ವೀರಾಜಪೇಟೆ, ಆ. ೬: ಬೆಳ್ಳರಿಮಾಡು ಗ್ರಾಮದಲ್ಲಿ ಕಾಡಾನೆ ತೋಟಕ್ಕೆ ನುಗ್ಗಿ ಅಪಾರ ಪ್ರಮಾಣದ ಬೆಳೆ ಹಾನಿ ಮಾಡಿರುವ ಘಟನೆ ನಡೆದಿದೆ.
ಗ್ರಾಮದ ನಿವಾಸಿ ಬಿ.ಪಿ. ರವಿ ಮನು ಎಂಬವರಿಗೆ ಸೇರಿದ ತೋಟಕ್ಕೆ ದಿಢೀರ್ ದಾಳಿ ಮಾಡಿದ ಕಾಡಾನೆ, ತೋಟದಲ್ಲಿದ್ದ ಕಾಫಿ, ಬಾಳೆ ಹಾಗೂ ಅಡಿಕೆ ಗಿಡಗಳನ್ನು ತುಳಿದು, ಮುರಿದು ನಾಶಪಡಿಸಿದೆ. ಇದರಿಂದಾಗಿ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಾನಿಗೊಳಗಾದ ಬೆಳೆಗಳ ಸರ್ವೆ ನಡೆಸಿದ ಅಧಿಕಾರಿಗಳು ಸೂಕ್ತ ಪರಿಹಾರದ ಭರವಸೆ ನೀಡಿದ್ದಾರೆ.
ಈ ಭಾಗದಲ್ಲಿ ಕಾಡಾನೆಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಕೃಷಿಕರು ನೆಮ್ಮದಿಯಿಂದ ಜೀವನ ನಡೆಸದಂತಾಗಿದೆ. ಅರಣ್ಯ ಇಲಾಖೆ ತಕ್ಷಣವೇ ಕಾರ್ಯಪ್ರವೃತ್ತರಾಗಿ ಕಾಡಾನೆಗಳನ್ನು ಅರಣ್ಯಕ್ಕೆ ಅಟ್ಟಬೇಕು ಹಾಗೂ ಸಂತ್ರಸ್ತ ರೈತರಿಗೆ ಶೀಘ್ರವೇ ಸೂಕ್ತ ಪರಿಹಾರ ವಿತರಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.