ಮಡಿಕೇರಿ, ಆ. ೪: ಮಡಿಕೇರಿ ಕ್ಷೇತ್ರದ ಶಾಸಕ ಮಂತರ್ ಗೌಡ ಅವರು ನಗರದ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ, ಕಾಡಾನೆ ದಾಳಿಯಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ಕಾರ್ಮಿಕ ಶರತ್ ಅವರ ಆರೋಗ್ಯ ವಿಚಾರಿಸಿದರು.

ಸುಂಟಿಕೊಪ್ಪ ಸಮೀಪದ ಮಹಾಲಕ್ಷಿö್ಮ ಎಸ್ಟೇಟ್‌ನಲ್ಲಿ ಸಂತೆ ಮುಗಿಸಿ ಮನೆಗೆ ತೆರಳುತ್ತಿದ್ದ ವೇಳೆ ಕಾರ್ಮಿಕ ಶರತ್ ಅವರ ಮೇಲೆ ಕಾಡಾನೆ ದಾಳಿ ನಡೆಸಿತ್ತು. ಘಟನೆಯಲ್ಲಿ ಅವರ ಕೈಮೂಳೆ ಹಾಗೂ ಸೊಂಟದ ಮೂಳೆ ಮುರಿದಿದ್ದು, ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗಾಯಾಳುವಿನ ಆರೋಗ್ಯದ ಕುರಿತು ವೈದ್ಯರಿಂದ ಮಾಹಿತಿ ಪಡೆದ ಶಾಸಕ ಮಂತರ್ ಗೌಡ, ಚಿಕಿತ್ಸಾ ವೆಚ್ಚವನ್ನು ಅರಣ್ಯ ಇಲಾಖೆ ಭರಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆದಕಲ್ ಪ್ರದೇಶದಿಂದ ಎಂಟು ಕಾಡಾನೆಗಳನ್ನು ಕಾಡಿಗೆ ಓಡಿಸಲಾಗಿತ್ತು. ಬಳಿಕ ಮತ್ತೆ ಎರಡು ಕಾಡಾನೆಗಳು ಕಾಣಿಸಿಕೊಂಡ ಸಂದರ್ಭ ಈ ದಾಳಿ ನಡೆದಿರುವುದಾಗಿ ತಿಳಿಸಿದರು. ಮಳೆಗಾಲದಲ್ಲಿ ಕಾರ್ಮಿಕರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಎಸ್ಟೇಟ್‌ಗಳಲ್ಲಿ ಕೆಲಸ ಮಾಡುವ ಕಾರ್ಮಿಕರು ಎಚ್ಚರಿಕೆಯಿಂದ ಕಾರ್ಯನಿರ್ವಹಿಸುವಂತೆ ಹಾಗೂ ಎಸ್ಟೇಟ್ ಮಾಲೀಕರು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದರು.

ಇದೇ ವೇಳೆ ಭಾರೀ ಮಳೆಯಿಂದ ಮಡಿಕೇರಿಯ ಸ್ಪಟಿಕ ಲೇಔಟ್‌ನಲ್ಲಿರುವ ಬಿದ್ದಪ್ಪ ಅವರ ಮನೆಯ ಮುಂಭಾಗದ ತಡೆಗೋಡೆ ಸಂಪೂರ್ಣ ಕುಸಿದು ಅಪಾಯದ ಸ್ಥಿತಿಯಲ್ಲಿರುವ ಸ್ಥಳಕ್ಕೂ ಶಾಸಕರು ಭೇಟಿ ನೀಡಿ ಪರಿಶೀಲಿಸಿದರು. ಮನೆಯ ಅಂಚಿನ ಭಾಗದಿಂದಲೇ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಸದ್ಯ ಯಾವುದೇ ಕಾಮಗಾರಿ ಕೈಗೊಳ್ಳದಂತೆ ಸೂಚಿಸಲಾಗಿದೆ ಎಂದು ತಿಳಿಸಿದರು.

ತಾತ್ಕಾಲಿಕವಾಗಿ ಸ್ಯಾಂಡ್ ಬ್ಯಾಗ್‌ಗಳನ್ನು ಅಳವಡಿಸಿ, ಎನ್‌ಡಿಆರ್‌ಎಫ್ ಅನುದಾನದಲ್ಲಿ ತಡೆಗೋಡೆ ನಿರ್ಮಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು. ಈ ಸಂಬAಧ ಅಗತ್ಯ ಕ್ರಮ ಕೈಗೊಳ್ಳುವಂತೆ ಪೌರಾಯುಕ್ತರಿಗೆ ಸೂಚನೆ ನೀಡಿರುವುದಾಗಿ ಮಂತರ್ ಗೌಡ ಹೇಳಿದರು.