ಮಡಿಕೇರಿ,ಆ.೭; ಅಪ್ರಾಪ್ತ ಮೊಮ್ಮಗಳ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಅಜ್ಜನಿಗೆ ಇಲ್ಲಿನ ನ್ಯಾಯಾಲಯ ದಂಡದೊAದಿಗೆ ಕಠಿಣ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ಅಪ್ರಾಪ್ತ ಬಾಲಕಿಯ ತಂದೆ ಮೃತಪಟ್ಟ ಹಿನ್ನೆಲೆಯಲ್ಲಿ ಆಕೆಯ ತಾಯಿ ಮರು ವಿವಾಹವಾಗಿದ್ದು, ನಂತರದಲ್ಲಿ ತಾಯಿಯೂ ಮೃತಪಟ್ಟ ಬಳಿಕ ಬಾಲಕಿಯ ಮಲ ತಂದೆ ಬಾಲಕಿಯನ್ನು ಮಕ್ಕಳ ಗೃಹದಲ್ಲಿ ಬಿಟ್ಟುಹೋಗಿದ್ದ. ನಂತರ ಬಾಲಕಿಯ ಅಜ್ಜ(ಮಲ ತಂದೆಯ ತಂದೆ) ಮಹದೇವ ಎಂಬಾತ ಬಾಲಕಿಯನ್ನು ಮಕ್ಕಳ ಗೃಹದಿಂದ ಬಿಡಿಸಿ ಆಕೆ ಹಾಗೂ ಆಕೆಯ ಸಹೋದರಿಯನ್ನು ಸಲಹುವದಾಗಿ ತನ್ನ ಮನೆಗೆ ಕರೆದುಕೊಂಡು ಹೋಗಿದ್ದಾನೆ. ನಂತರದ ದಿನಗಳಲ್ಲಿ ಆತ ಬಾಲಕಿಯ ಮೇಲೆ ಹಲವಾರು ಬಾರಿ ಲೈಂಗಿಕ ದೌರ್ಜನ್ಯವೆಸಗಿದ್ದು, ಆಕೆ ಈ ವಿಚಾರವನ್ನು ತನ್ನ ಶಾಲಾ ಶಿಕ್ಷಕಿಗೆ ತಿಳಿಸಿದ್ದಾಳೆ. ಈ ಬಗ್ಗೆ ಶಿಕ್ಷಕಿ ನೀಡಿದ ದೂರಿನ ಆಧಾರದಲ್ಲಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಠಾಣಾಧಿಕಾರಿ ಮಂಜುನಾಥ್ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.

ಪ್ರಕರಣದ ಕುರಿತು ವಿಚಾರಣೆ ನಡೆಸಿದ ಮೂರನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಸುರೇಂದ್ರ ಜಿ. ಅವರು ಆರೋಪ ಸಾಭೀತಾದ ಹಿನ್ನೆಲೆಯಲ್ಲಿ ಆರೋಪಿ ಮಹದೇವ್‌ಗೆ ಲೈಂಗಿಕ ಅತ್ಯಾಚಾರ ಅಪರಾಧಕ್ಕೆ ಪೋಕ್ಸೋ ಕಾಯ್ದೆಯಡಿ ೨೦ ವರ್ಷ ಕಠಿಣ ಸಜೆ ಮತ್ತು ರೂ.೨೦ಸಾವಿರ ದಂಡ ವಿಧಿಸಿದ್ದಾರೆ. ಇದಲ್ಲದೆ ನೊಂದ ಬಾಲಕಿಗೆ ೯ಲಕ್ಷ ಪರಿಹಾರ ನೀಡಬೇಕೆಂದು ತೀರ್ಪಿನಲ್ಲಿ ಆದೇಶಿಸಿದ್ದಾರೆ. ಸರಕಾರದ ಪರ ವಿಶೇಷ ಅಭಿಯೋಜಕ ಬಿ.ಎಸ್. ರುದ್ರಪ್ರಸನ್ನ ವಾದ ಮಂಡಿಸಿದರು.