ಕುಶಾಲನಗರ, ಆ.೫: ಸ್ವಚ್ಛ ಕುಶಾಲನಗರ ಮತ್ತು ಸ್ವಚ್ಛ ಕಾವೇರಿ ಬಗ್ಗೆ ಕೂಡಲೇ ಗಮನಹರಿಸುವ ಕುರಿತು ಕರ್ನಾಟಕ ಲೋಕಾಯುಕ್ತ ಅಧಿಕಾರಿಗಳು ತಕ್ಷಣ ಕ್ರಮಕೈಗೊಂಡು ವರದಿ ನೀಡುವಂತೆ ಕುಶಾಲನಗರ ಪುರಸಭೆಗೆ ಸೂಚಿಸಿದ್ದಾರೆ.
ಜುಲೈ ತಿಂಗಳಲ್ಲಿ ಕರ್ನಾಟಕ ಲೋಕಾಯುಕ್ತಕ್ಕೆ ಸಾರ್ವಜನಿಕ ದೂರು ಸ್ವೀಕಾರ ಸಭೆಯಲ್ಲಿ ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿಯ ಪ್ರಮುಖರು ದೂರು ಸಲ್ಲಿಸಿರುವ ಹಿನ್ನೆಲೆಯಲ್ಲಿ ಕಾವೇರಿ ನದಿಗೆ ಪಟ್ಟಣದಿಂದ ತ್ಯಾಜ್ಯ ನೇರವಾಗಿ ಸೇರುವ ಬಗ್ಗೆ ಪರಿಶೀಲಿಸಿ ತಕ್ಷಣ ಕ್ರಮ ಕೈಗೊಳ್ಳುವಂತೆ ಲೋಕಾಯುಕ್ತ ಅಧಿಕಾರಿಗಳು ಕುಶಾಲನಗರ ಪುರಸಭೆಗೆ ಸೂಚನೆ ನೀಡಿದ್ದಾರೆ.
ಕುಶಾಲನಗರ ಪಟ್ಟಣದ ಸುತ್ತಮುತ್ತ ಹರಿಯುತ್ತಿರುವ ಕಾವೇರಿ ನದಿಯಲ್ಲಿ ದಿನನಿತ್ಯ ಬೆಳಿಗ್ಗೆ ಮತ್ತು ನಿರಂತರವಾಗಿ ಹೊರರಾಜ್ಯಗಳಿಂದ ಕಾರ್ಮಿಕರಾಗಿ ಬಂದು ದುಡಿಯುತ್ತಿರುವ ಜನರು ಹಾಗೂ ಕೆಲವು ಪ್ರವಾಸಿಗರು ಮೂಲಭೂತ ಸೌಲಭ್ಯಗಳ ಕೊರತೆಯ ನಡುವೆ ಜೀವನದಿ ಕಾವೇರಿಯನ್ನು ತಮ್ಮ ಬಯಲು ಶೌಚಾಲಯವನ್ನಾಗಿ ಬಳಸಿಕೊಳ್ಳುತ್ತಿದ್ದು, ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.
ಸ್ವಚ್ಛ ಪಟ್ಟಣ ಸ್ವಚ್ಛ ಕಾವೇರಿ ಉದ್ದೇಶದೊಂದಿಗೆ ರೂಪುಗೊಂಡ ಸರಕಾರದ ಒಳಚರಂಡಿ ಯೋಜನೆ ಕಾಮಗಾರಿ ಕಳೆದ ೧೨ ವರ್ಷಗಳು ಕಳೆದರೂ ಪೂರ್ಣಗೊಳ್ಳದ ಬಗ್ಗೆ ಲೋಕಾಯುಕ್ತರು ಶೀಘ್ರ ಕ್ರಮ ಕೈಗೊಳ್ಳಲು ಸೂಚಿಸಿದ್ದಾರೆ. ಅಧಿಕಾರಿಗಳ ನಿರ್ಲಕ್ಷö್ಯ ಈ ಯೋಜನೆಯಲ್ಲಿ ಎದ್ದು ಕಾಣುತ್ತಿದೆ. ಅಪೂರ್ಣಗೊಂಡ ಕಾಮಗಾರಿಯಿಂದ ಪಟ್ಟಣದ ತ್ಯಾಜ್ಯಗಳು ನೇರವಾಗಿ ಕಾವೇರಿ ನದಿ ಸೇರುತ್ತಿರುವುದು ಕಂಡು ಬಂದಿದೆ. ಇದರಿಂದ ನದಿ ನೀರಿನ ಗುಣಮಟ್ಟ ಸಂಪೂರ್ಣ ಕ್ಷೀಣಗೊಂಡು ನೀರನ್ನು ಬಳಸಲು ಆಗದ ಸ್ಥಿತಿ ಎದುರಾಗಿದೆ ಎಂದು ಲೋಕಾಯುಕ್ತ ಅಧಿಕಾರಿಗಳು ತಿಳಿಸಿದ್ದಾರೆ. ಇದರೊಂದಿಗೆ ಕುಶಾಲನಗರ ಮಡಿಕೇರಿ ರಸ್ತೆಯ ಅಂಚಿನಲ್ಲಿರುವ ಐತಿಹಾಸಿಕ ತಾವರೆಕೆರೆಯ ನಿರ್ವಹಣೆ ನಡೆಯದೇ ಇರುವುದು ಮತ್ತು ಸಮೀಪದ ಕಟ್ಟಡಗಳಿಂದ ತ್ಯಾಜ್ಯವು ಕೆರೆ ಒಡಲು ಸೇರುತ್ತಿದ್ದು, ಈ ಮೂಲಕ ಕೆರೆಯ ನೀರು ಸಂಪೂರ್ಣ ಕಲುಷಿತಗೊಂಡು ಅಪಾಯಕಾರಿ ಸ್ಥಿತಿಗೆ ಒಳಗಾಗಿದೆ. ಕೆರೆಯ ಭಾಗದಲ್ಲಿ ಪಟ್ಟಣದ ಅನುಪಯುಕ್ತ ವಸ್ತುಗಳನ್ನು ತುಂಬಿಸುವುದರಿAದ ಅಕ್ರಮವಾಗಿ ಒತ್ತುವರಿ ಮಾಡಿ ನಿಯಮ ಬಾಹಿರವಾಗಿ ಕೆರೆಯ ಮೇಲೆ ರಸ್ತೆ ಮಾಡಿರುವುದು ಗೋಚರಿಸಿದೆ. ಈ ಬಗ್ಗೆ ಕಚೇರಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರೂ ಕೆರೆಯ ಅಭಿವೃದ್ಧಿ ಬಗ್ಗೆ ಗಮನ ಹರಿಸಿಲ್ಲ ಎನ್ನುವ ದೂರುಗಳು ಬಂದಿದೆ ಎಂಬುದಾಗಿ ಲೋಕಾಯುಕ್ತ ಅಧಿಕಾರಿಗಳು ಪುರಸಭಾ ಮುಖ್ಯ ಅಧಿಕಾರಿಗಳಿಗೆ ಪತ್ರ ಮುಖೇನ ತಿಳಿಸಿದ್ದು, ಈ ಬಗ್ಗೆ ಕೈಗೊಂಡ ಕ್ರಮದ ಬಗ್ಗೆ ಕೂಡಲೇ ವರದಿ ನೀಡುವಂತೆ ಸೂಚಿಸಿದ್ದಾರೆ.