*ಗೋಣಿಕೊಪ್ಪ, ಆ. ೩: ಗೋಣಿಕೊಪ್ಪ ಕೃಷಿ ವಿಜ್ಞಾನ ಕೇಂದ್ರದಲ್ಲಿ ಕೃಷಿ ಪರಿಕರ ಮಾರಾಟಗಾರರಿಗಾಗಿ ಆಯೋಜಿಸಿದ್ದ ಕೃಷಿ ವಿಸ್ತರಣಾ ಸೇವೆಯ ಡಿಪ್ಲೊಮಾ ಒಂದು ವರ್ಷದ ತರಬೇತಿ ಕಾರ್ಯಕ್ರಮದ ಪದವಿ ಪ್ರದಾನ ಸಮಾರಂಭ ನಡೆಯಿತು.

ಕೃಷಿ ವಿಶ್ವವಿದ್ಯಾಲಯ, ಬೆಂಗಳೂರು ವಿಭಾಗದ ರಾಜ್ಯ ನೋಡಲ್ ಅಧಿಕಾರಿ ಡಾ. ಕೆ. ನಾರಾಯಣ ರೆಡ್ಡಿ ಅವರು ತರಬೇತಿ ಪೂರ್ಣಗೊಳಿಸಿದ ಅಭ್ಯರ್ಥಿಗಳಿಗೆ ಪ್ರಮಾಣ ಪತ್ರಗಳನ್ನು ವಿತರಿಸಿ ಮಾತನಾಡಿದರು.

ಆಧುನಿಕ ತಂತ್ರಜ್ಞಾನದ ಅಳವಡಿಕೆಯಿಂದ ರೈತರ ಆದಾಯವನ್ನು ಹೆಚ್ಚಿಸಬಹುದಾಗಿದ್ದು, ಕೃಷಿ ಪರಿಕರ ಮಾರಾಟಗಾರರು ಹೊಸ ತಂತ್ರಜ್ಞಾನಗಳನ್ನು ರೈತರಿಗೆ ಪರಿಚಯಿಸುವ ಮೂಲಕ ಉದ್ಯಮಶೀಲತೆಯನ್ನು ಬೆಳೆಸಿ ಕೃಷಿಯನ್ನು ಹೆಚ್ಚು ಲಾಭದಾಯಕವಾಗಿಸಬಹುದು ಎಂದು ಹೇಳಿದರು.

ಕೊಡಗು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಡಾ. ಚಂದ್ರಶೇಖರ್ ಬಿ.ಎಸ್. ಮಾತನಾಡಿ, ಸರ್ಕಾರದ ಪ್ರಮುಖ ಆದ್ಯತಾ ಯೋಜನೆಗಳ ಕುರಿತು ಮಾಹಿತಿ ನೀಡಿದರು. ಸ್ಥಳೀಯ ಮಟ್ಟದಲ್ಲಿ ರೈತರೊಂದಿಗೆ ನಿಕಟ ಸಂಪರ್ಕ ಹೊಂದಿರುವ ಕೃಷಿ ಪರಿಕರ ಮಾರಾಟಗಾರರು ಸರ್ಕಾರದ ವಿವಿಧ ಯೋಜನೆಗಳು ಹಾಗೂ ಕಾರ್ಯಕ್ರಮಗಳನ್ನು ರೈತರಿಗೆ ಪರಿಣಾಮಕಾರಿಯಾಗಿ ತಲುಪಿಸುವಲ್ಲಿ ಪ್ರಮುಖ ಪಾತ್ರ ವಹಿಸಬಹುದು ಎಂದು ತಿಳಿಸಿದರು. ಕೊಡಗು ಕೃಷಿ ಇಲಾಖೆಯ ಉಪ ನಿರ್ದೇಶಕ ಡಾ. ಸೋಮಶೇಖರ್ ಡಿ. ಮಾತನಾಡಿ, ಡಿಪ್ಲೊಮಾ ಪಡೆದ ನಂತರ ಅಭ್ಯರ್ಥಿಗಳ ಜವಾಬ್ದಾರಿ ಮತ್ತಷ್ಟು ಹೆಚ್ಚಿದ್ದು, ಕೃಷಿ ಕ್ಷೇತ್ರದಲ್ಲಿ ಸಕಾರಾತ್ಮಕ ಬದಲಾವಣೆ ತರಬಲ್ಲ ವಿಸ್ತರಣಾ ಪ್ರತಿನಿಧಿಗಳಾಗಿ ಕಾರ್ಯನಿರ್ವಹಿಸಬೇಕು ಎಂದು ಸಲಹೆ ನೀಡಿದರು. ಐಸಿಎಆರ್ - ಕೆವಿಕೆ ಗೋಣಿಕೊಪ್ಪದ ಮುಖ್ಯಸ್ಥ ಡಾ. ಮುರಳೀಧರ ಬಿ.ಎಂ. ಅಧ್ಯಕ್ಷತೆ ವಹಿಸಿ ಮಾತನಾಡಿ, ಇಂತಹ ತರಬೇತಿ ಕಾರ್ಯಕ್ರಮಗಳು ರೈತರು ಮತ್ತು ಕೃಷಿ ವಿಜ್ಞಾನಿಗಳ ನಡುವಿನ ಅಂತರವನ್ನು ಕಡಿಮೆ ಮಾಡುವುದರ ಜೊತೆಗೆ ಸರ್ಕಾರದ ಕೃಷಿ ವಿಸ್ತರಣಾ ಸೇವೆಯನ್ನು ಮತ್ತಷ್ಟು ಬಲಪಡಿಸುತ್ತವೆ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ, ವಿಷಯ ತಜ್ಞ ಪ್ರಭಾಕರ್, ಪಶು ಸಂಗೋಪನಾ ವಿಷಯ ತಜ್ಞ ಡಾ. ಸುರೇಶ್ ಹಾಗೂ ಸಂಯೋಜಕ ಪ್ರತಾಪ್ ಉಪಸ್ಥಿತರಿದ್ದರು. ಸಸ್ಯ ಸಂರಕ್ಷಣೆ ವಿಷಯ ತಜ್ಞ ವೀರೇಂದ್ರ ಕುಮಾರ್ ಕೆ.ವಿ. ಅವರು ಒಂದು ವರ್ಷದ ಡಿಪ್ಲೊಮಾ ತರಬೇತಿ ಕಾರ್ಯಕ್ರಮವನ್ನು ನಿರ್ವಹಿಸಿದರು. ೩೯ ವಿದ್ಯಾರ್ಥಿಗಳು ಡಿಪ್ಲೊಮಾ ಪದವಿ ಪಡೆದುಕೊಂಡರು. ಒಂದು ವರ್ಷದ ಕೋರ್ಸ್ನಲ್ಲಿ ಅತಿ ಹೆಚ್ಚು ಅಂಕಗಳು ಮತ್ತು ಮೊದಲ ರ‍್ಯಾಂಕ್ ವೇಣುಗೋಪಾಲ್, ೨ನೇ ರ‍್ಯಾಂಕ್ ಗೌತಮಿ, ೩ನೇ ರ‍್ಯಾಂಕ್ ಪೂರ್ಣಿಮಾ ಪಡೆದುಕೊಂಡರು.