ಶನಿವಾರಸಂತೆ, ಆ. ೧೩: ಮಕ್ಕಳ ಸಾತ್ವಿಕ ಬದುಕಿಗೆ ಶರಣರ ವಚನಗಳು ದಾರಿ ದೀಪವಾಗಿದ್ದು, ಇಂದಿನ ವಿದ್ಯಾರ್ಥಿಗಳನ್ನು ಸಾತ್ವಿಕರಾಗಿ ಹಾಗೂ ಸಂಸ್ಕಾರವAತರಾಗಿ ಬೆಳೆಸಬೇಕಾದ ಅನಿವಾರ್ಯತೆ ಇದೆ ಎಂದು ಮಾದ್ರೆ ಗ್ರಾಮದ ಮುದ್ದಿನಕಟ್ಟೆ ಮಠದ ಅಭಿನವ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಹೇಳಿದರು. ಸಮೀಪದ ಕೊಡ್ಲಿಪೇಟೆಯಲ್ಲಿ ಕೊಡಗು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಹಾಗೂ ಕೊಡ್ಲಿಪೇಟೆ ಗಂಗಾ ವೀರಶೈವ ಮಹಿಳಾ ಸಮಾಜದ ವತಿಯಿಂದ ಅಧ್ಯಕ್ಷೆ ಮಂಜುಳಾ ಸುರೇಶ್ ಅವರ ಮನೆಯಂಗಳದಲ್ಲಿ ಆಯೋಜಿಸಿದ್ದ ‘ಮನೆಯಂಗಳದತ್ತ ಶರಣ ಸಾಹಿತ್ಯ’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಆಶೀರ್ವಚನ ನೀಡಿದರು.

ತಾಯಂದಿರು ಮಕ್ಕಳ ಬಾಲ್ಯದಿಂದಲೇ ವಚನಗಳ ಸಾರವನ್ನು ತಿಳಿಸಿಕೊಟ್ಟು ಬೆಳೆಸಿದರೆ, ಮುಂದೆ ಮಕ್ಕಳು ಹೆತ್ತವರು ಹಾಗೂ ಹಿರಿಯರ ಬಗ್ಗೆ ತಿರಸ್ಕಾರದ ಮನೋಭಾವ ಹೊಂದುವುದಿಲ್ಲ. ಹಿಂದಿನ ಕಾಲದಲ್ಲಿ ಪೂರ್ವಜರು ರಾಸಾಯನಿಕ ಮುಕ್ತ ದವಸ-ಧಾನ್ಯಗಳನ್ನು ಬೆಳೆಸಿ ಸೇವಿಸುತ್ತಾ ಆರೋಗ್ಯಕರ ಜೀವನ ನಡೆಸುತ್ತಿದ್ದರು. ಆದರೆ ಇಂದು ಮಣ್ಣು, ಜಲಮೂಲ ಹಾಗೂ ಪರಿಸರವನ್ನು ದುರ್ಬಳಕೆ ಮಾಡಿಕೊಂಡ ಪರಿಣಾಮ ಗಾಳಿ ಸೇರಿದಂತೆ ಎಲ್ಲವೂ ವಿಷಮಯ ವಾಗುತ್ತಿದೆ ಎಂದು ವಿಷಾದಿಸಿದರು. ಪರಿಸರ ಮಾಲಿನ್ಯ ಹಾಗೂ ಬದಲಾಗುತ್ತಿರುವ ಜೀವನಶೈಲಿಯಿಂದ ಯುವಜನಾಂಗದ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತಿದೆ. ಮುಂದಿನ ದಿನಗಳಲ್ಲಿ ಇದು ಗಂಭೀರ ಸಮಸ್ಯೆಗಳಿಗೆ ಕಾರಣವಾಗುವ ಸಾಧ್ಯತೆ ಇದೆ ಎಂದು ಸ್ವಾಮೀಜಿ ಎಚ್ಚರಿಸಿದರು.

ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಕಿರಿಕೊಡ್ಲಿ ಮಠದ ಸದಾಶಿವ ಸ್ವಾಮೀಜಿ ಮಾತನಾಡಿ, ಆಧುನಿಕ ಕಾಲಘಟ್ಟದಲ್ಲಿ ವಿಜ್ಞಾನದ ಬೆಳವಣಿಗೆ ಮನುಷ್ಯನ ಜೀವನದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿರುವ ಸಂದರ್ಭದಲ್ಲಿ ಶರಣರ ವಚನಗಳ ಸಾರ ಸಾತ್ವಿಕ ಜೀವನದತ್ತ ಮನುಷ್ಯರನ್ನು ಕರೆದೊಯ್ಯುತ್ತದೆ. ಶರಣ ಸಾಹಿತ್ಯ ಪರಿಷತ್ತಿನ ‘ಮನೆಯಂಗಳಕ್ಕೆ ಶರಣ ಸಾಹಿತ್ಯ’ ಕಾರ್ಯಕ್ರಮ ಅನನ್ಯವಾದುದು ಎಂದರು.

ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ.ಎಸ್. ಮೂರ್ತಿ ಪ್ರಾಸ್ತಾವಿಕವಾಗಿ ಮಾತನಾಡಿ, ಕಳೆದ ಹಲವು ವರ್ಷಗಳಿಂದ ನಿತ್ಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಶರಣ ಸಾಹಿತ್ಯ ಪರಿಷತ್ತು ಈ ಹಿಂದೆ ‘ಶಾಲೆಗಳೆಡೆಗೆ ವಚನಗಳ ನಡಿಗೆ’ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಇದೀಗ ಹಳ್ಳಿ ಹಾಗೂ ನಗರ ಪ್ರದೇಶಗಳ ಮನೆಯಂಗಳದತ್ತ ಶರಣ ಸಾಹಿತ್ಯದ ಆಶಯಗಳನ್ನು ಕೊಂಡೊಯ್ಯುವ ಮೂಲಕ ಜನಮಾನಸದಲ್ಲಿ ಬಿತ್ತನೆ ಮಾಡುತ್ತಿದೆ ಎಂದರು. ಗಂಗಾ ವೀರಶೈವ ಮಹಿಳಾ ಸಮಾಜದ ಅಧ್ಯಕ್ಷೆ ಮಂಜುಳಾ ಸುರೇಶ್ ಮಾತನಾಡಿದರು.

ಕಾರ್ಯಕ್ರಮದಲ್ಲಿ ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾ ಕಾರ್ಯದರ್ಶಿ ಬಿ. ನಟರಾಜು, ಮಹಡಿಮನೆ ಸುರೇಶ್, ಗಂಗಾ ವೀರಶೈವ ಸಮಾಜದ ಉಪಾಧ್ಯಕ್ಷೆ ಗೀತಾ ದಯಾಶಂಕರ್, ಕಾರ್ಯದರ್ಶಿ ತ್ರಿವೇಣಿ ಚಂದ್ರಶೇಖರ್, ನಿರ್ದೇಶಕರಾದ ಮಮತಾ ಸತೀಶ್, ಸುಶೀಲಾ, ದೀಪಿಕಾ, ಜ್ಞಾನೇಶ್ವರಿ, ಚಂದ್ರಾವತಿ, ಭವ್ಯ ವಸಂತ್, ದೀಪಿಕಾ ವಿನಾಯಕ್, ಲಲಿತಾ ಪ್ರಸನ್ನ ಸೇರಿದಂತೆ ಜ್ಯೋತಿ, ರಶ್ಮಿ, ಉಷಾ, ಲತಾ, ಶಾರದಾ, ರಾಜಾಮಣಿ, ರೂಪಾ ಮತ್ತಿತರರು ಉಪಸ್ಥಿತರಿದ್ದರು.