ಪೊನ್ನಂಪೇಟೆ, ಆ. ೧೩: ಭಾರತ ಕಮ್ಯುನಿಸ್ಟ್ ಪಕ್ಷದ ಸಹಯೋಗದಲ್ಲಿ ಆಲ್ ಇಂಡಿಯಾ ದಲಿತ್ ರೈಟ್ಸ್ ಮೂವ್‌ಮೆಂಟ್ ವತಿಯಿಂದ ಹಮ್ಮಿಕೊಂಡಿರುವ ರಾಷ್ಟçವ್ಯಾಪಿ ರಾಜಕೀಯ ಅಭಿಯಾನದ ಅಂಗವಾಗಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪೊನ್ನಂಪೇಟೆ ಬಸ್ ನಿಲ್ದಾಣದಿಂದ ತಹಶೀಲ್ದಾರ್ ಕಚೇರಿಯವರೆಗೆ ಪಾದಯಾತ್ರೆ ನಡೆಸಲಾಯಿತು.

ಪಾದಯಾತ್ರೆಯ ಮುಂದಾಳತ್ವ ವಹಿಸಿದ್ದ ಭಾರತ ಕಮ್ಯುನಿಸ್ಟ್ ಪಕ್ಷದ ಕೊಡಗು ಉಸ್ತುವಾರಿ ಹಾಗೂ ರಾಜ್ಯ ಸಹ ಕಾರ್ಯದರ್ಶಿ ಸಂತೋಷ್ ಮಾತನಾಡಿ, ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಬಂದಾಗ ನಿರುದ್ಯೋಗಿ ಯುವಕರಿಗೆ ಎರಡು ಕೋಟಿ ಉದ್ಯೋಗ ದೊರಕಿಸಿಕೊಡುವ ಭರವಸೆ ನೀಡಿತ್ತು. ಅದು ಇಂದು ಹುಸಿಯಾಗಿದೆ. ನಿರುದ್ಯೋಗಿ ಯುವಕರ ಭವಿಷ್ಯಕ್ಕಾಗಿ ಸರ್ಕಾರ ಸೂಕ್ತ ವ್ಯವಸ್ಥೆ ಮಾಡಬೇಕು. ದೇಶದಾದ್ಯಂತ ರೈತರು ಬೆಳೆದ ಬೆಳೆಗೆ ಸೂಕ್ತ ಬೆಂಬಲ ಬೆಲೆ ಸಿಗುತ್ತಿಲ್ಲ, ಸ್ವಾಮಿನಾಥನ್ ಆಯೋಗ ರಚನೆ ಮಾಡಿದರೂ ಕೂಡ ಅದನ್ನು ಜಾರಿಗೊಳಿಸಲು ಸರ್ಕಾರ ನಿರ್ಲಕ್ಷö್ಯ ತೋರುತ್ತಿದೆ ಎಂದು ಆರೋಪಿಸಿದರು.

ಕೇಂದ್ರ ಸರ್ಕಾರ ರೈತರ ಸಾಲವನ್ನು ಮನ್ನಾ ಮಾಡುವ ವ್ಯವಸ್ಥೆಯನ್ನು ಕೂಡಲೇ ಮಾಡಬೇಕೆಂದು ಒತ್ತಾಯಿಸಿದರು. ಕೊಡಗು ಜಿಲ್ಲೆಯಾದ್ಯಂತ ನಿವೇಶನ ಮತ್ತು ವಸತಿರಹಿತ ಕುಟುಂಬಗಳಿಗೆ ಸರ್ಕಾರ ಮತ್ತು ಜಿಲ್ಲಾಡಳಿತ ಕೂಡಲೇ ವಿವಿಧ ವಸತಿ ಯೋಜನೆ ಸೌಲಭ್ಯಗಳ ಮುಖಾಂತರ ವಸತಿ ಕಲ್ಪಿಸಬೇಕು ಮತ್ತು ಜಿಲ್ಲೆಯಾದ್ಯಂತ ಮಾನವ ಮತ್ತು ವನ್ಯಜೀವಿ ಸಂಘರ್ಷ ನಡೆಯುತ್ತಿದ್ದು ಅಮಾಯಕರ ಸಾವನ್ನು ತಡೆಯಲು ಸೂಕ್ತ ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿದರು.

ಜಿಲ್ಲಾ ಕಾರ್ಯದರ್ಶಿ ರಫೀಕ್ ಮಾತನಾಡಿ, ಜನರಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಕೊಡುವ ಸಲುವಾಗಿ ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ದೇಶದಾದ್ಯಂತ ಈಗಾಗಲೇ ಪಾದಯಾತ್ರೆ ನಡೆಸಲಾಗುತ್ತಿದ್ದು, ಸೆಪ್ಟೆಂಬರ್ ೧ ರಂದು ಎಲ್ಲಾ ರಾಜ್ಯಗಳಿಂದ ಭಾರತ ಕಮ್ಯುನಿಸ್ಟ್ ಪಕ್ಷ ಹಾಗೂ ಆಲ್ ಇಂಡಿಯಾ ದಲಿತ್ ರೈಟ್ಸ್ ಮೂಮೆಂಟ್ ಸದಸ್ಯರು ದೆಹಲಿ ಚಲೋ ಆಂದೋಲನ ಹಮ್ಮಿಕೊಂಡಿರುತ್ತೇವೆ. ಇದಕ್ಕೆ ಸರಕಾರ ಸೂಕ್ತವಾಗಿ ಸ್ಪಂದಿಸಿ ನಮ್ಮ ಬೇಡಿಕೆಗಳನ್ನು ಈಡೇರಿಸಬೇಕೆಂದು ಹೇಳಿದರು. ರಮೇಶ್ ಮಾಯಮುಡಿ ಮಾತನಾಡಿ, ಸರ್ಕಾರ ದಲಿತರನ್ನು ನಿರಂತರವಾಗಿ ಕಡೆಗಣಿಸುತ್ತಾ ಬಂದಿದೆ. ದಲಿತರ ಮೇಲಿನ ದೌರ್ಜನ್ಯವನ್ನು ಕೂಡಲೇ ತಡೆದು ಸೂಕ್ತ ಪರಿಹಾರ ನೀಡುವಂತಾಗಬೇಕು ಎಂದರು. ನಂತರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಗ್ರಾಮ ಸಹಾಯಕ ಲಕ್ಷö್ಮಣ್ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.

ಈ ಸಂದರ್ಭ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಸುನಿಲ್, ಪೊನ್ನಂಪೇಟೆ ತಾಲೂಕು ಕಾರ್ಯದರ್ಶಿ ಶಾಂತಿ, ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಸೀತಾರಾಮ್, ಸುರೇಶ್, ಜಿಲ್ಲಾ ಸಹ ಕಾರ್ಯದರ್ಶಿ ಸುರೇಶ್, ಅಶೋಕ್, ತಿಮ್ಮ ಹಾಗೂ ಸದಸ್ಯರು ಹಾಜರಿದ್ದರು.