ಮಡಿಕೇರಿ, ಆ.೪: ಸ್ಕಾಟ್‌ಲ್ಯಾಂಡ್‌ನ ಗ್ಲಾಸ್‌ಗೋದಲ್ಲಿ ಮುಕ್ತಾಗೊಂಡ ಈ ಬಾರಿಯ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾರತದ ಬಾಕ್ಸಿಂಗ್‌ಪಟುಗಳು ಒಟ್ಟು ೭ ಚಿನ್ನ, ೩ ಬೆಳ್ಳಿ ಸೇರಿದಂತೆ ೧೦ ಪದಕಗಳ ಸಾಧನೆ ಮಾಡಿರುವ ಬಗ್ಗೆ ಭಾರತ ಬಾಕ್ಸಿಂಗ್ ತಂಡದ ಹೆಡ್‌ಕೋಚ್, ಕೊಡಗಿನವರಾದ ಚೇನಂಡ ವಿಶು ಕುಟ್ಟಪ್ಪ ಅವರು ಹರ್ಷ ವ್ಯಕ್ತಪಡಿಸಿದ್ದಾರೆ.

ಈ ಕುರಿತು ‘ಶಕ್ತಿ‘ಯೊಂದಿಗೆ ಸಂತಸ ವ್ಯಕ್ತಪಡಿಸಿರುವ ಕುಟ್ಟಪ್ಪ ಅವರು, ಭಾರತ ಪ್ರತಿಷ್ಠಿತ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಇದೇ ಮೊದಲ ಬಾರಿಗೆ ಅದ್ಭುತ ಸಾಧನೆ ತೋರಿದೆ. ಇದೀಗ ತಮ್ಮ ಗುರಿ ಮುಂಬರಲಿರುವ ಮತ್ತೊಂದು ಪ್ರತಿಷ್ಠಿತ ಕ್ರೀಡಾಕೂಟವಾಗಿರುವ ಏಷ್ಯನ್ ಗೇಮ್ಸ್ನಲ್ಲಿ ಕೂಡ ದೇಶಕ್ಕೆ ಪದಕಗಳ ಸಾಧನೆ ಮಾಡುವದಾಗಿದೆ ಎಂದು ಹೇಳಿದರು. ಏಷ್ಯನ್ ಗೇಮ್ಸ್ನ ತರಬೇತಿ ಶಿಬಿರ ಇದೇ ತಾ.೧೦ ರಿಂದ ಪಂಜಾಬ್‌ನಲ್ಲಿ ಆರಂಭಗೊಳ್ಳಲಿದೆ. ಜೊತೆಗೆ ಜಪಾನ್‌ನಲ್ಲೂ ತರಬೇತಿ ಹಮ್ಮಿಕೊಳ್ಳಲಾಗುವುದು ಎಂದು ಕುಟ್ಟಪ್ಪ ತಿಳಿಸಿದರು.

ಈ ಬಾರಿ ಕಾಮನ್‌ವೆಲ್ತ್ನಲ್ಲಿ ಪುರುಷರ ವಿಭಾಗದಲ್ಲಿ ೨ ಚಿನ್ನ, ೨ ಬೆಳ್ಳಿ ಪದಕ, ಮಹಿಳಾ ವಿಭಾಗದಲ್ಲಿ ೫ ಚಿನ್ನ, ೧ ಬೆಳ್ಳಿ ಪದಕವನ್ನು ಭಾರತ ಬಾಕ್ಸಿಂಗ್‌ಪಟುಗಳು ಪಡೆದುಕೊಂಡಿರುವುದು ಉತ್ತಮ ಸಾಧನೆಯಾಗಿದೆ. ಎಲ್ಲಾ ಪಟುಗಳು ಕಠಿಣ ಪರಿಶ್ರಮ ತೋರಿದ್ದಾರೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಸ್ವತಃ ಬಾಕ್ಸಿಂಗ್ ಪಟುವೂ ಆಗಿ, ಭಾರತೀಯ ಸೇನೆಯಲ್ಲಿ ಸುಬೇದಾರರಾಗಿದ್ದ ಜಿಲ್ಲೆಯ ಕೋಕೇರಿ ಮೂಲದ ಚೇನಂಡ ವಿಶು ಕುಟ್ಟಪ್ಪ ಬಾಕ್ಸಿಂಗ್ ತರಬೇತುದಾರರಾಗಿ ದ್ರೋಣಾಚಾರ್ಯ ಪ್ರಶಸ್ತಿಗಳಿಸಿರುವ ಕೊಡಗಿನ ಪ್ರಥಮ ವ್ಯಕ್ತಿಯಾಗಿದ್ದಾರೆ. ೨೦೦೭ ರಿಂದ ಭಾರತ ತಂಡದ ಸಹಾಯಕ ಕೋಚ್ ಆಗಿದ್ದ ಇವರು ೨೦೧೯ ರಿಂದ ಮೂರು ಅವಧಿಗಳಲ್ಲಿ ಹೆಡ್‌ಕೋಚ್ ಆಗಿದ್ದಾರೆ. ೨೦೨೫ರ ಒಂದು ವರ್ಷದ ಅಂತರದ ಬಳಿಕ ೨೦೨೬ ರಿಂದ ಮತ್ತೆ ಹೆಡ್‌ಕೋಚ್ ಆಗಿ ಕುಟ್ಟಪ್ಪ ಕಾರ್ಯನಿರ್ವಹಿಸುತ್ತಿದ್ದಾರೆ.

ಕೇಂದ್ರ ಕ್ರೀಡಾ ಸಚಿವರಿಂದ ಅಭಿನಂದನೆ

ಕಾಮನ್‌ವಲ್ತ್ನಲ್ಲಿ ಉತ್ತಮ ಸಾಧನೆ ತೋರಿದ ಭಾರತೀಯ ಬಾಕ್ಸಿಂಗ್ ತಂಡ ಇಂದು ದೆಹಲಿಯಲ್ಲಿ ಕೇಂದ್ರ ಕ್ರೀಡಾ ಸಚಿವರಾದ ಮನ್ಸುಕ್ ಮಾಂಡವ್ಯ ಅವರನ್ನು ಭೇಟಿ ಮಾಡಿದ್ದು, ತಂಡಕ್ಕೆ ಸಚಿವರು ಅಭಿನಂದಿಸಿದರು. ೪ಐದನೇ ಪುಟಕ್ಕೆ

(ಮೊದಲ ಪುಟದಿಂದ) ಈ ಸಂದರ್ಭ ಕುಟ್ಟಪ್ಪ ಅವರು ಪಾಲ್ಗೊಂಡಿದ್ದರು. ಚಿನ್ನದ ಪದಕ ವಿಜೇತರಿಗೆ ರೂ.೩೦ ಲಕ್ಷ ಹಾಗೂ ಬೆಳ್ಳಿ ಪದಕ ವಿಜೇತರಿಗೆ ರೂ.೨೦ ಲಕ್ಷ ಬಹುಮಾನವನ್ನು ಕ್ರೀಡಾ ಸಚಿವರು ಹಸ್ತಾಂತರಿಸಿದರು.

ಭಾರತದ ಸಾಧನೆ

ಸ್ಕಾಟ್‌ಲ್ಯಾಂಡ್‌ನ ಗ್ಲಾಸ್‌ಗೋದಲ್ಲಿ ನಡೆದ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾರತ ಒಟ್ಟು ೩೯ ಪದಕಗಳನ್ನು ಗಳಿಸುವ ಮೂಲಕ ಟೂರ್ನಿಯಲ್ಲಿ ೪ನೇ ಸ್ಥಾನ ಪಡೆದುಕೊಂಡಿದೆ. ಈ ಪೈಕಿ ಬಾಕ್ಸಿಂಗ್ ಕ್ರೀಡೆಯಲ್ಲಿ ಅತ್ಯಧಿಕ ಪದಕಗಳನ್ನು ಗಳಿಸಿದೆ.

ಪ್ಯಾರಾ(ವಿಶೇಷಚೇತನರ) ಅಥ್ಲೆಟಿಕ್ಸ್ನಲ್ಲಿ ೩ ಚಿನ್ನ, ೨ ಬೆಳ್ಳಿ, ೧ ಕಂಚು ಸೇರಿ ೬ ಪದಕಗಳು, ಜೂಡೋದಲ್ಲಿ ೨ ಚಿನ್ನ, ೧ ಬೆಳ್ಳಿ, ೧ ಕಂಚು ಸೇರಿ ಒಟ್ಟು ೪ ಪದಕಗಳು, ವೇಟ್‌ಲಿಫ್ಟಿಂಗ್‌ನಲ್ಲಿ ೧ ಚಿನ್ನ, ೬ ಬೆಳ್ಳಿ, ೧ ಕಂಚಿನೊAದಿಗೆ ೮ ಪದಕಗಳು, ಅಥ್ಲೆಟಿಕ್ಸ್ನಲ್ಲಿ ೫ ಬೆಳ್ಳಿ, ೫ ಕಂಚು ಸೇರಿ ಒಟ್ಟು ೧೦ ಪದಕಗಳು, ಪ್ಯಾರಾ ಪವರ್‌ಲಿಫ್ಟಿಂಗ್‌ನಲ್ಲಿ ೧ ಕಂಚು ಭಾರತದ ಪಾಲಾಗಿದೆ. ಒಟ್ಟು ೧೩ ಚಿನ್ನ, ೧೭ ಬೆಳ್ಳಿ, ೯ ಕಂಚು ಪದಕಗಳೊಂದಿಗೆ ೩೯ ಪದಕ ಗಳಿಸಿ ೪ನೇ ಸ್ಥಾನ ಗಳಿಸಿದೆ. ಆಸ್ಟೆçÃಲಿಯಾ(೧೭೦ ಪದಕಗಳು), ಇಂಗ್ಲೆAಡ್(೧೧೦) ಹಾಗೂ ಕೆನಡಾ(೬೨) ಮೊದಲ ೩ ಸ್ಥಾನ ಗಳಿಸಿವೆ.

-ಶಶಿ ಸೋಮಯ್ಯ