ಮಡಿಕೇರಿ, ಆ. ೧೩: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವ್ಯಾಪ್ತಿಯ ನಗರದ ಕರ್ನಾಟಕ ಸುವರ್ಣ ಸಮುಚ್ಚಯ ಭವನ, ಗಾಂಧಿ ಸ್ಮಾರಕ ಉದ್ಯನವನ ಹಾಗೂ ಕುಶಾಲನಗರದ ಕಲಾಭವನ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸುವಂತೆ ಸಂಬAಧಪಟ್ಟ ಇಂಜಿನಿಯರ್‌ಗಳಿಗೆ ಜಿಲ್ಲಾಧಿಕಾರಿ ಎಸ್.ಜೆ. ಸೋಮಶೇಖರ್ ಸ್ಪಷ್ಟ ನಿರ್ದೇಶನ ನೀಡಿದ್ದಾರೆ.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ವಿವಿಧ ಕಾಮಗಾರಿಗಳ ಪ್ರಗತಿ ಬಗ್ಗೆ ಮಾಹಿತಿ ಪಡೆದು ಅವರು ಮಾತನಾಡಿದರು. ಕುಶಾಲನಗರದ ಕಲಾಭವನದ ಕಟ್ಟಡ ಕಾಮಗಾರಿ ಪೂರ್ಣಗೊಂಡಿದೆ. ಧ್ವನಿವರ್ಧಕ, ಬೆಳಕು ವ್ಯವಸ್ಥೆ ಸೇರಿದಂತೆ ವಿವಿಧ ಕಾಮಗಾರಿ ಕೈಗೊಳ್ಳಲು ಹೆಚ್ಚುವರಿಯಾಗಿ ರೂ. ೧೦ ಲಕ್ಷ ಬೇಕಾಗಿದ್ದು, ಇದನ್ನು ಬಿಡುಗಡೆಗೊಳಿಸ ಲಾಗುವುದು. ಆ ನಿಟ್ಟಿನಲ್ಲಿ ತ್ವರಿತವಾಗಿ ಕಾಮಗಾರಿ ಪೂರ್ಣಗೊಳಿಸುವಂತೆ ಕೆಆರ್‌ಐಡಿಎಲ್ ಇಂಜಿನಿಯರ್‌ಗೆ ಸೂಚಿಸಿದರು.

ಕೆಆರ್‌ಐಡಿಎಲ್ ಇಂಜಿನಿಯರ್ ರಘುನಂದನ್ ಅವರು ಆದಷ್ಟು ಶೀಘ್ರ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ಮಾಹಿತಿ ನೀಡಿದರು. ನಗರದ ಮೈಸೂರು ರಸ್ತೆಯಲ್ಲಿ ನಿರ್ಮಾಣವಾಗುತ್ತಿರುವ ಕರ್ನಾಟಕ ಸುವರ್ಣ ಸಮುಚ್ಚಯ ಭವನಕ್ಕೆ ಇನ್ನೂ ಒಂದು ಕೋಟಿಗೂ ಹೆಚ್ಚು ಹಣ ಬೇಕಿದ್ದು, ಒಂದುವರೆ ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಇಂಜಿನಿಯರ್ ಪ್ರಭು ಮಾಹಿತಿ ನೀಡಿದರು.

ಈ ಸಂದರ್ಭ ಕನ್ನಡ ಮತ್ತು ಸಂಸ್ಕೃತಿಕ ಇಲಾಖೆಯ ಜಂಟಿ ನಿರ್ದೇಶಕಿ ನಿರ್ಮಲಾ ಮಠಪತಿ ಮಾತನಾಡಿ, ಕರ್ನಾಟಕ ಸುವರ್ಣ ಸಮುಚ್ಚಯ ಭವನ ಬಾಕಿ ಇರುವ ಕಾಮಗಾರಿಗೆ ರೂ. ೮೨ ಲಕ್ಷ ಅನುದಾನ ಮೀಸಲಿರಿಸಲಾಗಿದೆ. ಕಾಮಗಾರಿಯನ್ನು ಆದಷ್ಟು ಶೀಘ್ರ ಪೂರ್ಣಗೊಳಿಸಬೇಕು ಎಂದು ಕೋರಿದರು.

ಗಡಿ ಅಭಿವೃದ್ಧಿ ಪ್ರಾಧಿಕಾರದವರು ೧.೫೦ ಕೋಟಿ ವಾಪಸ್ಸು ಪಡೆದಿದ್ದು, ಈ ಅನುದಾನ ಬಿಡುಗಡೆಗೆ ಕೋರುವಂತಾಗಬೇಕು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕರು ಮನವಿ ಮಾಡಿದರು.

ಈ ಸಂದರ್ಭ ಮಾತನಾಡಿದ ಜಿಲ್ಲಾಧಿಕಾರಿ ಎಸ್.ಜೆ. ಸೋಮಶೇಖರ್, ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. ಕರ್ನಾಟಕ ಸುವರ್ಣ ಸಮುಚ್ಚಯ ಭವನ ಕಾಮಗಾರಿ ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದು, ಹೆಚ್ಚಿನ ಅನುದಾನವನ್ನು ಈಗಾಗಲೇ ಬಿಡುಗಡೆ ಮಾಡಲಾಗಿದೆ. ಆದ್ದರಿಂದ ತ್ವರಿತವಾಗಿ ಕಾಮಗಾರಿ ಪೂರ್ಣಗೊಳಿಸುವಂತೆ ನಿರ್ದೇಶನ ನೀಡಿದರು.

ನಗರದ ಗಾಂಧಿ ಮೈದಾನದ ಬಳಿ ನಿರ್ಮಿಸಲಾಗುತ್ತಿರುವ ಗಾಂಧಿ ಸ್ಮಾರಕ ಉದ್ಯಾನವನ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಬೇಕು. ಆ ನಿಟ್ಟಿನಲ್ಲಿ ಕ್ರಮ ವಹಿಸುವಂತೆ ಕೆಆರ್‌ಐಡಿಎಲ್ ಇಂಜಿನಿಯರ್‌ಗೆ ಜಿಲ್ಲಾಧಿಕಾರಿ ಸೂಚಿಸಿದರು.

ಮೊದಲ ಹಂತದಲ್ಲಿ ರೂ. ೫೦ ಲಕ್ಷ ಬಿಡುಗಡೆಯಾಗಿದ್ದು, ಎರಡನೇ ಹಂತದಲ್ಲಿ ರೂ. ೨೫ ಲಕ್ಷ ಬಿಡುಗಡೆಯಾಗಿದೆ. ಆ ದಿಸೆಯಲ್ಲಿ ಮುಂದುವರೆದ ಕಾಮಗಾರಿ ಪೂರ್ಣಗೊಳಿಸುವಂತೆ ಜಿಲ್ಲಾಧಿಕಾರಿ ಸೂಚಿಸಿದರು.

ಈ ಬಗ್ಗೆ ಮಾಹಿತಿ ನೀಡಿದ ಕೆಆರ್‌ಐಡಿಎಲ್ ಇಂಜಿನಿಯರ್ ರಘುನಂದನ್, ಎರಡು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಲಾಗುವುದೆಂದು ತಿಳಿಸಿದರು.

ಬಳಿಕ ಜಿಲ್ಲಾಧಿಕಾರಿ ಎಸ್.ಜೆ. ಸೋಮಶೇಖರ್ ಮಾತನಾಡಿ, ಇಂಜಿನಿಯರ್‌ಗಳು ಎಲ್ಲವನ್ನು ಒಂದೇ ಅಳತೆಯಲ್ಲಿ ಅಳೆಯಬಾರದು, ಕಲೆ, ಸಾಹಿತ್ಯ, ಸಂಸ್ಕೃತಿ ಬಗ್ಗೆ ಅಭಿಮಾನ ಇರಬೇಕು. ಕನ್ನಡ ಭಾಷೆ, ನಾಡು, ನುಡಿ, ಸಾಹಿತ್ಯ-ಸಂಸ್ಕೃತಿ ಕಲೆಗಳ ಬಗ್ಗೆ ಗೌರವ ಇರಬೇಕು. ಆ ನಿಟ್ಟಿನಲ್ಲಿ ಆತ್ಮತೃಪ್ತಿಯಿಂದ ಕೆಲಸ ಮಾಡುವಂತೆ ಇಂಜಿನಿಯರ್‌ಗಳಿಗೆ ಕಿವಿಮಾತು ಹೇಳಿದರು.

ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಗಿರೀಶ್, ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಸಚಿನ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಭೂ ವಿಜ್ಞಾನಿ ಸಂದೀಪ್ ಹಲವು ಮಾಹಿತಿ ನೀಡಿದರು.