ವೀರಾಜಪೇಟೆ, ಆ. ೧೩: ವೀರಾಜಪೇಟೆ ತಾಲೂಕು ಬಿಲ್ಲವ ಸೇವಾ ಸಂಘದ ವತಿಯಿಂದ ಬಿಟ್ಟಂಗಾಲದ ಅಂಬಟ್ಟಿಯಲ್ಲಿರುವ ಶ್ರೀ ನಾರಾಯಣ ಗುರು ಮಂದಿರದಲ್ಲಿ ಸೆಪ್ಟೆಂಬರ್ ೬ರಂದು ಶ್ರೀ ನಾರಾಯಣ ಗುರು ಜಯಂತಿ, ವಿಶೇಷ ಉಪನ್ಯಾಸ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಬಿ.ಎಂ. ಗಣೇಶ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೆ. ೬ರಂದು ಬೆಳಿಗ್ಗೆ ೧೦ ಗಂಟೆಗೆ ಶ್ರೀ ನಾರಾಯಣ ಗುರುಗಳ ಪ್ರತಿಮೆಗೆ ಪುಷ್ಪಾರ್ಚನೆ ಬಳಿಕ ಬೆಳಿಗ್ಗೆ ೧೦.೩೦ಕ್ಕೆ ಸಭಾ ಕಾರ್ಯಕ್ರಮ ನಡೆಯಲಿದೆ. ಅರ್ಹ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಿಸಲಾಗುವುದು ಎಂದರು.

ತಾ. ೨೮ರಂದು ಶ್ರೀ ನಾರಾಯಣ ಗುರು ಜಯಂತಿ ಆಚರಣೆ ಇರುವ ಹಿನ್ನೆಲೆಯಲ್ಲಿ ಅಂದು ಸಂಘದ ವತಿಯಿಂದ ಪೂಜೆ ನೆರವೇರಿಸಲಾಗುವುದು. ಸೆ. ೬ರಂದು ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಿಂದ ಆಗಮಿಸಲಿರುವ ಉಪನ್ಯಾಸಕ ಸ್ಮಿತೇಶ್ ಅವರು ಶ್ರೀ ನಾರಾಯಣ ಗುರುಗಳ ಜೀವನ, ತತ್ವ-ಸಿದ್ಧಾಂತಗಳು ಹಾಗೂ ಸಮಾಜದಲ್ಲಿದ್ದ ಅಸ್ಪೃಶ್ಯತೆಯನ್ನು ತೊಡೆದುಹಾಕಲು ಅವರು ನಡೆಸಿದ ಹೋರಾಟದ ಕುರಿತು ಉಪನ್ಯಾಸ ನೀಡಲಿದ್ದಾರೆ ಎಂದು ಮಾಹಿತಿ ನೀಡಿದರು.

ಪ್ರತಿವರ್ಷದಂತೆ ಈ ಬಾರಿಯೂ ವೀರಾಜಪೇಟೆ ಬಿಲ್ಲವ ಸೇವಾ ಸಂಘದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುವುದು. ೧೦ನೇ ತರಗತಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ. ೮೦ಕ್ಕಿಂತ ಹೆಚ್ಚು ಅಂಕ ಗಳಿಸಿರುವ ಜನಾಂಗದ ವಿದ್ಯಾರ್ಥಿಗಳು ಪುರಸ್ಕಾರಕ್ಕೆ ಅರ್ಹರಾಗಿರುತ್ತಾರೆ. ಅರ್ಹ ವಿದ್ಯಾರ್ಥಿಗಳು ಅಂಕಪಟ್ಟಿ, ಆಧಾರ್ ಕಾರ್ಡ್ ಹಾಗೂ ಒಂದು ಪಾಸ್‌ಪೋರ್ಟ್ ಅಳತೆಯ ಭಾವಚಿತ್ರವನ್ನು ಆ. ೨೦ರೊಳಗೆ ಕಳುಹಿಸಬೇಕು. ದಾಖಲೆಗಳನ್ನು ಜನಾರ್ಧನ್ ಪೂಜಾರಿ ೯೬೧೧೦ ೦೨೯೯೮ ಅಥವಾ ಗಣೇಶ್ ಪೂಜಾರಿ ೯೯೪೫೫ ೨೬೩೫೮ ಅವರ ವಾಟ್ಸಾö್ಯಪ್ ಸಂಖ್ಯೆಗೆ ಕಳುಹಿಸುವಂತೆ ಮಾಹಿತಿ ನೀಡಿದ್ದಾರೆ.

ಉಪಾಧ್ಯಕ್ಷ ಪುರುಷೋತ್ತಮ ಮಾತನಾಡಿ, ಬಿಲ್ಲವ ಜನಾಂಗದ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.

ಗೋಷ್ಠಿಯಲ್ಲಿ ಕಾರ್ಯದರ್ಶಿ ಜನಾರ್ಧನ, ನಿರ್ದೇಶಕರಾದ ನಾರಾಯಣ ಪೂಜಾರಿ, ಕಿಶೋರ್ ಪೂಜಾರಿ, ಹರೀಶ್ ಉಪಸ್ಥಿತರಿದ್ದರು.