ಚೆಟ್ಟಳ್ಳಿ, ಆ.೪: ಗ್ರೇಡ್-೧ ಚೆಟ್ಟಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಓ) ಹಾಗೂ ಕಾರ್ಯದರ್ಶಿ ಹುದ್ದೆಗಳು ದೀರ್ಘಕಾಲದಿಂದ ಖಾಲಿ ಉಳಿದಿದ್ದು, ಆಡಳಿತ ಮಂಡಳಿಯ ಅಧಿಕಾರಾವಧಿ ಮುಕ್ತಾಯಗೊಂಡ ಬಳಿಕ ನೇಮಕಗೊಂಡ ಆಡಳಿತಾಧಿಕಾರಿಯೂ ಪಂಚಾಯಿತಿಗೆ ನಿಯಮಿತವಾಗಿ ಆಗಮಿಸದಿರುವ ಹಿನ್ನೆಲೆಯಲ್ಲಿ ಆಡಳಿತ ವ್ಯವಸ್ಥೆ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಇದರ ಪರಿಣಾಮ ಸಾರ್ವಜನಿಕರು ಮೂಲಭೂತ ಸೇವೆಗಳಿಗಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಮರಣ ಪತ್ರಕ್ಕಾಗಿ ಅಲೆದಾಟ : ಜುಲೈ ೯ ರಂದು ಸುಮಾರು ೧೫ ದಿನಗಳ ಹಿಂದೆ ನಿಧನರಾದ ಉಷಾ ನಾಚಪ್ಪ ಅವರ ಮರಣ ಪ್ರಮಾಣ ಪತ್ರಕ್ಕಾಗಿ ಕುಟುಂಬದವರು ಪಂಚಾಯಿತಿಗೆ ಅರ್ಜಿ ಸಲ್ಲಿಸಿದ್ದರೂ ಇದುವರೆಗೆ ಪ್ರಮಾಣ ಪತ್ರ ದೊರೆತಿಲ್ಲ. ಮೃತರ ಪುತ್ರ ದುಬೈಯಲ್ಲಿ ಉದ್ಯೋಗದಲ್ಲಿದ್ದು, ತಾಯಿಯ ಮರಣ ಪ್ರಮಾಣಪತ್ರ ಪಡೆಯಲು ಹಲವು ದಿನಗಳ ಕಾಲ ಪಂಚಾಯಿತಿಗೆ ಅಲೆದಾಡಿದರೂ ಪ್ರಮಾಣ ಪತ್ರ ಸಿಗದ ಕಾರಣ ನಿರಾಶೆಯಿಂದ ಮರಳಿ ದುಬೈಗೆ ತೆರಳಿದ್ದಾರೆ. ಇತ್ತ ಬ್ಯಾಂಕ್ ವ್ಯವಹಾರ ಇತರೆ ಕಾರ್ಯಗಳಿಗೆ ಮರಣ ಪತ್ರ ಬೇಕಾಗಿದ್ದು ಮೃತರ ಪತಿ ನಾಚಪ್ಪ ಅವರು ಹಲವು ಬಾರಿ ಪಂಚಾಯಿತಿಗೆ ತೆರಳಿದರೂ ಮರಣ ಪ್ರಮಾಣಪತ್ರ ದೊರೆಯದೆ ಸಂಕಷ್ಟ ಅನುಭವಿಸುತ್ತಿದ್ದಾರೆ.

ಮರಣ ಪ್ರಮಾಣಪತ್ರಗಳಿಗೆ ಸಹಿ ಮಾಡುವ ಅಧಿಕಾರ ಕಾರ್ಯದರ್ಶಿಗೆ ಇದ್ದರೂ, ಸುಮಾರು ಮೂರು ವರ್ಷಗಳ ಹಿಂದೆ ಕಾರ್ಯದರ್ಶಿಯಾಗಿದ್ದ ಮಂಜುಳಾ ಅವರ ವರ್ಗಾವಣೆಯಾದ ಬಳಿಕ ಆ ಹುದ್ದೆಗೆ ಶಾಶ್ವತ ನೇಮಕವಾಗಿಲ್ಲ. ಹೀಗಾಗಿ ಮರಣ ಪ್ರಮಾಣಪತ್ರ ಸೇರಿದಂತೆ ಹಲವು ದಾಖಲೆಗಳ ವಿಲೇವಾರಿ ವಿಳಂಬವಾಗುತ್ತಿದೆ.

ಕಳೆದ ತಿಂಗಳು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕಲ್ಪ ಅವರ ವರ್ಗಾವಣೆಯಾದ ಬಳಿಕ ಆ ಹುದ್ದೆಯೂ ಖಾಲಿ ಯಾಗಿದೆ. ಇತ್ತೀಚೆಗೆ ಪಿಡಿಓ ಹುದ್ದೆಗಳ ಭರ್ತಿಗೆ ಕೌನ್ಸೆಲಿಂಗ್ ನಡೆದಿದ್ದರೂ ಕುಶಾಲನಗರ ತಾಲೂಕಿನ ಚೆಟ್ಟಳ್ಳಿ ಗ್ರಾಮ ಪಂಚಾಯಿತಿಗೆ ಅಧಿಕಾರಿಯ ನೇಮಕವಾಗಿಲ್ಲ. ಈ ಹಿನ್ನೆಲೆಯಲ್ಲಿ ನೆಲ್ಲಿಹುದಿಕೇರಿ ಗ್ರಾಮ ಪಂಚಾಯಿತಿಯ ಪಿಡಿಓ ನಂಜುAಡಸ್ವಾಮಿ ಅವರಿಗೆ ಚೆಟ್ಟಳ್ಳಿ ಗ್ರಾಮ ಪಂಚಾಯಿತಿಯ ಹೆಚ್ಚುವರಿ ಹೊಣೆಗಾರಿಕೆ ನೀಡುವ ಕುರಿತು ಮೇಲಧಿಕಾರಿಗಳ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ ಎಂದು ತಿಳಿದುಬಂದಿದೆ. ಅದೇ ರೀತಿ ಇಓ ಅಪ್ಪಣ್ಣ ಅವರ ಆದೇಶದ ಮೇರೆಗೆ ಕಾರ್ಯದರ್ಶಿ ಹುದ್ದೆಯ ಹೆಚ್ಚುವರಿ ಜವಾಬ್ದಾರಿಯನ್ನು ಹಲವು ವರ್ಷಗಳ ಕಾಲ ಚೆಟ್ಟಳ್ಳಿ ಗ್ರಾಮ ಪಂಚಾಯಿತಿಯ ಸಿಬ್ಬಂದಿಯಾಗಿದ್ದ ಚಂದ್ರಅವರು ನಾಕೂರ್ ಶಿರಂಗಾಲ ಪಂಚಾಯಿತಿ ಕಾರ್ಯದರ್ಶಿಯಾಗಿ ವರ್ಗಾವಣೆಗೊಂಡಿದ್ದರೂ ಅವರಿಗೆ ಚೆಟ್ಟಳ್ಳಿ ಗ್ರಾಮ ಪಂಚಾತಿಯ ಕಾರ್ಯದರ್ಶಿ ಹುದ್ದೆಯನ್ನು ಹೆಚ್ಚುವರಿಯಾಗಿ ವಹಿಸುವ ಬಗ್ಗೆಯೂ ಚರ್ಚೆ ನಡೆಯುತ್ತಿದೆ ಎನ್ನಲಾಗಿದೆ.

ಪಿಡಿಓ ಕಾರ್ಯದರ್ಶಿ ಹಾಗೂ ಆಡಳಿತಾಧಿಕಾರಿಯ ಕೊರತೆಯಿಂದ ಜನನ ಮತ್ತು ಮರಣ ಪ್ರಮಾಣಪತ್ರ, ಇ-ಸ್ವತ್ತು, ತೆರಿಗೆ, ವಿವಿಧ ಸರ್ಕಾರಿ ಯೋಜನೆಗಳ ಅರ್ಜಿಗಳ ವಿಲೇವಾರಿ ಸೇರಿದಂತೆ ಹಲವು ಸಾರ್ವಜನಿಕ ಸೇವೆಗಳು ವಿಳಂಬವಾಗುತ್ತಿವೆ. ಪ್ರತಿನಿತ್ಯ ಸಾರ್ವಜನಿಕರು ಪಂಚಾಯಿತಿಗೆ ಅಲೆದಾಡುವ ಸ್ಥಿತಿ ನಿರ್ಮಾಣವಾಗಿದ್ದು, ಸಿಬ್ಬಂದಿಗಳು ಅಧಿಕಾರಿಗಳು ನೇಮಕವಾಗಿಲ್ಲ ಎಂದು ಸಮಜಾಯಿಷಿಕೆ ನೀಡುತ್ತಿದ್ದಾರೆ.

ಗ್ರೇಡ್-೧ ಪಂಚಾಯಿತಿಗೆ ಕೂಡಲೇ ಶಾಶ್ವತ ಪಿಡಿಓ ಹಾಗೂ ಕಾರ್ಯದರ್ಶಿಯನ್ನು ನೇಮಕ ಮಾಡಿ, ಆಡಳಿತಾಧಿಕಾರಿ ನಿಯಮಿತವಾಗಿ ಕಾರ್ಯನಿರ್ವಹಿಸುವಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

- ಪುತ್ತರಿರ ಕರುಣ್ ಕಾಳಯ್ಯ