ನಾಪೋಕ್ಲು, ಆ. ೯: ಜಿಲ್ಲೆಯ ಅಭಿವೃದ್ಧಿಗೆ ಸಮಾಜದ ಕೊಡುಗೆ ಅಪಾರ ಎಂದು ವೀರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಹೇಳಿದರು.

ಇಲ್ಲಿನ ಕೊಡವ ಸಮಾಜದಲ್ಲಿ ಬಿಲ್ಲವ ಸಮಾಜದ ವತಿಯಿಂದ ಆಯೋಜಿಸಲಾಗಿದ್ದ ಆಟಿಡೊಂಜಿ ದಿನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು. ಇಡೀ ದೇಶದಲ್ಲಿ ಶ್ರಮಕ್ಕೆ, ಶಿಸ್ತುಬದ್ದ ಜೀವನಕ್ಕೆ, ನೇರ ನುಡಿಗೆ ಹೆಸರುವಾಸಿಯಾದ ಬಿಲ್ಲವ ಜನಾಂಗ ಹಲವು ಕ್ಷೇತ್ರಗಳಲ್ಲಿ ಛಾಪನ್ನು ಮೂಡಿಸಿದೆ. ಕೊಡಗಿನಲ್ಲೂ ಕೂಡ ನಾವೆಲ್ಲಾ ಒಂದೇ ಎಂಬ ಭಾವನೆಯಿಂದ ಜನಾಂಗ ಮುಂದುವರಿಯುತ್ತಿದೆ ಎಂದರು. ಬಿಲ್ಲವ ಸಮುದಾಯ ಭವನದ ಶಂಕುಸ್ಥಾಪನೆಯನ್ನು ಇಂದು ನೆರವೇರಿಸಲಾಗಿದ್ದು ಮುಂದಿನ ವರ್ಷವೇ ಸಮುದಾಯ ಭವನ ನಿರ್ಮಾಣವಾಗಲಿದೆ ಎಂದು ಆಶಿಸಿದರು. ವಿಧಾನ ಪರಿಷತ್ ಸದಸ್ಯ ಮಂಡೇಪAಡ ಸುಜಾ ಕುಶಾಲಪ್ಪ ಮಾತನಾಡಿ, ಬಿಲ್ಲವ ಸಮಾಜಕ್ಕಾಗಿ ರೂ. ೫ ಲಕ್ಷ ಸರ್ಕಾರದ ಅನುದಾನ ನೀಡುತ್ತಿದ್ದೇನೆ. ಸಮಾಜದ ಏಳಿಗೆಯಾಗಲಿ ಎಂದು ಹೇಳಿದರು. ಮಾಜಿ ಶಾಸಕ ಕೆ.ಜಿ. ಬೋಪಯ್ಯ ಮಾತನಾಡಿ, ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದರ ಮೂಲಕ ಜನಾಂಗದವರು ಮುಖ್ಯವಾಹಿನಿಗೆ ಬಂದು ಸಮಾಜದ ರಕ್ಷಣೆಯೊಂದಿಗೆ ದೇಶ ರಕ್ಷಣೆಗೂ ಕಟಿಬದ್ಧರಾಗಬೇಕು ಎಂದರು. ಸೋಲೂರು ರಾಮನಗರದ ಆರ್ಯ ಈಡಿಗ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ವಿಖ್ಯಾತಾನಂದ ಸ್ವಾಮೀಜಿ ಸಭಾ ಕಾರ್ಯಕ್ರಮದ ದಿವ್ಯಸಾನಿಧ್ಯ ವಹಿಸಿ ಮಾತನಾಡಿ, ಮಕ್ಕಳಿಗೆ ನಮ್ಮ ಸಂಸ್ಕೃತಿ, ಆಚಾರ, ವಿಚಾರ ಕಲಿಸಿ ಭವಿಷ್ಯದ ಬಗ್ಗೆ ಅರಿವು ಮೂಡಿಸಬೇಕು. ಭಾಷೆ, ಸಂಸ್ಕೃತಿಯಿAದ ಸದೃಢ ಸಮಾಜ ನಿರ್ಮಾಣವಾಗುತ್ತದೆ ಎಂದರು.

ಬೆAಗಳೂರು ಕೊಡವ ಸಮಾಜದ ಅಧ್ಯಕ್ಷ ಸುರೇಶ್ ನಂಜಪ್ಪ ಮಾತನಾಡಿ, ಯಾವುದೇ ಸಮಾಜ ಮುಂದೆ ಬರಬೇಕಾದರೆ ಆ ಸಮಾಜದ ಪದ್ದತಿ, ಪರಂಪರೆ, ಸಂಸ್ಕೃತಿ ಬೆಳೆಯಬೇಕು. ನಾವು ನಮ್ಮ ಭಾಷೆಯನ್ನು ಪ್ರೀತಿಸಬೇಕು. ಬಳಿಕ ಇತರ ಭಾಷೆಯನ್ನು ಗೌರವಿಸಬೇಕು, ಇದು ನಿಜವಾದ ಸಂಸ್ಕೃತಿ ಎಂದರು.

ಉದ್ಯಮಿ ಎಡಿಕೇರಿ ಪ್ರಸನ್ನ ಮಾತನಾಡಿ, ಹಿಂದೂ ಸಮಾಜ ಕಟ್ಟುವಲ್ಲಿ ಬಿಲ್ಲವ ಸಮಾಜದ ಕೊಡುಗೆ ಸದಾ ಇರಲಿ ಎಂದು ಆಶಯ ವ್ಯಕ್ತಪಡಿಸಿದರು.

ಬಿಲ್ಲವ ಸಮಾಜದ ಅಧ್ಯಕ್ಷ ಬಿ.ಎಂ. ಪ್ರತೀಪ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಿತು. ಇದಕ್ಕೂ ಮುನ್ನ ಬಿಲ್ಲವ ಸಮುದಾಯ ಭವನ ಶಂಕುಸ್ಥಾಪನೆಯನ್ನು ವಿಖ್ಯಾತಾನಂದ ಸ್ವಾಮೀಜಿ ಮತ್ತು ಎ.ಎಸ್. ಪೊನ್ನಣ್ಣ, ಸುಜಾ ಕುಶಾಲಪ್ಪ ನೆರವೇರಿಸಿದರು. ಬಳಿಕ ಕೊಡವ ಸಮಾಜದಲ್ಲಿ ಬೃಹತ್ ರಕ್ತದಾನ ಶಿಬಿರ ನಡೆಯಿತು. ಪ್ರತಿಭಾವಂತ ವಿದ್ಯಾರ್ಥಿಗಳನ್ನು, ಸಾಧಕರನ್ನು ಸನ್ಮಾನಿಸಲಾಯಿತು. ಮನೆಯಲ್ಲಿ ಮಾಡಿದ ಆಟಿ ಮಾಸದ ಸಾಂಪ್ರದಾಯಿಕ ತಿನಿಸುಗಳ ಪ್ರದರ್ಶನ ಆಯೋಜಿಸಲಾಗಿತ್ತು. ಸಮಾಜದವರಿಗಾಗಿ ಹಾಗೂ ಮಕ್ಕಳಿಗಾಗಿ ಸಾಂಸ್ಕೃತಿಕ ಕಾರ್ಯಕ್ರಮ, ಕ್ರೀಡಾಕೂಟಗಳು ನಡೆದವು. ವೀರಾಜಪೇಟೆ ಬಿಲ್ಲವ ಸಮಾಜದ ಅಧ್ಯಕ್ಷ ಬಿ.ಎಂ. ಗಣೇಶ್, ಸೋಮವಾರಪೇಟೆ ಬಿಲ್ಲವ ಸಮಾಜದ ಅಧ್ಯಕ್ಷ ಚಂದ್ರಹಾಸ, ಕುಶಾಲನಗರ ಬಿಲ್ಲವ ಸಮಾಜದ ಅಧ್ಯಕ್ಷ ಸುಧೀರ್, ಸುಂಟಿಕೊಪ್ಪ ಬಿಲ್ಲವ ಸಮಾಜದ ಅಧ್ಯಕ್ಷ ಮಣಿ ಮುಖೇಶ್, ಸಿದ್ದಾಪುರ ಬಿಲ್ಲವ ಸಮಾಜದ ಅಧ್ಯಕ್ಷ ರಂಜನ್ ಬಿ.ವಿ., ಮದೆನಾಡು ಬಿಲ್ಲವ ಸಮಾಜದ ಅಧ್ಯಕ್ಷ ತಾರಾನಾಥ ಬಿ.ಎಸ್. ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಬಿಲ್ಲವ ಸಮಾಜದ ಉಪಾಧ್ಯಕ್ಷ ಬಿ.ಆರ್. ವಸಂತ್, ಕಾರ್ಯದರ್ಶಿ ಕೆ.ಎಸ್. ಲೋಕೇಶ್, ಸಂಘಟನಾ ಕಾರ್ಯದರ್ಶಿ ಬಿ.ಎಸ್. ನಾಗರಾಜ್, ಕ್ರೀಡಾ ಕಾರ್ಯದರ್ಶಿ ಬಿ.ಎಸ್. ದಿಲೀಪ್, ನಿರ್ದೇಶಕರು ಹಾಗೂ ವಿವಿಧ ಪಕ್ಷಗಳ ಪ್ರಮುಖರು, ಸಂಘ-ಸAಸ್ಥೆಗಳ ಪದಾಧಿಕಾರಿಗಳು ಹಾಗೂ ಸಮಾಜದವರು ಉಪಸ್ಥಿತರಿದ್ದರು. ದೀಪಕ್ ಸ್ವಾಗತಿಸಿದರು. ಬಿ.ಎಂ. ಪ್ರತೀಪ್ ವಂದಿಸಿದರು.

- ದುಗ್ಗಳ ಸದಾನಂದ