ಸಿದ್ದಾಪುರ, ಆ. ೯: ಜಿಲ್ಲೆಯಲ್ಲಿ ವನ್ಯಪ್ರಾಣಿಗಳ ಮತ್ತು ಮಾನವ ಸಂಘರ್ಷ ಮುಂದುವರಿದಿದ್ದು, ಹಾಡಹಗಲೇ ಕಾಡಾನೆ ದಾಳಿಗೆ ಸಿಲುಕಿ ತೋಟದ ಕಾರ್ಮಿಕರೊಬ್ಬರು ಗಂಭೀರ ಗಾಯಗೊಂಡು ಸಾವನ್ನಪ್ಪಿದ ಘಟನೆ ನಡೆದಿದೆ.
ಇಂದು ಬೆಳಿಗ್ಗೆ ಅಂದಾಜು ೯ ಗಂಟೆಗೆ ವೀರಾಜಪೇಟೆ ವಲಯ ಅರಣ್ಯ ವ್ಯಾಪ್ತಿಯ ಅಮ್ಮತ್ತಿ ಶಾಖೆಯ ಅಮ್ಮತ್ತಿ ಸಮೀಪದ ಯಡೂರು ಗ್ರಾಮದಲ್ಲಿ ಅಲ್ಲಿನ ನಿವಾಸಿ ಬಲ್ಲಚಂಡ ಸುಬ್ರಮಣಿ ಎಂಬವರ ತೋಟದ ಲೈನ್ಮನೆಯಲ್ಲಿ ಕಳೆದ ಎರಡು ತಿಂಗಳಿನಿAದ ತನ್ನ ತಾಯಿಯೊಂದಿಗೆ ವಾಸವಾಗಿದ್ದ ಅವಿವಾಹಿತ ಕಾರ್ಮಿಕ ಅಣ್ಣಪ್ಪ (೪೦) ಕಾಫಿ ತೋಟದಲ್ಲಿ ಮಾಲೀಕರ ಹಸುವನ್ನು ಹುಡುಕಾಡುತ್ತಿದ್ದ ಸಂದರ್ಭ ಕಾಡಾನೆಯೊಂದು ಏಕಾಏಕಿ ದಾಳಿ ನಡೆಸಿದೆ.
ಪರಿಣಾಮ ಅಣ್ಣಪ್ಪನ ಬೆನ್ನಿಗೆ, ಸೊಂಟಕ್ಕೆ ಗಂಭೀರ ಗಾಯವಾಗಿದ್ದು, ಈ ಬಗ್ಗೆ ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ ಮೇರೆಗೆ ಸ್ಥಳಕ್ಕೆ ಬಂದ ವೀರಾಜಪೇಟೆ ವಲಯ ಅರಣ್ಯ ಅಧಿಕಾರಿ ಶಿವರಾಂ ಮತ್ತು ಅಮ್ಮತ್ತಿ ಶಾಖೆಯ ಉಪವಲಯ ಅರಣ್ಯ ಅಧಿಕಾರಿ ಮನೋಜ್ ಹಾಗೂ ಸಿಬ್ಬಂದಿ ಅರಣ್ಯ ಇಲಾಖೆಗೆ ಸೇರಿದ ಜೀಪಿನಲ್ಲಿ ಚಿಂತಾಜನಕ ಸ್ಥಿತಿಯಲ್ಲಿದ್ದ ಅಣ್ಣಪ್ಪನನ್ನು ಅಮ್ಮತ್ತಿಯ ಖಾಸಗಿ ಆಸ್ಪತ್ರೆಗೆ ಸಾಗಿಸಿ ಪ್ರಥಮ ಚಿಕಿತ್ಸೆ ಕೊಡಿಸಿದರು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಡಿಕೇರಿಯ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿತ್ತಾದರೂ ಚಿಕಿತ್ಸೆ ಫಲಿಸದೆ ಅಣ್ಣಪ್ಪ ಕೊನೆಯುಸಿರೆಳೆದಿದ್ದಾರೆ.
ಘಟನಾ ಸ್ಥಳಕ್ಕೆ ಹಾಗೂ ಆಸ್ಪತ್ರೆಗೆ ಸಿದ್ದಾಪುರ ಠಾಣಾಧಿಕಾರಿ ಮಂಜು ನಾಥ್ ಭೇಟಿ ನೀಡಿ ಮಾಹಿತಿ ಪಡೆದು ಪ್ರಕರಣ ದಾಖಲಿಸಿದ್ದಾರೆ.
ಗ್ರಾಮಸ್ಥರ ಒತ್ತಾಯ
ವೀರಾಜಪೇಟೆ ವಲಯ ಅರಣ್ಯ ವ್ಯಾಪ್ತಿಯ ಅಮ್ಮತ್ತಿ ಶಾಖೆಯ ವ್ಯಾಪ್ತಿಗೆ ಒಳಪಡುವ ಕಣ್ಣಂಗಾಲ ಯಡೂರು ,ಹಚ್ಚಿನಾಡು ಗ್ರಾಮದಲ್ಲಿ ಕಾಡಾನೆಗಳ ಹಿಂಡು ಕಾಫಿ ತೋಟಗಳಲ್ಲಿ ಬೀಡು ಬಿಟ್ಟು ದಾಂಧಲೆ ನಡೆಸುತ್ತಾ ಕೃಷಿ ಫಸಲುಗಳನ್ನು ನಾಶಗೊಳಿಸುತ್ತಿವೆ. ಅಲ್ಲದೆ ಮಾನವನ ಮೇಲೂ ದಾಳಿ ನಡೆಸುತ್ತಿವೆ.
ಈ ಹಿನ್ನೆಲೆಯಲ್ಲಿ ಗ್ರಾಮಸ್ಥರು ಇತ್ತೀಚೆಗೆ ಅರಣ್ಯ ಇಲಾಖೆಯ ಅಧಿಕಾರಿಗಳ ಸಮ್ಮುಖದಲ್ಲಿ ಸಭೆ ನಡೆಸಿ ಆನೆಗಳನ್ನು ಕಾರ್ಯಾಚರಣೆ ನಡೆಸಿ ಓಡಿಸುವ ಕಾರ್ಯವನ್ನು ಸ್ಥಗಿತಗೊಳಿಸಿ, ಆನೆಗಳ ಹಾವಳಿಯನ್ನು ತಡೆಗಟ್ಟಲು ಶಾಶ್ವತ ಯೋಜನೆಯನ್ನು ರೂಪಿಸಬೇಕೆಂದು ಒತ್ತಾಯಿಸಿದ್ದರು. ಇದೀಗ ಕಾಡಾನೆ ದಾಳಿಯಿಂದಾಗಿ ಕಾರ್ಮಿಕ ಬಲಿಯಾಗಿರುವ ಘಟನೆಯಿಂದಾಗಿ ಗ್ರಾಮಸ್ಥರು ಮತ್ತು ಕಾರ್ಮಿಕರು ಭಯಭೀತರಾಗಿದ್ದಾರೆ.
ಪರಿಹಾರ ವಿತರಣೆ
ಕಾಡಾನೆ ದಾಳಿಗೆ ಸಿಲುಕಿ ಸಾವನ್ನಪ್ಪಿದ ಕಾರ್ಮಿಕ ಅಣ್ಣಪ್ಪನ ಕುಟುಂಬಕ್ಕೆ ಶಾಸಕ ಪೊನ್ನಣ್ಣ ಅವರು ಮಡಿಕೇರಿಗೆ ತೆರಳಿ, ಜಿಲ್ಲಾ ಆಸ್ಪತ್ರೆಯಲ್ಲಿ ಸಾಂತ್ವನ ಹೇಳಿದರು. ಬಳಿಕ ಸರ್ಕಾರದ ೪ಐದನೇ ಪುಟಕ್ಕೆ
(ಮೊದಲ ಪುಟದಿಂದ) ವತಿಯಿಂದ ನೀಡುವ ರೂ.೨೦ ಲಕ್ಷ ಪರಿಹಾರದಲ್ಲಿ ತುರ್ತಾಗಿ ರೂ. ೫ ಲಕ್ಷ ಪರಿಹಾರ ಚೆಕ್ನ್ನು ಅಣ್ಣಪ್ಪನ ತಂಗಿಗೆ ಹಸ್ತಾಂತರ ಮಾಡಲಾಯಿತು.
ಈ ಸಂದರ್ಭ ಪೊನ್ನಣ್ಣ ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ಘಟನೆ ಸಂಬAಧ ಮಾಹಿತಿ ಕಲೆ ಹಾಕಿದರು. ಅಗತ್ಯ ಕ್ರಮಕೈಗೊಳ್ಳುವಂತೆ ನಿರ್ದೇಶನ ನೀಡಿದರು. ವೀರಾಜಪೇಟೆ ವಲಯ ಅರಣ್ಯ ಅಧಿಕಾರಿ ಶಿವರಾಂ ಹಾಗೂ ಉಪವಲಯ ಅರಣ್ಯ ಅಧಿಕಾರಿ ಮನೋಜ್ ಹಾಜರಿದ್ದರು.
-ವಾಸು ಆಚಾರ್ಯ