ಮಡಿಕೇರಿ, ಆ. ೭: ಕೊಡಗು ವಿದ್ಯಾಲಯದ ಬೆಳ್ಳಿ ಹಬ್ಬದ ಅಂಗವಾಗಿ ಆಯೋಜಿಸಿರುವ ೨೫ನೇ ವರ್ಷದ ಅಂತರ್-ಶಾಲಾ ಚೆಸ್ ಪಂದ್ಯಾವಳಿಗೆ ಸೋಮವಾರ ಶಾಲೆಯ ಬಿ.ಕೆ. ಸುಬ್ಬಯ್ಯ ಆಡಿಟೋರಿಯಂನಲ್ಲಿ ಚಾಲನೆ ನೀಡಲಾಯಿತು.
ಪ್ರಾರ್ಥನೆಯೊಂದಿಗೆ ಕಾರ್ಯಕ್ರಮವನ್ನು ಉದ್ಘಾಟಿಸಿದ ಕೊಡಗು ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ನಿರ್ದೇಶಕಿ ಚಿನ್ಮಯಿ ಚಕ್ರವರ್ತಿ ಮಾತನಾಡಿ, ಚೆಸ್ ಕೇವಲ ಆಟವಲ್ಲ; ಅದು ವಿದ್ಯಾರ್ಥಿಗಳಲ್ಲಿ ಏಕಾಗ್ರತೆ, ತಾರ್ಕಿಕ ಚಿಂತನೆ, ನಿರ್ಧಾರ ಕೈಗೊಳ್ಳುವ ಸಾಮರ್ಥ್ಯ ಹಾಗೂ ಆತ್ಮವಿಶ್ವಾಸವನ್ನು ಬೆಳೆಸುವ ಬೌದ್ಧಿಕ ಕ್ರೀಡೆಯಾಗಿದೆ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಚೆಸ್ನಂತಹ ಕೌಶಲ್ಯಾಧಾರಿತ ಕ್ರೀಡೆಗಳಲ್ಲಿ ಹೆಚ್ಚಿನ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಬಿ.ಜಿ. ಅನಂತ ಶಯನ ಮಾತನಾಡಿ, ಇಂದಿನ ವೇಗದ ಜೀವನಶೈಲಿಯಲ್ಲಿ ತಾಳ್ಮೆ ಮತ್ತು ಏಕಾಗ್ರತೆ ಅತ್ಯಗತ್ಯವಾಗಿದೆ. ಚೆಸ್ ಆಟವು ವಿದ್ಯಾರ್ಥಿಗಳಲ್ಲಿ ಚಿಂತನಶಕ್ತಿ, ಯೋಜನಾ ಸಾಮರ್ಥ್ಯ, ಸಹನೆ ಹಾಗೂ ಸಮಸ್ಯೆಗಳನ್ನು ವಿಶ್ಲೇಷಿಸುವ ಕೌಶಲ್ಯವನ್ನು ವೃದ್ಧಿಸುತ್ತದೆ ಎಂದು ಹೇಳಿದರು.
ಈ ಸಂದರ್ಭ ಹಿರಿಯ ಚೆಸ್ ತರಬೇತುದಾರ ಶಂಕರ್ ನಾರಾಯಣ ಅವರು ರಚಿಸಿರುವ "ಊoತಿ ಣo Imಠಿಡಿove ಅhess" ಕೃತಿಯನ್ನು ಮುಖ್ಯ ಅತಿಥಿಗಳು ಬಿಡುಗಡೆ ಮಾಡಿದರು. ಚೆಸ್ ಕ್ಷೇತ್ರಕ್ಕೆ ಅವರು ಸಲ್ಲಿಸಿರುವ ವಿಶಿಷ್ಟ ಸೇವೆಯನ್ನು ಗುರುತಿಸಿ ಶಾಲೆಯ ವತಿಯಿಂದ ಅವರನ್ನು ಸನ್ಮಾನಿಸಲಾಯಿತು.
ಈ ವರ್ಷದ ಪಂದ್ಯಾವಳಿಯಲ್ಲಿ ಕೊಡಗು ಜಿಲ್ಲೆಯ ೧೮ ಶಾಲೆಗಳಿಂದ ಒಟ್ಟು ೧೨೦ ವಿದ್ಯಾರ್ಥಿಗಳು ಭಾಗವಹಿಸಿದ್ದು, ಮೂರು ದಿನಗಳ ಕಾಲ ವಿವಿಧ ವಯೋಮಾನದ ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿವೆ.
ಕಾರ್ಯಕ್ರಮದಲ್ಲಿ ಶಾಲಾ ಸಮಿತಿ ಸದಸ್ಯ ಗುರುದತ್ ಸಿ.ಎಸ್., ಪ್ರಾಂಶುಪಾಲೆ ಕೆ.ಎಸ್. ಸುಮಿತ್ರಾ, ಆಡಳಿತ ಮುಖ್ಯಸ್ಥ ರವಿ ಪಿ., ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಪೋಷಕರು ಉಪಸ್ಥಿತರಿದ್ದರು.
ವಿದ್ಯಾರ್ಥಿನಿ ಸಾನ್ವಿಕ ಸ್ವಾಗತಿಸಿದರು. ವಿದ್ಯಾರ್ಥಿನಿ ಆನ್ಯ ನಂಜಪ್ಪ ಮುಖ್ಯ ಅತಿಥಿಗಳನ್ನು ಪರಿಚಯಿಸಿದರು. ೨೫ ವರ್ಷಗಳ ಚೆಸ್ ಟೂರ್ನಮೆಂಟ್ ಕುರಿತು ಶಿಕ್ಷಕಿ ಸೋನಾ ಮುತ್ತಮ್ಮ ವರದಿ ವಾಚಿಸಿದರು. ಹಿರಿಯ ಚೆಸ್ ತರಬೇತುದಾರ ಶಂಕರ್ ನಾರಾಯಣ ಅವರ ಪರಿಚಯವನ್ನು ಶಿಕ್ಷಕಿ ಭಾರತಿ ಕೆ.ಕೆ. ಮಾಡಿಕೊಟ್ಟರು. ವಿದ್ಯಾರ್ಥಿನಿ ಅಮೃತ ನೀಲಮ್ಮ ವಂದನಾರ್ಪಣೆ ಸಲ್ಲಿಸಿದರು.