ಮಡಿಕೇರಿ, ಆ. ೧೩: ಪೊನ್ನಂಪೇಟೆ ತಾಲೂಕಿನ ಅರ್ವತ್ತೋಕ್ಲು ಮೈಸೂರಮ್ಮ ನಗರಕ್ಕೆ ಆಗಮಿಸಿದ ನಿವೃತ್ತ ಯೋಧ ಹವಾಲ್ದಾರ್ ಗಿರೀಶ್ ಪಿ.ಜಿ ಅವರಿಗೆ ಗ್ರಾಮದ ಜನತೆ ಸ್ವಾಗತದ ಮೂಲಕ ಸ್ವಗ್ರಾಮಕ್ಕೆ ಬರಮಾಡಿಕೊಂಡರು.
ಮೈಸೂರಮ್ಮ ನಗರದ ನಿವಾಸಿಗಳಾದ ಗಣೇಶ ಮತ್ತು ಭಾಗ್ಯವತಿ ಅವರ ಪುತ್ರ ಗಿರೀಶ್ ಪಿ.ಜಿ ಅವರು ಭಾರತೀಯ ಸೇನೆಯಲ್ಲಿ ೨೨ ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ೨೦೦೩ ರಲ್ಲಿ ಸೇನೆಗೆ ಸೇರಿ ಗುಜರಾತ್, ಜಮ್ಮು, ಜಾರ್ಖಂಡ್, ಶ್ರೀನಗರ, ಪಾಲ್ಗಡ್ ಮತ್ತು ಮಧ್ಯಪ್ರದೇಶದಲ್ಲಿ ಸೇವೆ ಸಲ್ಲಿಸಿದ್ದಾರೆ. ಭಾರತದ ವಿದೇಶಿ ಶಾಂತಿ ಪಡೆಯಲ್ಲಿ ಸೇರಿ ಸೌತ್ ಆಫ್ರಿಕಾದಲ್ಲಿಯೂ ಕಾರ್ಯನಿರ್ವಹಿಸಿದ್ದಾರೆ.
ಇದೀಗ ನಿವೃತ್ತರಾಗಿ ಹುಟ್ಟೂರಿಗೆ ಆಗಮಿಸಿದ ಸಂದರ್ಭ ಊರಿನ ಕಿರಿಯರು, ಹಿರಿಯರು, ಮಾಜಿ ಯೋಧರು, ದಸರಾ ಸಮಿತಿ ಸದಸ್ಯರು, ಗೌರಿ ಗಣೇಶ ಹಬ್ಬದ ಸಮಿತಿಯವರು, ಮಹಿಳಾ ಸಂಘದವರು, ಸ್ವಾಗತಿಸಿ ಶುಭಕೋರಿದರು. ಈ ಸಂದರ್ಭದಲ್ಲಿ ಅವರ ಕುಟುಂಬದ ಸದಸ್ಯರು ಮಕ್ಕಳು ಭಾಗಿಯಾಗಿದ್ದರು.