ವೀರಾಜಪೇಟೆ, ಆ. ೮: ಸೋಮವಾರಪೇಟೆ ತಾಲೂಕಿನ ಜಂಬೂರಿನಲ್ಲಿ ಇತ್ತೀಚೆಗೆ ಮರ ಬಿದ್ದು ಮೃತಪಟ್ಟ ಅಸ್ಸಾಂ ಮೂಲದ ಇಬ್ಬರು ಕಾರ್ಮಿಕರ ಪರಿಹಾರ ವಿಚಾರದಲ್ಲಿ ಕೆಲವು ರಾಜಕೀಯ ಪಕ್ಷಗಳು ಲಾಭ ಪಡೆದುಕೊಳ್ಳಲು ಯತ್ನಿಸುತ್ತಿರುವುದನ್ನು ಯುನೈಟೆಡ್ ಪ್ಲಾಂಟೇಶನ್ ವರ್ಕರ್ಸ್ ಯೂನಿಯನ್ (ಎಐಟಿಯುಸಿ) ಖಂಡಿಸಿದೆ.
ಯುನೈಟೆಡ್ ಪ್ಲಾಂಟೇಶನ್ ವರ್ಕರ್ಸ್ ಯೂನಿಯನ್ ಕೊಡಗು ಶಾಖೆ ವತಿಯಿಂದ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಸಿ. ಧರ್ಮರಾಜ್, ವಾಸ್ತವಾಂಶವನ್ನು ಮುಂದಿಟ್ಟು ಮಾತನಾಡಿ ‘ಕೊಡಗು ಜಿಲ್ಲೆಯಲ್ಲಿ ೨೦೦೪ ರಿಂದಲೂ ನಮ್ಮ ಪ್ಲಾಂಟೇಶನ್ ಸಂಘಟನೆ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ. ತೋಟಗಳಲ್ಲಿ ಅನಾಹುತ ಸಂಭವಿಸಿದಾಗ ಕಾರ್ಮಿಕ ಸಂಘಟನೆ ಮತ್ತು ಮಾಲೀಕರ ಸಂಘಟನೆಗಳು ಜಂಟಿಯಾಗಿ ಮಾತುಕತೆ ನಡೆಸಿ ಪರಿಹಾರ ಒದಗಿಸುತ್ತವೆ. ದುರಂತ ಸಂಭವಿಸಿದ ದಿನವೇ ನಾವು ಐಆರ್ ಅಧಿಕಾರಿಯೊಂದಿಗೆ ಸಂಧಾನ ನಡೆಸಿ, ಕಂಪೆನಿಯಿAದ ಮೃತರ ಕುಟುಂಬಗಳಿಗೆ ತಲಾ ರೂ. ೫ ಲಕ್ಷದಂತೆ ಈಗಾಗಲೇ ರೂ. ೧೦ ಲಕ್ಷ ಪರಿಹಾರ ವಿತರಿಸಲಾಗಿದೆ. ಮರಣ ಪ್ರಮಾಣಪತ್ರ ಬಂದ ನಂತರ ಪಿಎಫ್ ಒಳಗೊಂಡAತೆ ಒಟ್ಟು ರೂ. ೩೦ ಲಕ್ಷದಷ್ಟು ಮೊತ್ತ ಎರಡೂ ಕುಟುಂಬಗಳಿಗೆ ಸಿಗಲಿದೆ. ಆದರೆ, ಈ ಹೋರಾಟವನ್ನು ತಾವೇ ಮಾಡಿದ್ದು ಎಂದು ಕೆಲವು ರಾಜಕೀಯ ಪಕ್ಷಗಳು ಹೇಳಿಕೊಳ್ಳುತ್ತಿರುವುದು ಹಾಸ್ಯಾಸ್ಪದ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಒಂದು ರಾಜಕೀಯ ಪಕ್ಷದ ಅಧ್ಯಕ್ಷರು ಪರಿಹಾರ ನೀಡಿರುವುದಾಗಿ ಹೇಳಿರುವುದು ರಾಜಕೀಯ ಪ್ರೇರಿತ ಹಾಗೂ ವಾಸ್ತವಕ್ಕೆ ವಿರುದ್ಧ ಎಂದು ಹೇಳಿದರು. ಇದೇ ವೇಳೆ, ಸಂಘಟನೆಯ ಕಾರ್ಯದರ್ಶಿ ಹೆಚ್.ಎಂ. ಸೋಮಪ್ಪ ಅವರ ನಡೆಗೆ ಅಸಮಾಧಾನ ವ್ಯಕ್ತಪಡಿಸಿದ ಅವರು, "ಸೋಮಪ್ಪನವರು ಕಾರ್ಯದರ್ಶಿ ಹುದ್ದೆಯಲ್ಲಿದ್ದು, ತಾವೇ ಜಿಲ್ಲಾಧ್ಯಕ್ಷರೆಂದು ಹೇಳಿಕೊಳ್ಳುತ್ತಿದ್ದಾರೆ.
ಕಮ್ಯುನಿಸ್ಟ್ ಪಕ್ಷದ ಬೆಂಬಲಿತ ಎಐಟಿಯುಸಿ ಸಂಘಟನೆಯಲ್ಲಿ ಇದ್ದುಕೊಂಡು, ಕಾಂಗ್ರೆಸ್‌ನ ವ್ಯಕ್ತಿಗೆ ಜಿಲ್ಲಾಧ್ಯಕ್ಷ ಸ್ಥಾನ ನೀಡಬೇಕು ಎಂದು ಸಮಿತಿಯ ಗಮನಕ್ಕೆ ತರದೆ ಸುಳ್ಳು ಹೇಳಿಕೆ ನೀಡುತ್ತಿದ್ದಾರೆ. ಶೀಘ್ರದಲ್ಲೇ ಅವರ ವಿರುದ್ಧ ಸೂಕ್ತ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು. ಗೋಷ್ಠಿಯಲ್ಲಿ ಎಐಟಿಯುಸಿ ಕಾರ್ಯದರ್ಶಿ ಜಿ. ರಮೇಶ್, ಕಾಫಿನಾಡು ಕಟ್ಟಡ ಕಾರ್ಮಿಕ ಸಂಘಟನೆಯ ಉಪಾಧ್ಯಕ್ಷ ಸೀತಾರಾಂ ಹಾಗೂ ಎಐಟಿಯುಸಿ ದಲಿತ ಸಂಘಟನೆಯ ರಾಜ್ಯ ಉಪಾಧ್ಯಕ್ಷ ರಮೇಶ್ ಮಾಯಮುಡಿ ಉಪಸ್ಥಿತರಿದ್ದರು.