ಮಡಿಕೇರಿ, ಆ. ೬: ರಾಜ್ಯದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಇತರೆ ಹಿಂದುಳಿದ ವರ್ಗಗಳ ಮೀಸಲಾತಿ ಪ್ರಮಾಣವನ್ನು ೨೦೨೨ರಲ್ಲಿ ಶೇ.೫೬ಕ್ಕೆ ಹೆಚ್ಚಿಸಲಾಗಿದ್ದರೂ ಅದು ಇನ್ನೂ ಜಾರಿಗೆ ಬಂದಿಲ್ಲ. ಆದ್ದರಿಂದ ಸಂವಿಧಾನದ ೯ನೇ ಪರಿಚ್ಛೇದಕ್ಕೆ ಸೇರಿಸುವ ಮೂಲಕ ಶಿಕ್ಷಣ ಹಾಗೂ ಉದ್ಯೋಗದಲ್ಲಿ ಸಮುದಾಯಗಳಿಗೆ ನ್ಯಾಯ ಒದಗಿಸಬೇಕು ಎಂದು ರಾಜ್ಯ ಸಮಾನ ಮನಸ್ಕರ ವೇದಿಕೆಯ ಅಧ್ಯಕ್ಷ, ಮಾಜಿ ಸಂಸದ ವಿ.ಎಸ್. ಉಗ್ರಪ್ಪ ಆಗ್ರಹಿಸಿದರು.

ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನ್ಯಾಯಮೂರ್ತಿ ಎಚ್.ಎನ್. ನಾಗಮೋಹನದಾಸ್ ಆಯೋಗದ ಶಿಫಾರಸಿನಂತೆ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ಪರಿಶಿಷ್ಟ ಜಾತಿಯ ಮೀಸಲಾತಿಯನ್ನು ಶೇ.೧೫ರಿಂದ ಶೇ.೧೭ಕ್ಕೆ ಹಾಗೂ ಪರಿಶಿಷ್ಟ ಪಂಗಡದ ಮೀಸಲಾತಿಯನ್ನು ಶೇ.೩ರಿಂದ ಶೇ.೭ಕ್ಕೆ ಹೆಚ್ಚಿಸಿತ್ತು. ಇದರಿಂದ ರಾಜ್ಯದಲ್ಲಿ ಒಟ್ಟು ಮೀಸಲಾತಿ ಪ್ರಮಾಣ ಶೇ.೫೬ಕ್ಕೆ ಏರಿಕೆಯಾಗಿತ್ತು ಎಂದು ತಿಳಿಸಿದರು.

ಆದರೆ, ಈ ಆದೇಶವನ್ನು ಕೆಲವರು ನ್ಯಾಯಾಲಯದಲ್ಲಿ ಪ್ರಶ್ನಿಸಿದ ಹಿನ್ನೆಲೆಯಲ್ಲಿ ತಡೆಯಾಜ್ಞೆ ಜಾರಿಯಾಗಿದ್ದು, ಹಿಂದಿನ ಮೀಸಲಾತಿ ವ್ಯವಸ್ಥೆಯೇ ಮುಂದುವರಿದಿದೆ. ಈ ಕುರಿತು ರಾಜ್ಯ ಸರ್ಕಾರವು ಕೇಂದ್ರ ಸರ್ಕಾರಕ್ಕೆ ಶಿಫಾರಸು ಪತ್ರ ಕಳುಹಿಸಬೇಕು. ಕೇಂದ್ರ ಸರ್ಕಾರವೂ ಈ ವಿಷಯದಲ್ಲಿ ವಿಳಂಬ ಮಾಡದೆ ಅಗತ್ಯ ನಿರ್ಧಾರ ಕೈಗೊಂಡು ಮೀಸಲಾತಿ ಜಾರಿಗೆ ಕ್ರಮವಹಿಸಬೇಕು ಎಂದು ಒತ್ತಾಯಿಸಿದರು.

ಮೀಸಲಾತಿ ಯಾರ ಸ್ವತ್ತಲ್ಲ. ಅದು ಸಂವಿಧಾನಾತ್ಮಕ ಹಕ್ಕಾಗಿದೆ. ಈಗಾಗಲೇ ತಮಿಳುನಾಡಿನಲ್ಲಿ ಮೀಸಲಾತಿಯನ್ನು ೯ನೇ ಪರಿಚ್ಛೇಧಕ್ಕೆ ಸೇರಿಸಲಾಗಿದೆ. ರಾಜ್ಯದ ಸಂಸದರು ಕೂಡ ಈ ವಿಷಯದಲ್ಲಿ ಮೌನ ವಹಿಸಿರುವುದು ಸರಿಯಲ್ಲ. ಪ್ರಧಾನಿ ನರೇಂದ್ರ ಮೋದಿ ಅವರು ಈ ಕುರಿತು ಗಮನಹರಿಸಬೇಕು. ಈ ನಿಟ್ಟಿನಲ್ಲಿ ಸಂಸದರು ಗಮನ ಸೆಳೆಯುವ ಕೆಲಸ ಮಾಡಬೇಕು. ಸರ್ವಪಕ್ಷ ನಿಯೋಗ ತೆರಳಿ ಕೇಂದ್ರಕ್ಕೆ ಒತ್ತಡ ಹೇರಬೇಕಾಗಿದೆ ಎಂದರು. ೪ಮೂರನೇ ಪುಟಕ್ಕೆ

(ಮೊದಲ ಪುಟದಿಂದ) ೯ನೇ ಪರಿಚ್ಛೇದದಲ್ಲಿ ಸೇರಿಸಲಾದ ಕಾನೂನುಗಳಿಗೆ ಸಾಮಾನ್ಯವಾಗಿ ನ್ಯಾಯಾಲಯದಲ್ಲಿ ಸವಾಲು ಎದುರಾಗುವ ಸಾಧ್ಯತೆ ಕಡಿಮೆಯಾಗುತ್ತದೆ. ಮೂಲಭೂತ ಹಕ್ಕುಗಳು ಅಥವಾ ಸಂವಿಧಾನದ ಮೂಲ ರಚನೆಗೆ ವಿರುದ್ಧವಾದರೆ ನ್ಯಾಯಾಲಯ ಪರಿಶೀಲಿಸಬಹುದು.

ಮೀಸಲಾತಿ ಜಾರಿಗೆ ಸ್ಥಿರತೆ ದೊರೆಯುತ್ತದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಇತರೆ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ ಸರ್ಕಾರಿ ಉದ್ಯೋಗ ಹಾಗೂ ಶಿಕ್ಷಣ ಸಂಸ್ಥೆಗಳಲ್ಲಿ ಹೆಚ್ಚಿದ ಮೀಸಲಾತಿಯ ಪ್ರಯೋಜನ ದೊರೆಯಬಹುದು. ಸಾಮಾಜಿಕ ನ್ಯಾಯದ ಉದ್ದೇಶಕ್ಕೆ ಬಲ ಬರುತ್ತದೆ ಎಂದು ಉಗ್ರಪ್ಪ ಹೇಳಿದರು.

ಗೋಷ್ಠಿಯಲ್ಲಿ ವೇದಿಕೆಯ ಕಾರ್ಯಾಧ್ಯಕ್ಷ ಎಂ. ನರಸಿಂಹಯ್ಯ, ಪ್ರಧಾನ ಕಾರ್ಯದರ್ಶಿ ಜಯಶ್ರೀ, ಖಜಾಂಚಿ ಇ. ರಾಜಪ್ಪ, ಪರಿಶಿಷ್ಟ ಜಾತಿ. ಪಂಗಡ ನಿವೃತ್ತ ನೌಕರರ ಸಂಘದ ಜಿಲ್ಲಾಧ್ಯಕ್ಷ ಎಸ್. ಸಿದ್ದಪ್ಪ, ಜಿಲ್ಲಾ ವಾಲ್ಮೀಕಿ ನಾಯಕ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಅಶೋಕ್ ಹಾಜರಿದ್ದರು.