ಸೋಮವಾರಪೇಟೆ, ಆ. ೪ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಕೂಡಿಗೆಯ ಕೃಷಿ ವಿಜ್ಞಾನ ಕೇಂದ್ರದಲ್ಲಿ ಯಂತ್ರಶ್ರೀ ಯೋಜನೆಯ ಮೂಲಕ ಭತ್ತ ಬೇಸಾಯ ಮಾಡುವ ಬಗ್ಗೆ ಪ್ರಾತ್ಯಕ್ಷಿಕೆ ಕಾರ್ಯಾಗಾರ ನಡೆಯಿತು.
ಯೋಜನೆಯ ಜಿಲ್ಲಾ ನಿರ್ದೇಶಕ ವಿಠ್ಠಲ್ ಸಾಲಿಯಾನ್ ಮಾತನಾಡಿ, ಯಂತ್ರಗಳ ಬಳಕೆಯಿಂದ ಉತ್ಪಾದನಾ ವೆಚ್ಚವನ್ನು ಕಡಿಮೆ ಮಾಡಿಕೊಂಡು ಅಧಿಕ ಇಳುವರಿಯೊಂದಿಗೆ ಕೃಷಿಯಲ್ಲಿ ಲಾಭಗಳಿಸಬಹುದು. ಈ ನಿಟ್ಟಿನಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಅಲ್ಲಲ್ಲಿ ಮಾಹಿತಿ ಕಾರ್ಯಕ್ರಮ ಆಯೋಜಿಸುತ್ತಿದೆ ಎಂದರು.
ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಸೋಮಶೇಖರ್ ಮಾತನಾಡಿ, ಭತ್ತ ಬೇಸಾಯದಲ್ಲಿ ರೋಗ ನಿರೋಧಕಗಳ ಬಗ್ಗೆ ವಿವರಿಸಿದರು. ಇದರೊಂದಿಗೆ ಯಂತ್ರ ಬಳಕೆಯಿಂದ ಆಗುವಂತಹ ಉಪಯೋಗಗಳು ಬಗ್ಗೆ ಮಾಹಿತಿ ನೀಡಿದರು.
ಭತ್ತ ಬೇಸಾಯದ ಕುರಿತು ಇಲಾಖೆಯ ಚಂದ್ರಶೇಖರ್ ಅವರು ಯಂತ್ರಗಳ ಮೂಲಕ ಭತ್ತ ಬೇಸಾಯ ಮಾಡುವ ಬಗ್ಗೆ ಪ್ರಾತ್ಯಕ್ಷಿಕೆ ನೀಡಿದರು. ಕಾರ್ಯಕ್ರಮದಲ್ಲಿ ಸೋಮವಾರಪೇಟೆ ತಾಲೂಕಿನ ಯಂತ್ರಶ್ರೀ ಬೇಸಾಯದ ರೈತರು ಹಾಗೂ ಜಿಲ್ಲೆಯ ವಿವಿಧ ಭಾಗಗಳ ರೈತರು ಭಾಗವಹಿಸಿದ್ದರು.