ವೀರಾಜಪೇಟೆ, ಆ. ೧೩: ಕೊಡಗಿನ ಕಲ್ಪತರು ಎಂದೇ ಹೆಸರಾದ ಗುಂಡುಗುಟ್ಟಿ ಮಂಜುನಾಥಯ್ಯ ಅವರು ಪ್ರಕೃತಿಗೆ ಹೆಚ್ಚು ಒತ್ತು ನೀಡುವ ಮೂಲಕ ಸಂಕಷ್ಟದಲ್ಲಿದ್ದ ಕೃಷಿಕರಿಗೆ ಸಹಕಾರ ನೀಡುತ್ತಿದ್ದ ಮಹಾನ್ ವ್ಯಕ್ತಿಯಾಗಿದ್ದರು ಎಂದು ಚೆಟ್ಟಳ್ಳಿ ಕಾಫಿ ಬೆಳೆಗಾರ ಹೆಚ್.ಎಸ್. ತಿಮ್ಮಪ್ಪಯ್ಯ ಹೇಳಿದರು.

ವೀರಾಜಪೇಟೆ ಸಮೀಪದ ಅರಮೇರಿ ಕಳಂಚೇರಿ ಮಠದ ಶ್ರೀ ಲಿಂಗರಾಜೇAದ್ರ ಭವನದಲ್ಲಿ ನಡೆದ ‘ಹೊಂಬೆಳಕು ಕಿರಣ’ ೨೪೬ನೇ ಮಾಸಿಕ ತತ್ವಚಿಂತನಾಗೋಷ್ಠಿಯಲ್ಲಿ ‘ಕೊಡಗಿನ ರೂವಾರಿಗಳು’ ವಿಷಯದ ಕುರಿತು ಉಪನ್ಯಾಸ ನೀಡಿದ ಅವರು, ಕೊಡಗು ಪ್ರತ್ಯೇಕ ರಾಜ್ಯವಾಗಿದ್ದ ಸಂದರ್ಭ ಸುಂಟಿಕೊಪ್ಪ ಸಮೀಪದ ಗುಂಡುಗುಟ್ಟಿ ಗ್ರಾಮದ ಮಂಜುನಾಥಯ್ಯ ಅವರು ಶಾಸಕರಾಗಿದ್ದರು. ಅವರ ಅವಧಿಯಲ್ಲಿ ಹಲವು ಶಾಲೆಗಳು ನಿರ್ಮಾಣಗೊಂಡಿದ್ದು, ಇಂದು ಸಾವಿರಾರು ವಿದ್ಯಾರ್ಥಿಗಳು ಶಿಕ್ಷಣ ಪಡೆದು ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ ಎಂದರು.

ಕೃಷಿಕರಿಗೆ ನೆರವಾಗುವ ಉದ್ದೇಶದಿಂದ ಕಾಫಿ ಸಂಶೋಧನಾ ಕೇಂದ್ರ ಸ್ಥಾಪನೆಗೆ ಅವರು ಶ್ರಮಿಸಿದ್ದರು. ಸ್ವಾತಂತ್ರö್ಯ ಚಳವಳಿಯ ಸಂದರ್ಭ ಮಹಾತ್ಮ ಗಾಂಧೀಜಿ ಅವರನ್ನು ಕೊಡಗಿಗೆ ಕರೆತಂದ ಕೀರ್ತಿಯೂ ಮಂಜುನಾಥಯ್ಯ ಅವರಿಗೆ ಸಲ್ಲುತ್ತದೆ. ತಮ್ಮನ್ನು ಭೇಟಿ ಮಾಡಲು ಬರುತ್ತಿದ್ದ ಪ್ರತಿಯೊಬ್ಬರಿಗೂ ಗೌರವ ನೀಡುತ್ತಿದ್ದ ಅವರು ಸೌಜನ್ಯಶೀಲರಾಗಿದ್ದರು. ಇಂದು ಅವರ ನೆನಪು ಮಾತ್ರ ಉಳಿದಿದ್ದು, ಅವರ ಆದರ್ಶಗಳನ್ನು ಸ್ಮರಿಸಿ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.

ಕಾರ್ಯಕ್ರಮವನ್ನು ಎಲ್‌ಐಸಿ ನಿವೃತ್ತ ಅಧಿಕಾರಿ ಎಸ್.ಎಂ. ಸುಧಾಕರ್ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ, ಹಲವು ವರ್ಷಗಳ ಹಿಂದೆ ಗುಂಡುಗುಟ್ಟಿ ಮಂಜುನಾಥಯ್ಯ ಅವರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿ ಮಾತನಾಡಿದ್ದೆ. ಎಲ್ಲರೊಂದಿಗೂ ಅತ್ಯಂತ ಸೌಜನ್ಯದಿಂದ ಮಾತನಾಡುತ್ತಿದ್ದ ಅವರು, ಹಲವು ಸಂದರ್ಭಗಳಲ್ಲಿ ಸಲಹೆಗಳನ್ನು ನೀಡುತ್ತಿದ್ದರು ಎಂದು ನೆನಪಿಸಿಕೊಂಡರು.

ಸಾಹಿತಿ ಕಿಗ್ಗಾಲು ಗಿರೀಶ್ ಅವರು ರಚಿಸಿರುವ ‘ಚಂಪಾಪುರದ ಮಂಗಳಾAಗಿ’ ಪತ್ತೆದಾರಿ ಕಾದಂಬರಿಯನ್ನು ಅರಮೇರಿ ಕಳಂಚೇರಿ ಮಠದ ಪೀಠಾಧಿಪತಿ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಬಿಡುಗಡೆಗೊಳಿಸಿದರು.

ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ಹಿಂದೆ ಶಿಕ್ಷಣದ ಕೊರತೆ ಇತ್ತು. ಆದರೆ ಇಂದು ಎಲ್ಲ ಸೌಲಭ್ಯಗಳೂ ಲಭ್ಯವಿವೆ. ಗುಂಡುಗುಟ್ಟಿ ಮಂಜುನಾಥಯ್ಯ ಅವರು ತಾವು ಮಾತ್ರ ಬದುಕಿದರೆ ಸಾಲದು, ಪ್ರತಿಯೊಬ್ಬರೂ ಜೀವನದಲ್ಲಿ ಮುಂದೆ ಬರಬೇಕು ಎಂಬ ಶ್ರೇಷ್ಠ ನಾಯಕತ್ವದ ಗುಣಗಳನ್ನು ಹೊಂದಿದ್ದರು. ಉತ್ತಮ ಗುಣನಡತೆ ಹೊಂದಿದ್ದರೆ ಯಾರೇ ಆಗಲಿ ಜೀವನದಲ್ಲಿ ಯಶಸ್ಸು ಸಾಧಿಸಬಹುದು ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಪಿ. ಕೇಶವ ಕಾಮತ್, ವೀರಾಜಪೇಟೆಯ ವೈದ್ಯ ಡಾ. ಎಸ್.ವಿ. ನರಸಿಂಹನ್ ಹಾಗೂ ನಿವೃತ್ತ ಸೈನಿಕ ರಾಜರಾಮ್ ಮಾತನಾಡಿದರು. ಯಶಸ್, ಚೈತ್ರ, ಸೋನಾ ಕಾರ್ಯಕ್ರಮ ನಿರ್ವಹಿಸಿದರು.