ಸೋಮವಾರಪೇಟೆ, ಆ. ೧೦: ಶಿಥಿಲಾವಸ್ಥೆಯಲ್ಲಿದ್ದ ಶೌಚಾಲಯದ ಗುಂಡಿಗೆ ಬಿದ್ದು ಈರ್ವರು ದುರ್ಮರಣಕ್ಕೀಡಾಗಿರುವ ಘಟನೆ ತಾಲೂಕಿನ ಗರಗಂದೂರು ಬಿ. ಗ್ರಾಮದಲ್ಲಿ ನಡೆದಿದೆ.
ಹೊಸತೋಟ ಗ್ರಾಮ ನಿವಾಸಿ ನಿತ್ಯ (೫೦) ಹಾಗೂ ಗರಗಂದೂರು ಬಿ. ಗ್ರಾಮದ ಜನಾರ್ದನ್ (೪೫) ಎಂಬವರುಗಳೇ ಮೃತ್ಯುಕೂಪವಾದ ಶೌಚಾಲಯದ ಗುಂಡಿಗೆ ಬಿದ್ದು ದುರಂತ ಅಂತ್ಯ ಕಂಡ ದುರ್ದೈವಿಗಳು.
ಹೊಸತೋಟದ ಧರ್ಮಪ್ಪ ಅವರ ಪತ್ನಿ ನಿತ್ಯ ಅವರು ಮನೆಗೆ ಬೇಕಾದ ಶುಂಠಿ ಕೀಳಲೆಂದು ಇಂದು ಮಧ್ಯಾಹ್ನ ೧.೩೦ರ ಸುಮಾರಿಗೆ ಗರಗಂದೂರು ಬಿ. ಗ್ರಾಮದಲ್ಲಿರುವ ಪತಿಯ ಸಹೋದರ ವಾಸು ಅವರ ಮನೆಗೆ ಆಗಮಿಸಿದ್ದು, ಸಂಜೆ ೪.೩೦ರ ಸುಮಾರಿಗೆ ಶುಂಠಿ ಕಿತ್ತು ವಾಪಸ್ ಬರುವಾಗ ಮನೆಯ ಹಿಂಬದಿಯಿದ್ದ ಶೌಚಾಲಯದ ಗುಂಡಿ ಮೇಲೆ ಕಾಲಿಡುತ್ತಿದ್ದಂತೆ, ಸ್ಲಾö್ಯಬ್ ಕುಸಿದು ಗುಂಡಿಯೊಳಗೆ ಬಿದ್ದಿದ್ದಾರೆ.
ಇದನ್ನು ನೋಡಿದ ವಾಸು ಅವರ ಪತ್ನಿ ವಾಸಂತಿ ಅವರು ಜೋರಾಗಿ ಬೊಬ್ಬೆ ಹೊಡೆದಿದ್ದು, ತಕ್ಷಣ ಎದುರು ಮನೆಯ ಜನಾರ್ದನ್ ಅವರು ನೆರವಿಗೆ ಧಾವಿಸಿದ್ದಾರೆ. ಗುಂಡಿಯೊಳಗೆ ೪ಐದನೇ ಪುಟಕ್ಕೆ
(ಮೊದಲ ಪುಟದಿಂದ) ಮುಳುಗಿದ್ದ ನಿತ್ಯ ಅವರನ್ನು ಮೇಲೆತ್ತುವ ಧಾವಂತದಲ್ಲಿ ಬಗ್ಗಿದ ಜನಾರ್ದನ್ ಅವರೂ ಸಹ ಗುಂಡಿಯೊಳಗೆ ಬಿದ್ದಿದ್ದು, ಜೀವನ್ಮರಣದ ಸ್ಥಿತಿಗೆ ತಲುಪಿದ್ದಾರೆ.
ಈ ಸಂದರ್ಭ ಸ್ಥಳಕ್ಕಾಗಮಿಸಿದ ನೆರೆ ಮನೆಯ ವಿಜಯ ಅವರು ಹಗ್ಗದ ಸಹಾಯದಿಂದ ಈರ್ವರನ್ನೂ ಮೇಲೆತ್ತಿದ್ದು, ಅಷ್ಟರಲ್ಲಾಗಲೇ ನಿತ್ಯ ಅವರು ಇಹಲೋಕ ತ್ಯಜಿಸಿದ್ದರು ಎನ್ನಲಾಗಿದೆ. ನಿತ್ಯ ಸೇರಿದಂತೆ ತೀವ್ರ ಅಸ್ವಸ್ಥರಾಗಿದ್ದ ಜನಾರ್ದನ್ ಅವರನ್ನು ಮಡಿಕೇರಿಯ ಆಸ್ಪತ್ರೆಗೆ ಸ್ಥಳೀಯರ ನೆರವಿನೊಂದಿಗೆ ಸಾಗಿಸಿದ್ದಾರೆ.
ಆಸ್ಪತ್ರೆಯಲ್ಲಿ ಪರೀಕ್ಷಿಸಿದ ವೈದ್ಯರು ಈರ್ವರೂ ಮೃತಪಟ್ಟಿರುವ ಬಗ್ಗೆ ದೃಢಪಡಿಸಿದ್ದಾರೆ. ಕೂಲಿ ಕಾರ್ಮಿಕರಾಗಿದ್ದ ನಿತ್ಯ ಅವರು ಪತಿ ಸೇರಿದಂತೆ ಓರ್ವ ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ. ಜನಾರ್ದನ್ ಅವರು ಪತ್ನಿ ರೋಹಿಣಿ ಸೇರಿದಂತೆ ಈರ್ವರು ಪುತ್ರರನ್ನು ಅಗಲಿದ್ದಾರೆ.