ಮಡಿಕೇರಿ. ಆ. ೧೪ : ಕಲೆ, ಸಾಹಿತ್ಯ, ಗಂಗೀತ ಎಲ್ಲರನ್ನೂ ಸಮಾನವಾಗಿ ಕಾಣುತ್ತದೆ; ಈ ಕ್ಷೇತ್ರ ಮಾತ್ರ ಸಮಾಜದಲ್ಲಿ ಎಲ್ಲರನ್ನೂ ಒಟ್ಟಾಗಿ ಕೊಂಡೊಯ್ಯಬಲ್ಲದು ಎಂದು ಗಾಯಕ ಶಕ್ತಿಪತ್ರಿಕೆ ಸಂಪಾದಕ ಜಿ. ಚಿದ್ವಿಲಾಸ್ ಅಭಿಪ್ರಾಯಪಟ್ಟರು.
ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್,ಕೊಡಗು ಜಿಲ್ಲಾ ಲೇಖಕ ಮತ್ತು ಕಲಾವಿದರ ಬಳಗ ಹಾಗೂ ಕೊಡಗು ಪತ್ರಿಕಾ ಭವನ ಟ್ರಸ್ಟ್ ಸಂಯುಕ್ತಾಶ್ರಯದಲ್ಲಿ ಜಿಲ್ಲೆಯ ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ನಗರದ ಪತ್ರಿಕಾ ಭವನದಲ್ಲಿ ಆಯೋಜಿಸಲಾಗಿದ್ದ ಗಾನ ಕೋಗಿಲೆ ಎಸ್.ಜಾನಕಿ ಅವರಿಗೆ ಪುಷ್ಪ ನಮನ, ನುಡಿ ನಮನ, ಗಾನ ನಮನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಸ್ತುತ ಧರ್ಮದ ತಿರುಳನ್ನು ಅರಿಯದ ಜನರಿಂದ ಧರ್ಮ ಧರ್ಮಗಳ ನಡುವೆ ಕಂದಕ ಸೃಷ್ಟಿಯಾಗುತ್ತಿದೆ;ಧರ್ಮದ ಹೆಸರಿನಲ್ಲಿ ಮನಸುಗಳನ್ನು ಒಡೆಯುವ ಪ್ರಯತ್ನ ನಡೆಯುತ್ತಿದೆ ಎಂದು ವಿಷಾದಿಸಿದ ಚಿದ್ವಿಲಾಸ್ ಕಲೆ ಸಾಹಿತ್ಯಗಳು, ಸಂಗೀತ ಮಾತ್ರ ಸಮಾಜದಲ್ಲಿ ಸಮಾನತೆಯನ್ನು ಮೂಡಿಸುತ್ತವೆ.ಕಲೆ ಸಾಹಿತ್ಯ ಸಂಗೀತ ಜಾತಿ ಧರ್ಮವನ್ನು ಮೀರಿದ ಶಕ್ತಿಯಾಗಿದ್ದು,ಇವು ಎಲ್ಲರನ್ನೂ ಒಂದೇ ರೀತಿಯಾಗಿ ಗುರುತಿಸುತ್ತದೆ ಎಂದು ಹೇಳಿದರು. ಕರ್ನಾಟಕ ಹಾಗೂ ದಕ್ಷಿಣ ಭಾರತದ ಕಲಾವಿದರಿಗೆ ದೇಶದಲ್ಲಿ ಸೂಕ್ತ ಮನ್ನಣೆ ಸಿಗುತ್ತಿಲ್ಲ; ಸಂಗೀತದ ಮೂಲವಾದ ಶಾಸ್ತ್ರೀಯ ಸಂಗೀತದಲ್ಲಿ ಸಾಧನೆ ಮಾಡಿರುವ ಸಾಧಕರನ್ನೂ ಯಾರೂ ಗುರುತಿಸುವುದಿಲ್ಲ,ಅವರುಗಳು ನಿಧನರಾದರೆ ಅದು ದೊಡ್ಡ ಮಟ್ಟದಲ್ಲಿ ಪ್ರಚಾರವಾಗುವುದಿಲ್ಲ.ಚಲನಚಿತ್ರ ಗಾಯಕರಿಗೆ ಮಾತ್ರ ಗೌರವ ಮನ್ನಣೆಗಳು ಹೆಚ್ಚಾಗಿ ಸಿಗುತಿದ್ದು,ಅವರುಗಳನ್ನಾದರೂ ಸಮಾಜ,ಸರ್ಕಾರಗಳು ಗುರುತಿಸುವೆಯಲ್ಲ ಎಂಬದರಲ್ಲಷ್ಟೇ ನಾವು ತೃಪ್ತಿ ಪಡಬೇಕಿದೆ ಎಂದು ಅಭಿಪ್ರಾಯ ಪಟ್ಟ ಚಿದ್ವಿಲಾಸ್, ಎಸ್. ಜಾನಕಿ ಅವರು ಹಾಡಿದ ಭಕ್ತಿಗೀತೆಯೊಂದನ್ನು ಹಾಡಿ ಗಾನ ನಮನ ಸಲ್ಲಿಸಿದರು. ೪ಏಳನೇ ಪುಟಕ್ಕೆ
(ಮೊದಲ ಪುಟದಿಂದ) ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕ ನುಡಿಯಾಡಿದ ಜಿಲ್ಲಾ ಲೇಖಕ ಮತ್ತು ಕಲಾವಿದರ ಬಳಗದ ಅಧ್ಯಕ್ಷ ಟಿ.ಜಿ. ಪ್ರೇಮ್ ಕುಮಾರ್ ಸಂಗೀತ ಕ್ಷೇತ್ರದಲ್ಲಿ ಹದಿನೇಳು ಭಾಷೆಗಳಲ್ಲಿ ಸುಮಾರು ನಲ್ವತ್ತೆಂಟು ಸಾವಿರ ಗೀತೆಗಳನ್ನು ಹಾಡಿರುವ ಎಸ್. ಜಾನಕಿಯವರ ಕೊಡುಗೆ ಅಪಾರವಾದದ್ದು, ಅವರ ಅಗಲಿಕೆ ಸಂಗೀತ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ.ಜಾನಕಿ ಅವರ ಹೆಸರು ಸಂಗೀತ ಕ್ಷೇತ್ರದಲ್ಲಿ ಅಳಿಸಲಾಗದ ಹೆಸರಾಗಿ ಉಳಿದುಕೊಳ್ಳಲಿದೆ. ಇಂದಿನ ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧ ಭಾಗಗಳಿಂದ ಗಾಯಕರು ಪಾಲ್ಗೊಂಡಿದ್ದಾರೆ ಎಂದು ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಕಸಾಪ ಅಧ್ಯಕ್ಷ ಎಂ.ಪಿ.ಕೇಶವ ಕಾಮತ್ ವಹಿಸಿದ್ದರು. ಕಾರ್ಯಕ್ರಮದ ಆರಂಭದಲ್ಲಿ ಎಸ್. ಜಾನಕಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮೌನಾಚರಣೆ ಮೂಲಕ ಸಂತಾಪ ಸೂಚಿಸಲಾಯಿತು.ಜಿಲ್ಲೆಯ ವಿವಿಧೆಡೆಯ ನಲ್ವತ್ತಕ್ಕೂ ಅಧಿಕ ಗಾಯಕರು ಹಾಡಿನ ಮೂಲಕ ಜಾನಕಿ ಅವರಿಗೆ ಗಾನ ನಮನ ಸಲ್ಲಿಸಿದರು.
ಕೊಡಗು ಜಿಲ್ಲಾ ಸಹಮತ ವೇದಿಕೆ, ಕೊಡಗು ಪತ್ರಕರ್ತರ ಸಂಘ, ಮಡಿಕೇರಿಯ ಲಯನ್ಸ್ ಸಂಸ್ಥೆ, ಕೊಡಗು ಜಿಲ್ಲಾ ಮಹಿಳಾ ಬರಹಗಾರರ ಸಂಘ, ಕೊಡಗು ಜಾನಪದ ಪರಿಷತ್ತು, ಸಮರ್ಥ ಕನ್ನಡಿಗರು, ಕೊಡಗು ಜಿಲ್ಲಾ ಅಹಿಂದ ಒಕ್ಕೂಟ, ರೋಟರಿ ವುಡ್ಸ್ ಮಡಿಕೇರಿ, ಗೌಡ ಮಹಿಳಾ ಒಕ್ಕೂಟ ಚೇರಂಬಾಣೆ, ಕರ್ನಾಟಕ ದಲಿತ ಸಂಘರ್ಷ ಸಮಿತಿ, ಕೊಡಗು ಕ್ರೈಸ್ತ ಸಹಕಾರ ಸಂಘ, ಕೊಡಗು ಜಿಲ್ಲಾ ಸ್ಕೌಟ್ಸ್-ಗೈಡ್ಸ್ ಸಂಸ್ಥೆ, ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ಕೊಡಗು ಗೌಡ ವಿದ್ಯಾ ಸಂಘ, ಕೊಡಗು ಜಿಲ್ಲಾ ಮಹಿಳಾ ಸಹಕಾರ ಬ್ಯಾಂಕ್ ಮತ್ತು ಚೌಡೇಶ್ವರಿ ದೇವಾಂಗ ಮಹಿಳಾ ಸಮಾಜದ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜನೆಗೊಂಡಿತ್ತು.
ಜಿಲ್ಲಾ ಲೇಖಕ ಹಾಗೂ ಕಲಾವಿದರ ಬಳಗದ ಗೌರವ ಕಾರ್ಯದರ್ಶಿ ಭಾರತಿ ರಮೇಶ್ ಪ್ರಾರ್ಥಿಸಿ,ಬರಹಗಾರ ರಂಜಿತ್ ಕವಲಪಾರ ನಿರೂಪಿಸಿದರು.ಪತ್ರಿಕಾ ಭವನ ಟ್ರಸ್ಟ್ ಖಜಾಂಚಿ ತಿಮ್ಮಪ್ಪ ಸ್ವಾಗತಿಸಿ,ಕಸಾಪ ಗೌರವ ಕಾರ್ಯದರ್ಶಿ ರೇವತಿ ರಮೇಶ್ ವಂದಿಸಿದರು.