಮೊಬೈಲ್ ಫೋನ್‌ಗಳಿಂದಾಗಿ ಪುಸ್ತಕಗಳನ್ನು ಓದುವವರ ಸಂಖ್ಯೆ ಕ್ಷೀಣಿಸಿದೆ. ಪುಸ್ತಕ ಮತ್ತು ಪತ್ರಿಕೆಗಳಿಂದ ಅರಿವು ಹೆಚ್ಚಾಗಲಿದ್ದು, ಕನಿಷ್ಠ ವಾರಕ್ಕೆ ಎರಡು ದಿನವಾದರೂ ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು. ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜು ಪ್ರಾಂಶುಪಾಲ ಪ್ರೊ.ಮೇಜರ್ ರಾಘವ ಬಿ. ಮಾತನಾಡಿ, ಇತ್ತೀಚಿನ ದಿನಗಳಲ್ಲಿ ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವ ಮಂದಿ ಸಾಹಿತ್ಯ ಕ್ಷೇತ್ರದ ಬೆಳವಣಿಗೆಗೆ ಹೆಚ್ಚು ಪ್ರೋತ್ಸಾಹ ನೀಡುತ್ತಿರುವುದು ಗಮನಾರ್ಹವಾಗಿದೆ. ಶಿಕ್ಷಕರು ಕೂಡ ಸಾಹಿತ್ಯ ರಚಿಸಲು ವಿದ್ಯಾರ್ಥಿಗಳಿಗೆ ಉತ್ತೇಜನ ನೀಡಬೇಕು ಮತ್ತು ಸ್ವತ: ತಾವೂ ಸಾಹಿತ್ಯ ಕ್ಷೇತ್ರಕ್ಕೆ ಕೊಡುಗೆಗಳನ್ನು ನೀಡಬೇಕು ಎಂದರು.

“ಕಥಾಂಜಲಿ” ಪುಸ್ತಕದ ಬರಹಗಾರ ಎಂ.ಶ್ರೀಧರ್ ಹೂವಲ್ಲಿ ಮಾತನಾಡಿ, ದಿನದಿಂದ ದಿನಕ್ಕೆ ಓದುಗರ ಸಂಖ್ಯೆ ಕಡಿಮೆಯಾಗುತ್ತಿದೆ. ಜ್ಞಾನಾರ್ಜನೆಗೆ ಪೂರಕವಾಗಿರುವ ಪುಸ್ತಕ ಮತ್ತು ಪತ್ರಿಕೆಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಪುಸ್ತಕಗಳು ಪ್ರತಿಯೊಬ್ಬರ ಬದುಕಿನ ಅವಿಭಾಜ್ಯ ಅಂಗವಾಗಬೇಕು ಎಂದು ತಿಳಿಸಿದರು. ಸಮಾಜ ಸೇವಕರು ಮತ್ತು ದಾನಿಗಳಾದ ಆಯಲಪಂಡ ಪುಷ್ಪ ಪೂಣಚ್ಚ ಹಾಗೂ ದಮಯಂತಿ ಪೊನ್ನಪ್ಪ ಉಪಸ್ಥಿತರಿದ್ದರು. ಪತ್ರಕರ್ತ ವಿನೋದ್ ಮೂಡಗದ್ದೆ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು ಹಾಗೂ ಲೇಖಕರ ಪರಿಚಯ ಮಾಡಿದರು. ಪತ್ರಕರ್ತ ಕಿಶೋರ್ ರೈ ಕತ್ತಲೆಕಾಡು ಸ್ವಾಗತಿಸಿದರು. ವಿದ್ಯಾರ್ಥಿನಿ ಮಿನ್ನಂಡ ಚೋಂದಮ್ಮ ಪ್ರಾರ್ಥಿಸಿದರು. ಇದೇ ಸಂದರ್ಭ ಕೊಡವ ಮಕ್ಕಡ ಕೂಟ ಹೊರ ತಂದಿರುವ “ಆಟ್ ಪಾಟ್ ಪಡಿಪು” ಪುಸ್ತಕದ ಏಳನೇ ಆವೃತ್ತಿಯನ್ನು ಕೂಟದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಅವರು ಉಚಿತವಾಗಿ ವಿತರಿಸಿದರು.