ಕುಶಾಲನಗರ, ಆ. ೮: ಕುಶಾಲನಗರದಲ್ಲಿ ನಿರ್ಮಾಣಗೊಂಡಿರುವ ಕಲಾಭವನವನ್ನು ಸದ್ಯದಲ್ಲಿ ಅಧಿಕೃತವಾಗಿ ಲೋಕಾರ್ಪಣೆ ಮಾಡುವ ಮೂಲಕ ಕಲೆ, ಸಾಂಸ್ಕೃತಿಕ ಚಟುವಟಿಕೆ ಕಾರ್ಯಕ್ರಮಗಳಿಗೆ ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮೈಸೂರು ವಿಭಾಗದ ಜಂಟಿ ನಿರ್ದೇಶಕರಾದ ನಿರ್ಮಲ ಮಠಪತಿ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಅವರು ಇತ್ತೀಚಿಗೆ ಕುಶಾಲನಗರಕ್ಕೆ ಭೇಟಿ ನೀಡಿದ ಸಂದರ್ಭ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ್ದು, ನಿರ್ಮಾಣ ಹಂತದಲ್ಲಿರುವ ಕಲಾಭವನ ಕಟ್ಟಡ ಕಾಮಗಾರಿ ಬಹುತೇಕ ಪೂರ್ಣಗೊಳ್ಳುತ್ತಿದೆ.
ಕಟ್ಟಡ ಸಂಪೂರ್ಣ ಪೂರ್ಣಗೊಳ್ಳದಿದ್ದರೂ ಕೆಲವು ಕಾರ್ಯಕ್ರಮಗಳಿಗೆ ಬಳಕೆ ಮಾಡುತ್ತಿರುವ ಬಗ್ಗೆ ಪ್ರತಿಕ್ರಿಯೆ ವ್ಯಕ್ತಪಡಿಸಿದ ಅವರು ಕಟ್ಟಡವನ್ನು ನಿರ್ವಹಣೆಗಾಗಿ ತಮ್ಮ ಇಲಾಖೆ ಮೂಲಕ ಕುಶಾಲನಗರ ಪುರಸಭೆ ಸುಪರ್ದಿಗೆ ವಹಿಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ್, ಮಣಜೂರು ಮಂಜುನಾಥ್, ಕನ್ನಡ ಜಾಗೃತಿ ಸಮಿತಿಯ ಸದಸ್ಯರಾದ ಲೋಕೇಶ್ ಸಾಗರ್ ಮತ್ತಿತರರು ಇದ್ದರು.