ಸಿದ್ದಾಪುರ, ಆ. ೧೦: ಮಕ್ಕಳು ಮಾದಕ ವಸ್ತು ಸೇವನೆ ಮಾಡದಂತೆ ಸಿದ್ದಾಪುರ ಠಾಣಾಧಿಕಾರಿ ಮಂಜುನಾಥ್ ಕರೆ ನೀಡಿದರು. ಸಿದ್ದಾಪುರ ಪೊಲೀಸ್ ಠಾಣೆ ಹಾಗೂ ಸಿದ್ದಾಪುರ ಸಂಯುಕ್ತ ಪ್ರೌಢಶಾಲೆ ವತಿಯಿಂದ ಪ್ರೌಢಶಾಲೆ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಶಾಲೆ - ಕಾಲೇಜು ಮಕ್ಕಳು ಮಾದಕ ವಸ್ತು ಸೇವನೆ ಮಾಡಿದ್ದಲ್ಲಿ ತಮ್ಮ ಭವಿಷ್ಯಕ್ಕೆ ಮಾರಕವಾಗುತ್ತದೆ. ಈ ಹಿನ್ನೆಲೆಯಲ್ಲಿ ಮಾದಕ ವಸ್ತು ಸೇವನೆ ಮಾಡುವುದು ಅಪಾಯಕಾರಿ ಆಗಿದೆ ಎಂದು ತಿಳಿಸಿದರು. ಮಾದಕ ವಸ್ತುಗಳನ್ನು ಮಾರಾಟ ಮಾಡುವ ಬಗ್ಗೆ ಮಾಹಿತಿ ಲಭಿಸಿದಲ್ಲಿ ಪೊಲೀಸ್ ಇಲಾಖೆಗೆ ತಿಳಿಸುವಂತೆ ಮನವಿ ಮಾಡಿದರು. ರಸ್ತೆ ಸುರಕ್ಷತೆಯ ಬಗ್ಗೆ ಮಾತನಾಡಿ, ಅಪ್ರಾಪ್ತ ವಯಸ್ಸಿನ ಮಕ್ಕಳು ವಾಹನ ಚಾಲನೆ ಮಾಡದಂತೆ ಎಚ್ಚರಿಕೆಯನ್ನು ನೀಡಿದರು. ಅಪ್ರಾಪ್ತ ವಯಸ್ಸಿನ ಮಕ್ಕಳು ವಾಹನ ಚಲಾಯಿಸಿದಲ್ಲಿ ಅವರಿಗೆ ಹಾಗೂ ಅವರ ಪೋಷಕರಿಗೆ ದಂಡ ವಿಧಿಸಲಾಗುವುದು ಎಂದು ಮಾಹಿತಿ ನೀಡಿದರು. ಪೋಕ್ಸೊ ಕಾಯ್ದೆಯ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸಿದರು. ಅಲ್ಲದೆ ಶಿಕ್ಷಣದ ಮೂಲಕ ಮಕ್ಕಳು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳುವ ಮೂಲಕ ಸಮಾಜದ ಮುಖ್ಯ ವಾಹಿನಿಗೆ ಬರುವಂತೆ ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಪ್ರೊಬೇಷನರಿ ಠಾಣಾಧಿಕಾರಿ ಶ್ವೇತಾ, ಪ್ರೌಢಶಾಲೆಯ ಆಡಳಿತ ಮಂಡಳಿ ಅಧ್ಯಕ್ಷ ಪಟ್ಟಡ ಅಶೋಕ್, ಕಾರ್ಯದರ್ಶಿ ಪಿ.ಸಿ. ಅಚ್ಚಯ್ಯ, ಶಾಲೆಯ ಮುಖ್ಯ ಶಿಕ್ಷಕ ಬಾಬು ನಾಯಕ್ ಹಾಗೂ ಶಿಕ್ಷಕರು ಹಾಜರಿದ್ದರು.