ಸೋಮವಾರಪೇಟೆ, ಆ. ೧೩: ತಾಲೂಕಿನ ವಿವಿಧ ಅಂಗನವಾಡಿಗಳಿಗೆ ಆಯ್ಕೆಯಾಗಿರುವ ೩ ಶಿಕ್ಷಕರು ಮತ್ತು ೧೩ ಸಹಾಯಕಿಯರಿಗೆ ಶಾಸಕ ಮಂತರ್ಗೌಡ ಅವರು ಕಾರ್ಯಾದೇಶ ಪತ್ರಗಳನ್ನು ವಿತರಿಸಿದರು.
ಇಲ್ಲಿನ ಶಾಸಕರ ಕಚೇರಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕಾರ್ಯಾದೇಶ ಪತ್ರಗಳನ್ನು ವಿತರಿಸಿ ಮಾತನಾಡಿದ ಅವರು, ಮಕ್ಕಳ ಆರೈಕೆಯಲ್ಲಿ ತಾರತಮ್ಯ ಮಾಡಬಾರದು. ಎಲ್ಲಾ ಮಕ್ಕಳನ್ನೂ ತಮ್ಮದೇ ಮಕ್ಕಳಂತೆ ನೋಡಿಕೊಳ್ಳಬೇಕು. ಸರ್ಕಾರದಿಂದ ಮಕ್ಕಳಿಗೆ ಕೊಡುವ ಪೌಷ್ಟಿಕ ಆಹಾರವನ್ನು ನಿಯಮಿತವಾಗಿ ಹಾಗೂ ನಿಗದಿತ ಪ್ರಮಾಣದಲ್ಲೇ ಕೊಡಬೇಕು. ಮೋಸ ಮಾಡುವ ಕೃತ್ಯಕ್ಕೆ ಕೈಹಾಕಿದರೆ ಸಿಕ್ಕಿರುವ ಕೆಲಸವನ್ನು ಕಳೆದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು. ಅಂಗನವಾಡಿಯಲ್ಲಿ ಮಕ್ಕಳ ಸಂಖ್ಯೆಯನ್ನು ಹೆಚ್ಚು ಬರೆದು ಸರ್ಕಾರಕ್ಕೆ ವಂಚನೆ ಮಾಡಲು ಮುಂದಾದರೆ, ಕಠಿಣ ಕ್ರಮ ಕೈಗೊಳ್ಳಲಾಗುವುದು. ಈ ಬಗ್ಗೆ ಹಲವು ಕಡೆಗಳಿಂದ ಆರೋಪಗಳು ಕೇಳಿಬಂದಿವೆ. ಮುಂದೆ ತಪ್ಪಾದರೆ ಅಧಿಕಾರಿಗಳು ಮತ್ತು ಅಂಗವಾಡಿ ಶಿಕ್ಷಕರು ನೇರಹೊಣೆ ಹೊರಬೇಕಾಗುತ್ತದೆ ಎಂದು ಎಚ್ಚರಿಸಿದರು.
ಅಂಗನವಾಡಿ ಕಟ್ಟಡಗಳು ಸುಭದ್ರವಾಗಿರಬೇಕು. ಕಟ್ಟಡದಲ್ಲಿ ಸಮಸ್ಯೆ ಕಂಡುಬAದರೆ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು ಎಂದು ಅಂಗನವಾಡಿ ಶಿಕ್ಷಕರಿಗೆ ಸೂಚಿಸಿದರು. ಈ ಸಂದರ್ಭ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖಾಧಿಕಾರಿ ಶ್ರೀದೇವಿ ಮುಧೋಳ್, ಸಿಬ್ಬಂದಿಗಳು, ತಾ.ಪಂ. ಮಾಜೀ ಅಧ್ಯಕ್ಷ ಕೆ.ಎಂ. ಲೋಕೇಶ್, ಎಸ್.ಎಂ.ಡಿಸಿಲ್ವಾ, ಕೆಡಿಪಿ ಸದಸ್ಯ ಜಗದೀಶ್, ಅಕ್ರಮ ಸಕ್ರಮ ಸಮಿತಿ ಸದಸ್ಯ ಜನಾರ್ದನ್, ಪ್ರಮುಖರಾದ ಚೇತನ್, ಡಿ.ಯು. ಕಿರಣ್, ಇಂದ್ರೇಶ್, ಜೇಕಬ್ ಸೈಮನ್ ಸೇರಿದಂತೆ ಇತರರು ಇದ್ದರು.