ಮಡಿಕೇರಿ, ಆ. ೧೦: ಸರ್ಫೇಸಿ ಕಾಯ್ದೆಯಂತೆ ರೈತರ ಆಸ್ತಿ ಹರಾಜು ಮಾಡುವುದನ್ನು ತಡೆ ಹಿಡಿದು, ಒಟಿಎಸ್‌ನ ಪ್ರಯೋಜನ ಕಲ್ಪಿಸುವುದಾಗಿ ಬ್ಯಾಂಕ್ ಒಂದರ ವ್ಯವಸ್ಥಾಪಕ ನಿರ್ದೇಶಕರು ನೀಡಿದ್ದ ಭರವಸೆ ಸುಳ್ಳು ಎಂಬದು ಮತ್ತೆ ಸಾಬೀತಾಗಿದೆ.

ಈ ಬಗ್ಗೆ ಇತ್ತೀಚೆಗೆ ಕಾಫಿ ಮಂಡಳಿ ಅಧ್ಯಕ್ಷರಾದ ಎಂ.ಜೆ. ದಿನೇಶ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೂರ್ಮಾರಾವ್ ಅವರುಗಳು ಕೆನರಾ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕರಾದ ಹರ್ದೀಪ್ ಸಿಂಗ್ ಅಹ್ಲುವಾಲಿಯಾ ಅವರನ್ನು ಭೇಟಿ ಮಾಡಿ ಸರ್ಫೇಸಿ ಕಾಯ್ದೆಯಂತೆ ರೈತರ ತೋಟ ಹರಾಜು ಪ್ರಕ್ರಿಯೆ ಬಗ್ಗೆ ಚರ್ಚಿಸಲಾಗಿತ್ತು.

ಈ ಸಂದರ್ಭ ಅವರು ಕೆನರಾ ಬ್ಯಾಂಕ್‌ನ ಎಲ್ಲಾ ಶಾಖೆಗಳಿಗೆ ಕಾಫಿ ತೋಟಗಳ ಹರಾಜು ಮಾಡದಂತೆ ನಿರ್ದೇಶನ ನೀಡುವುದಾಗಿ ಭರವಸೆ ನೀಡಿದ್ದರು. ಅಲ್ಲದೆ ಒನ್ ಟೈಮ್ ಸೆಟಲ್‌ಮೆಂಟ್ (ಒಟಿಎಸ್)ಗೆ ಉತ್ತಮ ರಿಯಾಯಿತಿ ನೀಡುವ ಮೂಲಕ ಬೆಳೆಗಾರರಿಗೆ ಅನುಕೂಲ ಕಲ್ಪಿಸುವ ಭರವಸೆ ನೀಡಿರುವುದಾಗಿ ಕಾಫಿ ಮಂಡಳಿ ಅಧ್ಯಕ್ಷರಾದ ಎಂ.ಜೆ. ದಿನೇಶ್ ಅವರು ಮಾಹಿತಿ ನೀಡಿದರು. ೪ಐದನೇ ಪುಟಕ್ಕೆ

(ಮೊದಲ ಪುಟದಿಂದ) ಇದರ ಬೆನ್ನಲ್ಲೇ “ ಕ್ಯಾನ್ ಅದಾಲತ್’’ ಮೂಲಕ ಸಾಲ ಇತ್ಯರ್ಥದ ಪ್ರಕಟಣೆಯೂ ಬ್ಯಾಂಕ್‌ನಿAದ ಬಂದಿತ್ತು. ಬ್ಯಾಂಕ್ ಸುಸ್ತಿದಾರ ಬೆಳೆಗಾರರ ಅನುಕೂಲಕ್ಕಾಗಿ ಕಾಫಿ ಬೆಳೆಯುವ ಜಿಲ್ಲೆಗಳ ಆಯ್ದ ಕೆಲವು ಶಾಖೆಗಳಲ್ಲಿ ಕ್ಯಾನ್ ಅದಾಲತ್‌ನ ದಿನಾಂಕವೂ ನಿಗದಿಯಾಗಿತ್ತು. ಕೊಡಗಿನಲ್ಲಿ ತಾ. ೩ ರಂದು ಕುಶಾಲನಗರ, ೪ ರಂದು ಗೋಣಿಕೊಪ್ಪ, ತಾ. ೫ ರಂದು ಮಡಿಕೇರಿಯ ಕೆನರಾ ಬ್ಯಾಂಕ್ ಶಾಖೆಗಳಲ್ಲಿ ಅದಾಲತ್ ಬಗ್ಗೆ ಮಾಹಿತಿ ನೀಡಲಾಗಿತ್ತು. ಈ ಭರವಸೆ - ಪ್ರಕ್ರಿಯೆಗಳ ನಡುವೆ ಕೆನರಾಬ್ಯಾಂಕ್ ಎಆರ್‌ಎಂ ಶಾಖೆ ಮಂಗಳೂರು ಕಚೇರಿ ಮೂಲಕ ತಾ. ೫ ರ ರಾಜ್ಯಮಟ್ಟದ ಪತ್ರಿಕೆಯೊಂದರಲ್ಲಿ ಕೊಡಗು ಜಿಲ್ಲೆಯ ಕಾಫಿ ತೋಟ ಹರಾಜಿನ ಪ್ರಕಟಣೆ ನೀಡಲಾಗಿದೆ. ಇದರಿಂದ ಬ್ಯಾಂಕ್‌ನ ಹಿರಿಯ ಅಧಿಕಾರಿಯ ಭರವಸೆಯ ಮೇಲೂ ನಂಬಿಕೆ ಇಲ್ಲದಂತಾಗಿದೆ. ಈ ಬಗ್ಗೆ ರೈತ ಸಂಘದ ಪ್ರಮುಖರೂ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ದಕ್ಷಿಣ ಕೊಡಗಿನ ಹೈಸೊಡ್ಲೂರು ಗ್ರಾಮದ ಬೆಳೆಗಾರರೊಬ್ಬರ ಸುಸ್ತಿ ಸಾಲಕ್ಕೆ ಸಂಬAಧಿಸಿದAತೆ ಈ ಹರಾಜು ಪ್ರಕಟಣೆ ಬಂದಿದೆ.