ಸೋಮವಾರಪೇಟೆ, ಆ. ೪: ತಾಲೂಕಿನ ಗಣಗೂರು ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಗರ್ಭಿಣಿಯರಿಗೆ ಹುಳು ತುಂಬಿದ ಆಹಾರದ ಕಿಟ್‌ಗಳನ್ನು ವಿತರಣೆ ಮಾಡಲಾಗಿದೆ ಎಂಬ ಆರೋಪ ವ್ಯಕ್ತವಾಗಿದೆ.

ಇದರೊಂದಿಗೆ ಅವಧಿ ಮುಕ್ತಾಯವಾಗಿ ಒಂದೂವರೆ ತಿಂಗಳು ಕಳೆದಿರುವ ಕಿಟ್‌ಗಳನ್ನು ವಿತರಿಸುವ ಮೂಲಕ ಗರ್ಭಿಣಿಯರ ಆರೋಗ್ಯದ ಬಗ್ಗೆ ಇಲಾಖೆ ನಿರ್ಲಕ್ಷö್ಯ ವಹಿಸುತ್ತಿದೆ ಎಂದು ಫಲಾನುಭವಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸರಿಯಾದ ಸಮಯಕ್ಕೆ ಆಹಾರದ ಕಿಟ್ ವಿತರಣೆ ಮಾಡುತ್ತಿಲ್ಲ. ಇಂದು ಜೂನ್ ತಿಂಗಳ ಆಹಾರದ ಕಿಟ್ ನೀಡಿದ್ದು, ಇದರಲ್ಲಿ ಒಂದು ಕೆ.ಜಿ. ಹೆಸರುಕಾಳು, ಒಂದು ಕೆ.ಜಿ. ಗೋಧಿ, ೧೦೦ ಗ್ರಾಂ ಹಾಲು ಪುಡಿ ಮತ್ತು ಎರಡು ಕೆ.ಜಿ. ಅಕ್ಕಿ ಇದೆ. ಇದರಲ್ಲಿರುವ ಕಾಳುಗಳನ್ನು ಈಗಾಗಲೇ ಹುಳಗಳು ಅರ್ಧ ತಿಂದಿವೆ. ಇದನ್ನು ಗರ್ಭಿಣಿಯರು ತಿನ್ನಲು ಸಾಧ್ಯವೇ? ಎಂದು ಪ್ರಶ್ನಿಸಿರುವ ಫಲಾನುಭವಿಗಳು, ೧೦೦ ಗ್ರಾಂ ಹಾಲು ಪುಡಿಯನ್ನು ಒಂದು ಪ್ಲಾಸ್ಟಿಕ್ ಕವರ್‌ನಲ್ಲಿ ಹಾಕಿ ಕೊಟ್ಟಿದ್ದಾರೆ. ಇದು ಯಾವ ದಿನಾಂಕದ ಪುಡಿ ಎಂಬುದು ಗೊತ್ತಿಲ್ಲ. ಇವುಗಳನ್ನು ಬಳಸಲು ಭಯಪಡುವ ಸನ್ನಿವೇಶ ಎದುರಾಗಿದೆ ಎಂದು ದೂರಿದ್ದಾರೆ.

೨೩.೦೩.೨೦೨೬ ರಂದು ಪ್ಯಾಕಿಂಗ್ ಆಗಿರುವ ಹೆಸರುಕಾಳನ್ನು ಆ.೩ ರಂದು ನೀಡಲಾಗಿದೆ. ಈ ಪೊಟ್ಟಣದ ಮೇಲೆ ಉಪಯೋಗಿಸಬಹುದಾದ ಕಡೆಯ ದಿನಾಂಕ ೨೨ ಜೂನ್ ಎಂದು ನಮೂದಾಗಿದೆ. ಕಡೆಯ ದಿನಾಂಕ ಕಳೆದ ೪೨ ದಿನಗಳ ತರುವಾಯ ಆಹಾರದ ಕಿಟ್ ಗಳನ್ನು ವಿತರಿಸಲಾಗಿದೆ ಎಂದು ಗರ್ಭಿಣಿ ಮಹಿಳೆ ಜೀವಿತ ತಿಳಿಸಿದ್ದಾರೆ.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಿ ಗರ್ಭಿಣಿ ಮಹಿಳೆಯರ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕೆಂದು ಫಲಾನುಭವಿಗಳು ಆಗ್ರಹಿಸಿದ್ದಾರೆ.