ಬೆಂಗಳೂರು, ಆ.೫: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಮತ್ತೊಂದು ಪ್ರಮುಖ ಅಂತಾರಾಜ್ಯ ಮಾರ್ಗದಲ್ಲಿ ಹೊಸ ಬಸ್ ಸೇವೆಯನ್ನು ಆರಂಭಿಸಿದೆ. ಬೆಂಗಳೂರಿನಿAದ ಕೇರಳದ ಕಣ್ಣೂರಿಗೆ ಹೊಸ ‘ನಾನ್ ಎ.ಸಿ ಸ್ಲೀಪರ್’ ಬಸ್ ತಾ.೭ ರಿಂದ ಆರಂಭಗೊಳ್ಳಲಿದೆ.

ಕೆಎಸ್‌ಆರ್‌ಟಿಸಿಯ ಬೆಂಗಳೂರು ಕೇಂದ್ರ ವಿಭಾಗದ ಬಸ್ ಡಿಪೋದಿಂದ ಈ ನೂತನ ಸೇವೆಯನ್ನು ಒದಗಿಸಲಾಗುತ್ತಿದ್ದು, ಮಡಿವಾಳದಿಂದ ತನ್ನ ಪ್ರಯಾಣವನ್ನು ಆರಂಭಿಸಲಿದೆ. ಮಡಿವಾಳದಿಂದ ಹೊರಟು ಶಾಂತಿನಗರ ಬಸ್ ನಿಲ್ದಾಣ, ಮೈಸೂರು ರಸ್ತೆ ಸ್ಯಾಟಲೈಟ್ ಬಸ್ ನಿಲ್ದಾಣ ಹಾಗೂ ಕೆಂಗೇರಿ ಬಸ್ ನಿಲ್ದಾಣಗಳ ಮೂಲಕ ಮುನ್ನಡೆಯಲಿದೆ. ತದನಂತರ ಮೈಸೂರು, ಹುಣಸೂರು, ಗೋಣಿಕೊಪ್ಪ, ವೀರಾಜಪೇಟೆ, ಇರಿಟ್ಟಿ ಮತ್ತು ತಲಶ್ಶೇರಿ (ತಲಚೇರಿ) ಮಾರ್ಗವಾಗಿ ಕಣ್ಣೂರು ತಲುಪಲಿದೆ. ಪ್ರಮುಖವಾಗಿ ಕೊಡಗು ಜಿಲ್ಲೆಯ ವೀರಾಜಪೇಟೆ ಹಾಗೂ ಕೇರಳದ ಗಡಿ ಭಾಗಗಳಿಗೆ ಪ್ರಯಾಣಿಸುವ ಸಾರ್ವಜನಿಕರಿಗೆ, ಉದ್ಯೋಗಿಗಳಿಗೆ ಮತ್ತು ಪ್ರವಾಸಿಗರಿಗೆ ಈ ಬಸ್ ಸೇವೆ ಅತ್ಯಂತ ಅನುಕೂಲಕರವಾಗಲಿದೆ.

ಮಡಿವಾಳದಿಂದ ರಾತ್ರಿ ೮:೩೬ಕ್ಕೆ ಹೊರಟು, ಬೆಳಗಿನ ಜಾವ ೦೩:೩೦ಗೆ ವೀರಾಜಪೇಟೆ ತಲುಪಲಿದೆ. ಬೆಳಗ್ಗಿನ ಜಾವ ೬:೩೦ಕ್ಕೆ ಕಣ್ಣೂರು ತಲುಪಲಿದೆ.