ಚೆಯ್ಯಂಡಾಣೆ, ಆ. ೬: ನರಿಯಂದಡ ಗ್ರಾಮ ಪಂಚಾಯಿತಿ ಹಾಗೂ ಪಾರಾಣೆ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಟ್ಟ ಕೊಕೇರಿ ಹಾಗೂ ಪಾರಾಣೆ ಗ್ರಾಮದಲ್ಲಿ ಕಾಡಾನೆ ಹಾವಳಿ ಮಿತಿಮೀರಿದ್ದು ರೈತರು ಬೆಳೆದ ಕಾಫಿ ಮತ್ತಿತರ ಬೆಳೆಗಳನ್ನು ತುಳಿದು ನಾಶಪಡಿಸುತ್ತಿದೆ.

ಪಾರಾಣೆ ಗ್ರಾಮದ ಬಿಲ್ಲವರ ಹೊನ್ನಪ್ಪ, ಬೊಳಕಾರಂಡ ಶ್ಯಾಮ್ ಸೊಮ್ಮಣ್ಣ, ಅಬ್ದುಲ್ಲ, ಬಷೀರ್ ಹಾಗೂ ಕೊಕೇರಿ ಗ್ರಾಮದ ಮಚ್ಚಂಡ ಸುಮತಿ ಕುಂಞಪ್ಪ ಹಾಗೂ ಮತ್ತಿತರ ಕುಟುಂಬಸ್ಥರ ತೋಟದಲ್ಲಿ ಕಾಡಾನೆಗಳ ಹಿಂಡು ಕಳೆದ ಒಂದು ವಾರದಿಂದ ತೋಟದಲ್ಲೇ ಬೀಡುಬಿಟ್ಟಿದ್ದು ಕಾಫಿ, ಬಾಳೆ, ಅಡಿಕೆ, ಬಟರ್ ಪ್ರೂಟ್ ಮತ್ತಿತರ ಗಿಡಗಳನ್ನು ತುಳಿದು ನಾಶಪಡಿಸಿದೆ.

ನಿರಂತರ ಕಾಡಾನೆ ದಾಳಿಯಾಗುತ್ತಿದ್ದರೂ ಅರಣ್ಯ ಇಲಾಖೆ ಮಾತ್ರ ಸ್ವಂದಿಸುತಿಲ್ಲ ಎಂದು ಗ್ರಾಮಸ್ಥರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳು ಕಾಡಾನೆ ತೋಟಕ್ಕೆ ನುಗ್ಗದ ರೀತಿಯಲ್ಲಿ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು, ಅಥವಾ ಕಾಡಾನೆಯನ್ನು ಸೆರೆ ಹಿಡಿದು ಬೇರೆಡೆ ಸ್ಥಳಾಂತರಿಸಬೇಕು. ನಷ್ಟ ಹೊಂದಿದ ತೋಟದ ಮಾಲೀಕರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿದ್ದಾರೆ.