ನಾಪೋಕ್ಲು, ಆ. ೧೧: ಕೊಳಕೇರಿ ಗ್ರಾಮದ ಕೋಟೇರಿ-ಬೊಮ್ಮಂಜಿಕೇರಿ ಪ್ರದೇಶದಲ್ಲಿ ಸಾವನ್ನಪ್ಪಿದ್ದ ೧೬ ವರ್ಷದ ಗಂಡು ಕಾಡಾನೆಯ ಮರಣೋತ್ತರ ಪರೀಕ್ಷೆ ಹಾಗೂ ಅಂತ್ಯಸAಸ್ಕಾರ ಅರಣ್ಯಾಧಿಕಾರಿಗಳು ಹಾಗೂ ಗ್ರಾಮಸ್ಥರ ಸಮ್ಮುಖದಲ್ಲಿ ನಡೆಯಿತು.

ಮೃತ ಕಾಡಾನೆಯ ಮರಣೋತ್ತರ ಪರೀಕ್ಷೆ ನಡೆಸಿದ ಪಶುವೈದ್ಯಾಧಿಕಾರಿ ಚಿಟ್ಟಿಯಪ್ಪ, ಆನೆಯು ತೀವ್ರ ಕರುಳಿನ ಸಮಸ್ಯೆಯಿಂದ ಬಳಲುತ್ತಿದ್ದ ಪರಿಣಾಮ ಸಾವನ್ನಪ್ಪಿರುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.

ಅಚ್ಚಾಂಡಿರ ಕುಟುಂಬಸ್ಥರ ಗದ್ದೆಯ ಬದಿಯಲ್ಲಿ ಸಾವನ್ನಪ್ಪಿದ್ದ ಕಾಡಾನೆಯನ್ನು ಸೋಮವಾರ ರಾತ್ರಿ ಸುಮಾರು ೭೦೦ ಮೀಟರ್ ದೂರದವರೆಗೆ ಟ್ರ‍್ಯಾಕ್ಟರ್‌ಗೆ ಹಗ್ಗದ ಮೂಲಕ ಕಟ್ಟಿ ಎಳೆದು ತರಲಾಯಿತು. ಬಳಿಕ ಉಪ ವಲಯ ಅರಣ್ಯ ಸಂರಕ್ಷಣಾಧಿಕಾರಿ ಫಿರೋಜ್ ಖಾನ್ ಹಾಗೂ ವಲಯ ಅರಣ್ಯ ಸಂರಕ್ಷಣಾಧಿಕಾರಿ ಸೆಂಥಿಲ್ ಕುಮಾರ್ ನೇತೃತ್ವದಲ್ಲಿ ಸ್ಥಳದಲ್ಲೇ ಮರಣೋತ್ತರ ಪರೀಕ್ಷೆ ನಡೆಸಲಾಯಿತು.

ಆನೆಯ ಅಂಗಾAಗಗಳನ್ನು ಹೆಚ್ಚಿನ ಪರೀಕ್ಷೆ ಹಾಗೂ ಮಾಹಿತಿಗಾಗಿ ಮೈಸೂರಿನ ಪಶುವೈದ್ಯಕೀಯ ಸಂಶೋಧನಾ ಕೇಂದ್ರಕ್ಕೆ ಕಳುಹಿಸಲಾಗುವುದು. ಪರೀಕ್ಷೆಯ ವರದಿ ಬಂದ ಬಳಿಕ ಆನೆಯ ಸಾವಿಗೆ ನಿಖರ ಕಾರಣ ತಿಳಿದುಬರಲಿದೆ ಎಂದು ಅಧಿಕಾರಿ ಫಿರೋಜ್ ಖಾನ್ ತಿಳಿಸಿದ್ದಾರೆ.

ಮರಣೋತ್ತರ ಪರೀಕ್ಷೆ ನಡೆಸಿದ ಸ್ಥಳದಲ್ಲೇ ಗ್ರಾಮಸ್ಥರು ಹಾಗೂ ಅರಣ್ಯಾಧಿಕಾರಿಗಳ ಸಮ್ಮುಖದಲ್ಲಿ ಆನೆಯ ಅಂತ್ಯಸAಸ್ಕಾರ ನೆರವೇರಿಸಲಾಯಿತು. ಈ ಸಂದರ್ಭ ಸ್ಥಳೀಯರು ಮೃತ ಆನೆಗೆ ಪೂಜೆ ಸಲ್ಲಿಸಿದರು. ಆನೆಯ ದಂತವನ್ನು ಭಾಗಮಂಡಲ ಅರಣ್ಯಾಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.

ವಲಯ ಅರಣ್ಯ ಸಂರಕ್ಷಣಾಧಿಕಾರಿ ಶಂಕರ್, ಕಾಳೆಗೌಡ, ಅರಣ್ಯ ರಕ್ಷಕರು, ಆನೆ ಪಡೆ ಸಿಬ್ಬಂದಿ ಸೇರಿದಂತೆ ಗ್ರಾಮಸ್ಥರಾದ ಪುಳ್ಳೆರ ವಿನು ಬಿದ್ದಪ್ಪ, ಭೀಮಯ್ಯ, ಕುಶಾಲಪ್ಪ, ಅರುಣಾ, ಪ್ರಭು, ಸೋಮಯ್ಯ, ಅಚ್ಚಾಂಡಿರ ಅಪ್ಪಸ್ವಾಮಿ, ಮಧು ಮಂದಣ್ಣ, ಮನೋಜ್, ಅಪ್ಪರಂಡ ರಾಜಪ್ಪ, ಪ್ರಜ್ವಲ್, ಗಣೇಶ್, ಶರೀನ್, ಕೆಟೋಳಿರ ಸಮ್ಮಿ, ತಟ್ಟಂಡ ಶ್ಯಾಮ್, ಅಯ್ಯಪ್ಪ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದು, ಅರಣ್ಯ ಸಿಬ್ಬಂದಿಗೆ ಸಹಕರಿಸಿದರು.

- ದುಗ್ಗಳ ಸದಾನಂದ