ಮಡಿಕೇರಿ, ಆ.೧೦; ಗೌಡ ಜನಾಂಗದ ಸಾಂಪ್ರದಾಯಿಕ ಆಚರಣೆ, ಪದ್ಧತಿಗಳನ್ನು ಮುಂದಿನ ತಲೆಮಾರಿಗೆ ಪರಿಚಯಿಸಬೇಕಿದ್ದು, ಈ ನಿಟ್ಟಿನಲ್ಲಿ ಯುವ ಪೀಳಿಗೆ ಆಸಕ್ತಿ ವಹಿಸಿ ಮುಂದೆ ಬರಬೇಕೆಂದು ಕೊಡಗು ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷ ಆನಂದ್ ಕರಂದ್ಲಾಜೆ ಸಲಹೆ ಮಾಡಿದರು.

ಕೊಡಗು ಗೌಡ ಮಹಿಳಾ ಒಕ್ಕೂಟದ ವತಿಯಿಂದ ಗೌಡ ಸಮಾಜದಲ್ಲಿ ಏರ್ಪಡಿಸಲಾಗಿದ್ದ ಆಟಿ ಹಬ್ಬ ಹಾಗೂ ಗಾನ ಕೋಗಿಲೆ ಎಸ್.ಜಾನಕಿಯವರಿಗೆ ನುಡಿ ನಮನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಆಟಿ ಹಬ್ಬ ಅರೆಭಾಷೆ ಗೌಡ ಸಮುದಾಯದವರ ಸಾಂಪ್ರದಾಯಿಕ ಆಚರಣೆಯಾಗಿದ್ದು, ಇದನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ನಿಟ್ಟಿನಲ್ಲಿ ಮಹಿಳಾ ಒಕ್ಕೂಟದವರು ಪ್ರತಿ ವರ್ಷ ಕಾರ್ಯಕ್ರಮ ಹಮ್ಮಿಕೊಂಡು ಬರುತ್ತಿರುವದು ಶ್ಲಾಘನೀಯ, ಇದರೊಂದಿಗೆ ಎಲ್ಲ ಕಡೆಗಳಲ್ಲೂ ಸಮಾಜಗಳ ಮೂಲಕವೂ ಆಚರಿಸಲಾಗುತ್ತಿದೆ. ಇಂತಹ ಆಚರಣೆ, ಪದ್ಧತಿಗಳನ್ನು ಮುಂದಿನ ತಲೆಮಾರಿಗೆ ಪರಿಚಯಿಸುವ ನಿಟ್ಟಿನಲ್ಲಿ ಯುವ ಪೀಳಿಗೆ ಆಸಕ್ತಿವಹಿಸಬೇಕೆಂದು ಹೇಳಿದರು. ಕಾರ್ಯಕ್ರಮ ಆಯೋಜನೆ ಮಾಡಲು ಹಣ ಸಂಗ್ರಹಾತಿ ಕಷ್ಟದ ಕೆಲಸ, ಹಾಗಾಗಿ ಮುಂದಿನ ದಿನಗಳಲ್ಲಿ ಗೌಡ ಸಮಾಜ ನೇತೃತ್ವ ವಹಿಸಿಕೊಂಡು ಮಹಿಳಾ ಒಕ್ಕೂಟ ಹಾಗೂ ಯುವ ವೇದಿಕೆಯ ಕಾರ್ಯಕ್ರಮಗಳಿಗೆ ಸಹಕಾರ ನೀಡಬೇಕೆಂದು ಅವರು ಹೇಳಿದರು. ಜನಾಂಗದಲ್ಲಿ ಅನೇಕ ಮಂದಿ ಸಾಹಿತಿಗಳಿದ್ದು, ಪುಸ್ತಕ ಹೊರತರಲು ಸಾಧ್ಯವಾಗದವರಿಗೆ ಪುಸ್ತಕ ಪ್ರಕಟಣೆಗೆ ಒಕ್ಕೂಟ ಅರೆಬಾಷೆ ಅಕಾಡೆಮಿ ಸಹಕಾರದೊಂದಿಗೆ ನೆರವು ಕಲ್ಪಿಸಲಾಗುವದು. ಆಸಕ್ತರು ಸಂಪರ್ಕಿಸಬಹುದು ಎಂದು ಹೇಳಿದ ಅವರು; ಇತ್ತೀಚಿನ ದಿನಗಳಲ್ಲಿ ಜನಾಂಗ ಬಾಂಧವರು ಮುಂದೆ ಬರುತ್ತಿದ್ದಾರೆ. ಆದರೂ ಸಂಘಟನಾತ್ಮಕವಾಗಿ, ಜನಾಂಗದ ಪರವಾಗಿ ಇನ್ನೂ ಮುಂದುವರಿಯಬೇಕೆAದು ಕರೆ ನೀಡಿದರು. ಒಕ್ಕೂಟದಿಂದ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಮಹಿಳಾ ಒಕ್ಕೂಟದವರು ವಿಧವಾ ಮಹಿಳೆಯರು ಸಾಂಪ್ರದಾಯಿಕ ಆಚರಣೆಗಳಲ್ಲಿ ತೊಡಗಿಸಿಕೊಳ್ಳಲು ಇರುವಂತಹ ಗೊಂದಲದ ಬಗ್ಗೆ ಸಂವಾದ ಏರ್ಪಡಿಸಿ ಪರಿಹಾರ ಕಂಡುಕೊಳ್ಳುವAತೆ ಸಲಹೆ ಮಾಡಿದರು.

ಹಬ್ಬವಲ್ಲ ಸಂಸ್ಕೃತಿ

ಹಬ್ಬದ ಪ್ರಯುಕ್ತ ಏರ್ಪಡಿಸಲಾಗಿದ್ದ ಆಟಿ ತಿಂಗಳ ವಿವಿಧ ಖಾದ್ಯ-ಹಣ್ಣು ಹಂಪಲುಗಳ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದ ಸಾಹಿತಿ ಕೊಟ್ಟಕೇರಿಯನ ಲೀಲಾ ದಯಾನಂದ; ಆಟಿ ಹಬ್ಬ ಕೇವಲ ಒಂದು ಹಬ್ಬವಲ್ಲ, ಅದು ನಮಗೆ ನಮ್ಮ ಹಿರಿಯರು ಬಿಟ್ಟು ಹೋದ ಸಂಸ್ಕೃತಿ, ಪರಂಪರೆ, ಬದುಕಿನ ಒಂದು ಭಾಗವಾಗಿದೆ. ಇದನ್ನು ಮುಂದುವರಿಸಿಕೊAಡು ಹೋಗಲು ಇಂತಹ ಕಾರ್ಯಕ್ರಮಗಳು ಒಂದು ಕೊಂಡಿಯಾಗಿದ್ದು, ಆ ಮೂಲಕ ಮುಂದಿನ ಪೀಳಿಗೆ ಕೂಡ ಮುಂದುವರಿಸಿಕೊAಡು ಹೋಗಲಿದ್ದಾರೆ ಎಂದು ಹೇಳಿದರು. ಪ್ರಕೃತಿ ಕೂಡ ನಮ್ಮ ಬದುಕಿನ ಭಾಗವಾಗಿದ್ದು, ಪರಿಸರ ಆಯಾಯ ಕಾಲಕ್ಕೆ ಒದಗಿಸಿಕೊಡುವ ಆಹಾರ ಪದ್ಧತಿಗಳನ್ನು ಸ್ವೀಕರಿಸಬೇಕೆಂದು ಹೇಳಿದರು.

ವೈಜ್ಞಾನಿಕ ಹಿನ್ನೆಲೆಯಿದೆ

ಮಹಿಳಾ ಒಕ್ಕೂಟದ ವತಿಯಿಂದ ಸಿದ್ಧಪಡಿಸಲಾದ ೧೪ ಅರೆಭಾಷೆ ಭಾವಗೀತೆಗಳ ಧ್ವನಿಸುರುಳಿಯನ್ನು ಬಿಡುಗಡೆಗೊಳಿಸಿದ ಕೊಡಗು ಗೌಡ ಸಮಾಜದ ಉಪಾಧ್ಯಕ್ಷ ಸೂರ್ತಲೆ ಸೋಮಣ್ಣ ಮಾತನಾಡಿ; ಆಟಿ ಹಬ್ಬ ಸಾಂಪ್ರದಾಯಿಕ ಆಚರಣೆಯೊಂದಿಗೆ ವೈಜ್ಞಾನಿಕ ಹಿನ್ನೆಲೆಯನ್ನು ಕೂಡ ಹೊಂದಿದೆ. ಆಟಿ ತಿಂಗಳಲ್ಲಿ ಸೇವಿಸುವ ಆಹಾರ ಪದಾರ್ಥಗಳಲ್ಲಿ ಹಲವಷ್ಟು ಪ್ರಯೋಜನಕಾರಿಯಾಗುವ ಔಷಧಿಗಳಿವೆ ಎಂದು ವಿವರಣೆ ನೀಡಿದರು.

ನುಡಿ ನಮನ

ಇದೇ ಸಂದರ್ಭದಲ್ಲಿ ಇತ್ತೀಚೆಗೆ ನಿಧನರಾದ ಗಾನಕೋಗಿಲೆ ಎಸ್. ಜಾನಕಿ ಅವರಿಗೆ ನುಡಿ ನಮನದೊಂದಿಗೆ ಸಂತಾಪ ಸೂಚಿಸಲಾಯಿತು. ಇದೇ ಸಂದರ್ಭದಲ್ಲಿ ಗಾಯಕ ಪಾಣತ್ತಲೆ ರಕ್ಷಿತ್ ಅವರನ್ನು ಸನ್ಮಾನಿಸಲಾಯಿತು. ಪಾಣತ್ತಲೆ ರಕ್ಷಿತ್ ಹಾಗೂ ಮಹಿಳಾ ಒಕ್ಕೂಟದ ಸದಸ್ಯರುಗಳಾದ ಗೋವಿಂದಮ್ಮನ ಪ್ರಿಯ ಹಾಗೂ ತಂಡದವರು, ಪೇರಿಯನ ಲತಾ, ಬೈಮನ ಜ್ಯೋತಿ, ಕೇಕಡ ಇಂದುಮತಿ ಅವರುಗಳು ಹಾಡು, ಸೋಬಾನೆ ಪದಗಳನ್ನು ಹಾಡಿ ಗಮನ ಸೆಳೆದರು. ಕಾರ್ಯಕ್ರಮದಲ್ಲಿ ಕೊಡಗು ಗೌಡ ವಿದ್ಯಾ ಸಂಘದ ಅಧ್ಯಕ್ಷ ಅಂಬೆಕಲ್ ನವೀನ್ ಕುಶಾಲಪ್ಪ, ಅರೆಭಾಷೆ ಅಕಾಡೆಮಿ ಸದಸ್ಯ ಪೂಳಕಂಡ ಸಂದೀಪ್, ಹಿರಿಯ ಸಾಹಿತಿ ಬಾರಿಯಂಡ ಜೋಯಪ್ಪ, ಮಹಿಳಾ ಕೃಷಿ ಸಾಧಕಿ ಕಟ್ಟೆಮನೆ ಪ್ರೇಮಾ ಇದ್ದರು. ಮಹಿಳಾ ಒಕ್ಕೂಟದ ಕಾರ್ಯದರ್ಶಿ ಬಾರನ ಶೋಭಾ, ಖಜಾಂಚಿ ಕೋಳಿಬೈಲು ಹರಿಣಿ, ಕುದುಪಜೆ ರೋಹಿಣಿ, ಪೇರಿಯನ ಮುತ್ತಮ್ಮ, ಪಾಣತ್ತಲೆ ಭಾಗೀರಥಿ, ಮುದ್ಯನ ಜ್ಯೊತಿ, ಕರ್ಣಯ್ಯನ ಪದ್ಮಿನಿ ಅವರುಗಳು ಕಾರ್ಯಕ್ರಮ ಆಯೋಜನೆಯಲ್ಲಿ ಸಹಕರಿಸಿದರು. ದೇಲಂಪಾಡಿ ರಮ್ಯ ಚಿಣ್ಣಪ್ಪ ಪ್ರಾರ್ಥಿಸಿದರೆ, ಕಡ್ಲೇರ ಆಶಾ ಧರ್ಮಪಾಲ ಹಾಗೂ ರಮ್ಯ ನಿರೂಪಿಸಿದರು. ಪರ್ಲಕೋಟಿ ಸೋನಾ ಪ್ರೀತು ಸನ್ಮಾನಿತರನ್ನು ಪರಿಚಯಿಸಿದರು. ಅಧ್ಯಕ್ಷತೆ ವಹಿಸಿದ್ದ ಮಹಿಳಾ ಒಕ್ಕೂಟದ ಅಧ್ಯಕ್ಷೆ ಅಮೆ ದಮಯಂತಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.