ಗೋಣಿಕೊಪ್ಪಲು, ಆ. ೧೦: ಪೊನ್ನಂಪೇಟೆ ಸಮೀಪದ ಕಿರುಗೂರು ಗ್ರಾಮಸ್ಥರು ಗುಂಡಿ ಬಿದ್ದ ರಸ್ತೆ ಸರಿಪಡಿಸಿದ್ದಾರೆ. ಇತ್ತೀಚೆಗೆ ಸುರಿದ ಮಳೆಗೆ ಕಿರುಗೂರು-ಹೊನ್ನಿಕೊಪ್ಪ, ಮಡಿಕೆಬೀಡು ಲಿಂಕ್ ರಸ್ತೆ ಸಂಪೂರ್ಣ ಹದಗೆಟ್ಟಿತ್ತು. ಸುಮಾರು ೫೦೦ ಮೀಟರ್‌ಗೂ ಹೆಚ್ಚು ದೂರ ರಸ್ತೆ ಗುಂಡಿಮಯವಾಗಿ, ಸಾರ್ವಜನಿಕರು ಹಾಗೂ ವಾಹನ ಸವಾರರು ಪ್ರತಿದಿನ ಹೈರಾಣಾಗುತ್ತಿದ್ದರು.

ರಸ್ತೆಯ ದುಸ್ಥಿತಿಯ ಬಗ್ಗೆ ಸ್ಥಳೀಯರು ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಹಾಗೂ ಸಂಬAಧಪಟ್ಟ ಜನಪ್ರತಿನಿಧಿಗಳಿಗೆ ಹಲವು ಬಾರಿ ಮನವಿ ಮಾಡಿದರು. ಆದರೆ, ಯಾರುಕೂಡ ಇತ್ತ ಗಮನ ಹರಿಸಿರಲಿಲ್ಲ, ಅಧಿಕಾರಿಗಳ ನಿರ್ಲಕ್ಷö್ಯಕ್ಕೆ ಬೇಸತ್ತ ಗ್ರಾಮಸ್ಥರು ದಾನಿಗಳ ನೆರವು ಪಡೆದು ರಸ್ತೆ ದುರಸ್ತಿಗೆ ಬೇಕಾದ ಕಲ್ಲು ಮತ್ತು ಮಣ್ಣನ್ನು ಸಂಗ್ರಹಿಸಿದರು.

ತಮ್ಮ ವೈಯಕ್ತಿಕ ಕೆಲಸಗಳನ್ನು ಬದಿಗೊತ್ತಿ ಒಟ್ಟುಗೂಡಿದ ಗ್ರಾಮಸ್ಥರು ಶ್ರಮದಾನದ ಮೂಲಕ ರಸ್ತೆಯ ಗುಂಡಿಗಳನ್ನು ಮುಚ್ಚಿ, ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸಿದರು. ಕಾಳಪಂಡ ಗಣೇಶ್, ವಾಸಪ್ಪ, ಸಚಿನ್, ರಾಜೇಶ್, ಪ್ರಕಾಶ್, ಸರ ಚಂಗಪ್ಪ, ಹೊಳೆಕೆರೆ ಸುರೇಶ್ ಸೇರಿದಂತೆ ಹಲವರು ತೊಡಗಿಸಿಕೊಂಡರು.