ಚೆಟ್ಟಳ್ಳಿ, ಆ .೧೫: ವಿಶ್ವದ ಏಳು ಖಂಡಗಳ ಅತಿ ಎತ್ತರದ ಶಿಖರಗಳನ್ನು ಏರುವ ಮಹತ್ವಾಕಾಂಕ್ಷೆಯ ಗುರಿಯೊಂದಿಗೆ ಸಾಹಸಯಾನ ಕೈಗೊಂಡಿರುವ ಕೊಡಗಿನ ಜಮ್ಮಡ ಪ್ರೀತ್ ಅಪ್ಪಯ್ಯ ಅವರು, ಸ್ವಾತಂತ್ರö್ಯ ದಿನವಾದ ಆಗಸ್ಟ್ ೧೫ ರಂದು ಆಸ್ಟೆçÃಲಿಯಾ ಖಂಡದ ಅತಿ ಎತ್ತರದ ಮೌಂಟ್ ಕೊಸ್ಸಿಯಸ್ಕೊವನ್ನು (ಸಮುದ್ರ ಮಟ್ಟದಿಂದ ೭,೩೧೦ ಅಡಿ) ಕೊಡವ ಸಾಂಪ್ರದಾಯಿಕ ಉಡುಪನ್ನು ಧರಿಸಿ ಏರಿ ಸಾಧನೆ ಮಾಡಿದ್ದಾರೆ.

ಆಗಸ್ಟ್ ೧೦ ರಿಂದ ೧೯ರವರೆಗೆ ನಡೆಯುತ್ತಿರುವ ಶಿಖರಾರೋಹಣ ಸಾಹಸದಲ್ಲಿ ಆಗಸ್ಟ್ ೧೫ರ ಸ್ವಾತಂತ್ರö್ಯ ದಿನವನ್ನು ವಿಶೇಷವಾಗಿ ಆಯ್ಕೆ ಮಾಡಿಕೊಂಡ ಪ್ರೀತ್ ಅಪ್ಪಯ್ಯ ಅವರು, ಪರ್ವತದ ಕಠಿಣ ಹಾದಿಯನ್ನು ಕ್ರಮಿಸಿ ಶಿಖರದ ತುದಿ ತಲುಪಿದರು. ಹಿಮಾವೃತ ವಾತಾವರಣ ಹಾಗೂ ಮೈ ಕೊರೆಯುವ ಚಳಿಗಾಳಿಯ ನಡುವೆಯೂ ಭಾರತದ ತ್ರಿವರ್ಣ ಧ್ವಜವನ್ನು ಎತ್ತಿಹಿಡಿದರು.

ಸ್ವಾತಂತ್ರ‍್ಯ ದಿನದಂದು ವಿದೇಶಿ ನೆಲದ ಶಿಖರದ ಮೇಲೆ ಭಾರತದ ತ್ರಿವರ್ಣ ಧ್ವಜವನ್ನು ಹಾರಿಸುವ ಮೂಲಕ ಪ್ರೀತ್ ಅಪ್ಪಯ್ಯ ಅವರು ದೇಶಪ್ರೇಮವನ್ನು ವಿಶಿಷ್ಟ ರೀತಿಯಲ್ಲಿ ಅಭಿವ್ಯಕ್ತಿಸಿದ್ದಾರೆ. ಅದರಲ್ಲೂ ಕೊಡವ ಸಾಂಪ್ರದಾಯಿಕ ಉಡುಪಿನಲ್ಲಿ ಶಿಖರಾರೋಹಣ ನಡೆಸಿರುವುದು ಈ ಸಾಧನೆಗೆ ವಿಶೇಷ ಮೆರುಗು ನೀಡಿದೆ.

ಏಳು ಶಿಖರಗಳತ್ತ ಮಹತ್ವಾಕಾಂಕ್ಷೆಯ ಪಯಣ

ಜಮ್ಮಡ ಪ್ರೀತ್ ಅಪ್ಪಯ್ಯ ಅವರ ಈ ಸಾಹಸವು ಕೇವಲ ಮೌಂಟ್ ಕೊಸ್ಸಿಯಸ್ಕೊ ಶಿಖರಾರೋಹಣಕ್ಕೆ ಸೀಮಿತವಾಗಿಲ್ಲ. ವಿಶ್ವದ ಏಳು ಖಂಡಗಳ ಅತ್ಯುನ್ನತ ಶಿಖರಗಳನ್ನು ಏರುವ ‘ಸೆವೆನ್ ಸಮಿಟ್ಸ್’ ಎಂಬ ಮಹತ್ವಾಕಾಂಕ್ಷೆಯ ಗುರಿಯ ಭಾಗವಾಗಿದೆ.

ಈ ಸಾಹಸಯಾನದ ಭಾಗವಾಗಿ ಅವರು ಈಗಾಗಲೇ ಎರಡು ಪ್ರಮುಖ ಶಿಖರಗಳನ್ನು ಏರಿದ್ದಾರೆ. ೨೦೨೩ರಲ್ಲಿ ಆಫ್ರಿಕಾ ಖಂಡದ ಅತಿ ಎತ್ತರದ ಶಿಖರ ಮೌಂಟ್ ಕಿಲಿಮಂಜಾರೋ (೧೯,೩೪೧ ಅಡಿ)ಏರಿದ ಅವರು, ೨೦೨೪ರಲ್ಲಿ ಯುರೋಪ್ ಖಂಡದ ಅತಿ ಎತ್ತರದ ಶಿಖರ ಮೌಂಟ್ ಎಲ್ಬçಸ್‌ಅನ್ನು(೧೮,೫೧೦ ಅಡಿ) ಯಶಸ್ವಿಯಾಗಿ ಏರಿದ್ದರು.

ಇದೀಗ ಆಸ್ಟೆçÃಲಿಯಾದ ಮೌಂಟ್ ಕೊಸ್ಸಿಯಸ್ಕೊ ಏರಿಕೆಯ ಮೂಲಕ ತಮ್ಮ ‘ಸೆವೆನ್ ಸಮಿಟ್ಸ್’ ಗುರಿಯತ್ತ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದ್ದಾರೆ.

ಶೂಟಿಂಗ್‌ನಲ್ಲೂ ಸಾಧನೆಗೈದಿರುವ ಪ್ರೀತ್

ಪರ್ವತಾರೋಹಣದ ಜತೆಗೆ ಜಮ್ಮಡ ಪ್ರೀತ್ ಅಪ್ಪಯ್ಯ ಅವರು ಶೂಟಿಂಗ್ ಕ್ರೀಡೆಯಲ್ಲೂ ಗಮನಾರ್ಹ ಸಾಧನೆ ಮಾಡಿದ್ದಾರೆ. ೨೦೨೪ರಲ್ಲಿ ಶೂಟಿಂಗ್ ಕ್ರೀಡೆಯಲ್ಲಿ ತಮ್ಮ ಪಯಣ ಆರಂಭಿಸಿದ ಅವರು ಮೈಸೂರು ಸ್ಪೋರ್ಟ್ಸ್ ಶೂಟಿಂಗ್ ಅಕಾಡೆಮಿಯಲ್ಲಿ ತರಬೇತಿ ಪಡೆದಿದ್ದಾರೆ. ೨೦೨೬ರ ೧೪ನೇ ಕರ್ನಾಟಕ ರಾಜ್ಯ ಶೂಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಎರಡು ಚಿನ್ನದ ಪದಕಗಳನ್ನು ಗೆದ್ದು ಗಮನ ಸೆಳೆದಿದ್ದಾರೆ. ೧೦ ಮೀಟರ್ ಏರ್ ರೈಫಲ್‌ನ ಪಾಯಿಂಟ್ ೧೭೭ ಓಪನ್ ಸೈಟ್ ವಿಭಾಗದ ಸೀನಿಯರ್ ಮಾಸ್ಟರ್ ಮಹಿಳಾ ಹಾಗೂ ಮಹಿಳಾ ವಿಭಾಗಗಳಲ್ಲಿ ಚಿನ್ನದ ಪದಕ ಗಳಿಸಿದ್ದಾರೆ. ಪರ್ವತಾರೋಹಣಕ್ಕೆ ದೈಹಿಕ ಸಾಮರ್ಥ್ಯದ ಜತೆಗೆ ಮಾನಸಿಕ ದೃಢತೆ, ನಿರಂತರ ತರಬೇತಿ ಮತ್ತು ಆತ್ಮವಿಶ್ವಾಸ ಅಗತ್ಯ. ಇಂತಹ ಸವಾಲುಗಳನ್ನು ಸ್ವೀಕರಿಸಿ ಮುನ್ನಡೆಯುತ್ತಿರುವ ಜಮ್ಮಡ ಪ್ರೀತ್ ಅಪ್ಪಯ್ಯ ಅವರು ಸ್ವಾತಂತ್ರ‍್ಯ ದಿನದಂದು ಆಸ್ಟೆçÃಲಿಯಾ ಶಿಖರದ ತುತ್ತತುದಿಯಲ್ಲಿ ಭಾರತದ ತ್ರಿವರ್ಣ ಧ್ವಜವನ್ನು ಎತ್ತಿಹಿಡಿದು ದೇಶಪ್ರೇಮ, ಸಾಹಸ ಮತ್ತು ಕೊಡಗಿನ ಹೆಮ್ಮೆಯನ್ನು ಪ್ರತಿಬಿಂಬಿಸಿದ್ದಾರೆ. - ಪುತ್ತರಿರ ಕರುಣ್ ಕಾಳಯ್ಯ