"ಒಬ್ಬ ವಿದ್ಯಾರ್ಥಿ ಅಳುತ್ತಿದ್ದಾನೆ ಎಂದರೆ ಒಬ್ಬ ವ್ಯಕ್ತಿ ಮಾತ್ರ ಅಳುತ್ತಿಲ್ಲ; ಒಂದು ಕುಟುಂಬದ ಕನಸು, ಒಂದು ಸಮಾಜದ ಭವಿಷ್ಯ ಮತ್ತು ಒಂದು ದೇಶದ ಆತ್ಮವೇ ಕಣ್ಣೀರಾಗುತ್ತಿದೆ."

ದೇಶದ ಇತಿಹಾಸದಲ್ಲಿ ವಿದ್ಯಾರ್ಥಿಗಳ ಹೋರಾಟಗಳು ಹೊಸದಲ್ಲ. ಸ್ವಾತಂತ್ರ‍್ಯ ಚಳವಳಿಯಿಂದ ಹಿಡಿದು ಇಂದಿನ ಪ್ರಜಾಪ್ರಭುತ್ವದವರೆಗೂ ವಿದ್ಯಾರ್ಥಿಗಳು ಸಮಾಜದ ಬದಲಾವಣೆಯ ಮುಂಚೂಣಿಯಲ್ಲೇ ನಿಂತಿದ್ದಾರೆ. ಅನ್ಯಾಯದ ವಿರುದ್ಧ ಧ್ವನಿ ಎತ್ತಿದಾಗಲೆಲ್ಲ ಮೊದಲಿಗೆ ಕೇಳಿಬರುವ ಧ್ವನಿ ವಿದ್ಯಾರ್ಥಿಗಳದ್ದೇ. ಏಕೆಂದರೆ ಅವರಲ್ಲಿ ಸ್ವಾರ್ಥ ಕಡಿಮೆ, ಭವಿಷ್ಯದ ಕನಸು ಹೆಚ್ಚು.

ದೆಹಲಿಯ ಜಂತರ್ ಮಂತರ್‌ನಲ್ಲಿ ಕೇಳಿಬಂದ ಘೋಷಣೆಗಳ ಹಿಂದೆ ಕೇವಲ ಒಂದು ದಿನದ ಕೋಪವಿಲ್ಲ. ಅದು ಅನೇಕ ವಿದ್ಯಾರ್ಥಿಗಳ ನೋವು, ಆತಂಕ, ಅಸಹಾಯಕತೆ ಮತ್ತು ನ್ಯಾಯಕ್ಕಾಗಿ ನಡೆದ ಹೋರಾಟದ ಪ್ರತಿಧ್ವನಿಯಾಗಿದೆ.

ಪ್ರತಿಯೊಬ್ಬ ವಿದ್ಯಾರ್ಥಿಯ ಕೈಯಲ್ಲಿದ್ದ ಫಲಕದಲ್ಲಿ ಒಂದೇ ಮಾತು ಕಾಣುತ್ತಿತ್ತು - "ನಮಗೆ ನ್ಯಾಯ ಬೇಕು."

ಆ ನ್ಯಾಯ ಕೇವಲ ಒಂದು ಘಟನೆಯ ನ್ಯಾಯವಲ್ಲ; ಶಿಕ್ಷಣದ ಮೇಲೆ ನಂಬಿಕೆ ಕಳೆದುಕೊಳ್ಳದ ಸಮಾಜದ ನ್ಯಾಯ.

ಒಬ್ಬ ವಿದ್ಯಾರ್ಥಿಯ ಸಾವು - ಸಾವಿರ ಪ್ರಶ್ನೆಗಳು ಯಾವುದೇ ವಿದ್ಯಾರ್ಥಿ ಶಿಕ್ಷಣ ಸಂಸ್ಥೆಯಲ್ಲಿ ಜೀವ ಕಳೆದುಕೊಂಡಾಗ ಅದು ಕೇವಲ ಒಂದು ಸುದ್ದಿಯಾಗಬಾರದು. ಅದು ಒಂದು ಎಚ್ಚರಿಕೆಯ ಗಂಟೆಯಾಗಬೇಕು.

ತಮ್ಮ ಮಗ ಅಥವಾ ಮಗಳನ್ನು ಶಾಲೆ-ಕಾಲೇಜಿಗೆ ಕಳುಹಿಸುವ ಪ್ರತಿಯೊಬ್ಬ ಪೋಷಕರ ಕನಸು ಒಂದೇ - "ನನ್ನ ಮಗು ಚೆನ್ನಾಗಿ ಓದಿ ಬದುಕಿನಲ್ಲಿ ಮುಂದೆ ಬರಲಿ."

ಆದರೆ ಕೆಲವೊಮ್ಮೆ ಆ ಮಗು ಮನೆಗೆ ಮರಳುವುದು ಪದವಿಯೊಂದಿಗೆ ಅಲ್ಲ, ನೆನಪುಗಳೊಂದಿಗೆ. ಅಂತಹ ಸಂದರ್ಭಗಳಲ್ಲಿ ಪೋಷಕರ ನೋವನ್ನು ಯಾವ ಪದಗಳಲ್ಲೂ ಅಳೆಯಲು ಸಾಧ್ಯವಿಲ್ಲ.

ಒಂದು ಮಗುವಿನ ಜನನದಿಂದ ಹಿಡಿದು ಅದರ ವಿದ್ಯಾಭ್ಯಾಸದವರೆಗೆ ಪೋಷಕರು ಎಷ್ಟೋ ತ್ಯಾಗ ಮಾಡುತ್ತಾರೆ. ಸಾಲ ಮಾಡುತ್ತಾರೆ. ತಮ್ಮ ಆಸೆಗಳನ್ನು ಬದಿಗಿಡುತ್ತಾರೆ. ಮಕ್ಕಳ ಕನಸುಗಳನ್ನೇ ತಮ್ಮ ಕನಸುಗಳಾಗಿಸಿಕೊಳ್ಳುತ್ತಾರೆ.

ಅಂತಹ ಕುಟುಂಬದ ಮಗು ಅನ್ಯಾಯದ ಬಲಿಯಾಗುತ್ತದೆ ಎಂಬ ಅನುಮಾನ ಮೂಡಿದಾಗ, ನ್ಯಾಯ ವಿಳಂಬವಾಗುತ್ತದೆ ಎಂಬ ಭಾವನೆ ಬಂದಾಗ, ಅವರ ಮನಸ್ಸಿನಲ್ಲಿ ಮೂಡುವ ಪ್ರಶ್ನೆ ಒಂದೇ - "ನಮ್ಮ ಮಗುವಿನ ತಪ್ಪೇನು?"

ಇದು ಇಂದು ಸಾವಿರಾರು ಕುಟುಂಬಗಳ ಮನದಾಳದ ಪ್ರಶ್ನೆಯಾಗಿದೆ. ವಿದ್ಯಾರ್ಥಿಗಳು ಬೀದಿಗಿಳಿದ ಪರಿಸ್ಥಿತಿ ಏಕೆ?

ವಿದ್ಯಾರ್ಥಿಗಳು ಓದನ್ನು ಬಿಟ್ಟು ಬೀದಿಗಿಳಿಯುವುದನ್ನು ಯಾರೂ ಇಷ್ಟಪಡುವುದಿಲ್ಲ. ಅವರು ತರಗತಿಯಲ್ಲಿ ಇರಬೇಕಾದವರು. ಗ್ರಂಥಾಲಯದಲ್ಲಿ ಪುಸ್ತಕ ಓದಬೇಕಾದವರು. ಪ್ರಯೋಗಾಲಯದಲ್ಲಿ ಸಂಶೋಧನೆ ಮಾಡಬೇಕಾದವರು.

ಆದರೆ ತಮ್ಮ ಮಾತು ಕೇಳಿಸಿಕೊಳ್ಳಲು ಬೀದಿಗಿಳಿದ ಪರಿಸ್ಥಿತಿ ನಿರ್ಮಾಣವಾದರೆ, ಅದು ಕೇವಲ ವಿದ್ಯಾರ್ಥಿಗಳ ವೈಫಲ್ಯವಲ್ಲ; ಸಮಾಜ ಮತ್ತು ಆಡಳಿತ ವ್ಯವಸ್ಥೆ ಅವಲೋಕನ ಮಾಡಬೇಕಾದ ಕ್ಷಣ.

ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರೆ ಅವರನ್ನು ಶತ್ರುಗಳಂತೆ ನೋಡುವುದಲ್ಲ, ಅವರ ಪ್ರಶ್ನೆಗಳನ್ನು ಆಲಿಸುವುದು ಪ್ರಜಾಪ್ರಭುತ್ವದ ಜವಾಬ್ದಾರಿ.

ಈ ನಡುವೆ ಯಾವುದೇ ಪ್ರತಿಭಟನೆಯಲ್ಲಿ ಮಾಧ್ಯಮದ ಪಾತ್ರ ಅತ್ಯಂತ ಮಹತ್ವದ್ದು. ಜನರಿಗೆ ನಿಜವಾದ ಚಿತ್ರಣ ತಲುಪಿಸುವ ಜವಾಬ್ದಾರಿ ಪತ್ರಕರ್ತರದ್ದು. ಇತ್ತೀಚಿನ ಪ್ರತಿಭಟನೆಗಳ ವೇಳೆ ಕರ್ತವ್ಯ ನಿರ್ವಹಿಸುತ್ತಿದ್ದ ಕೆಲವು ಪತ್ರಕರ್ತರು, ಅದರಲ್ಲೂ ಮಹಿಳಾ ಪತ್ರಕರ್ತೆಯರು, ತಳ್ಳಾಟ ಮತ್ತು ಅಡ್ಡಿಪಡಿಸುವ ಘಟನೆಗಳನ್ನು ಎದುರಿಸಿದ್ದಾರೆ ಎಂಬ ವರದಿಗಳು ಸಾರ್ವಜನಿಕ ಚರ್ಚೆಗೆ ಕಾರಣವಾಗಿವೆ. ಇಂತಹ ಘಟನೆಗಳ ಕುರಿತು ನಿಷ್ಪಕ್ಷಪಾತ ತನಿಖೆ ಅಗತ್ಯ. ಒಂದು ಕ್ಯಾಮೆರಾವನ್ನು ಒಡೆಯಬಹುದು. ಒಂದು ಮೈಕ್ ಕಸಿದುಕೊಳ್ಳಬಹುದು. ಆದರೆ ಸತ್ಯವನ್ನು ಶಾಶ್ವತವಾಗಿ ಮರೆಮಾಡಲು ಸಾಧ್ಯವಿಲ್ಲ.

ಸತ್ಯದ ಮೇಲೆ ದಾಳಿ ನಡೆಯುವ ಪ್ರತಿಯೊಂದು ಸಂದರ್ಭವೂ ಪ್ರಜಾಪ್ರಭುತ್ವದ ಕನ್ನಡಿಯ ಮೇಲೆ ಬಿದ್ದ ಬಿರುಕು. ಜಂತರ್ ಮಂತರ್‌ನಲ್ಲಿ ಸೇರಿದ್ದ ಪ್ರತಿಯೊಬ್ಬ ವಿದ್ಯಾರ್ಥಿಯ ಕೈಯಲ್ಲಿ ಒಂದೊAದು ಫಲಕವಿತ್ತು. ಆದರೆ ಆ ಫಲಕಗಳಿಗಿಂತ ದೊಡ್ಡದಾಗಿದ್ದದ್ದು ಅವರ ಮನಸ್ಸಿನ ನೋವು. ಯಾರೋ ತಮ್ಮ ಸ್ನೇಹಿತನನ್ನು ಕಳೆದುಕೊಂಡಿದ್ದರು.

ಯಾರೋ ತಮ್ಮ ಸಹಪಾಠಿಯ ಮೇಲಾದ ಅನ್ಯಾಯಕ್ಕೆ ನ್ಯಾಯ ಕೇಳುತ್ತಿದ್ದರು. ಇನ್ನೂ ಕೆಲವರು, "ಇಂದು ಅವಳಿಗೆ ಅಥವಾ ಅವನಿಗೆ ಆಗಿದೆ; ನಾಳೆ ನಮ್ಮಲ್ಲಿ ಯಾರಿಗಾದರೂ ಆಗಬಹುದು" ಎಂಬ ಭಯದೊಂದಿಗೆ ಅಲ್ಲಿಗೆ ಬಂದಿದ್ದರು.

ಪ್ರತಿಭಟನೆಗೆ ಬಂದವರಲ್ಲಿ ಅನೇಕರು ಮೊದಲ ಬಾರಿಗೆ ದೆಹಲಿಗೆ ಕಾಲಿಟ್ಟ ವಿದ್ಯಾರ್ಥಿಗಳು. ಅವರಿಗೆ ರಾಜಕೀಯ ಭಾಷಣ ಮಾಡುವ ಉದ್ದೇಶ ಇರಲಿಲ್ಲ. ತಮ್ಮ ನೋವು ದೇಶದ ಕಿವಿಗೆ ತಲುಪಬೇಕು ಎಂಬುದೇ ಅವರ ಆಶಯ. ಅವರ ಘೋಷಣೆಗಳಲ್ಲಿ ಕೋಪಕ್ಕಿಂತ ನೋವೇ ಹೆಚ್ಚಿತ್ತು. ಆ ನೋವು ಒಬ್ಬ ವ್ಯಕ್ತಿಯದ್ದಲ್ಲ; ಇಡೀ ವಿದ್ಯಾರ್ಥಿ ಸಮುದಾಯದ ಆತಂಕವಾಗಿತ್ತು.

ಶಿಕ್ಷಣ ಎಂದರೆ ಕೇವಲ ಪದವಿ ಅಲ್ಲ. ಅದು ವ್ಯಕ್ತಿತ್ವವನ್ನು ರೂಪಿಸುವ ಪವಿತ್ರ ಪ್ರಕ್ರಿಯೆ. ಶಾಲೆ ಮತ್ತು ಕಾಲೇಜುಗಳು ಜ್ಞಾನವನ್ನು ನೀಡುವುದರ ಜೊತೆಗೆ ಭದ್ರತೆ, ಆತ್ಮವಿಶ್ವಾಸ ಮತ್ತು ನ್ಯಾಯದ ಭರವಸೆಯನ್ನೂ ನೀಡಬೇಕು. ಆದರೆ ಶಿಕ್ಷಣ ಸಂಸ್ಥೆಯೊಳಗೇ ವಿದ್ಯಾರ್ಥಿಗಳು ಅಸುರಕ್ಷಿತರಾಗಿದ್ದಾರೆ ಎಂಬ ಭಾವನೆ ಮೂಡಿದರೆ, ಅದು ರಾಷ್ಟ್ರದ ಶಿಕ್ಷಣ ವ್ಯವಸ್ಥೆಗೆ ಎಚ್ಚರಿಕೆಯ ಗಂಟೆಯಾಗಿದೆ.

ಒಬ್ಬ ವಿದ್ಯಾರ್ಥಿಯ ಜೀವಹಾನಿ ಅಥವಾ ವಿದ್ಯಾರ್ಥಿನಿಯ ಮೇಲೆ ನಡೆದ ಅನ್ಯಾಯದ ಆರೋಪಗಳು ಸಮಾಜದ ಮನಸ್ಸನ್ನು ತಲ್ಲಣಗೊಳಿಸುತ್ತವೆ. ಇಂತಹ ಸಂದರ್ಭಗಳಲ್ಲಿ ತನಿಖೆ ವೇಗವಾಗಿ, ನಿಷ್ಪಕ್ಷಪಾತವಾಗಿ ಮತ್ತು ಪಾರದರ್ಶಕವಾಗಿ ನಡೆಯಬೇಕು ಎಂಬುದು ಜನರ ಸಹಜ ನಿರೀಕ್ಷೆ. ನ್ಯಾಯ ವಿಳಂಬವಾದಾಗ ಅನುಮಾನಗಳು ಹುಟ್ಟುತ್ತವೆ; ಅನುಮಾನಗಳು ಹೆಚ್ಚಾದಾಗ ಅಸಮಾಧಾನ ಚಳವಳಿಯಾಗುತ್ತದೆ.

ಪೋಷಕರ ಮನಸ್ಸಿನಲ್ಲಿ ನೆಲೆಸಿರುವ ಭಯ ಒಬ್ಬ ತಂದೆ ಬೆಳಗ್ಗೆ ಮಗುವನ್ನು ಕಾಲೇಜಿಗೆ ಬಿಡುವಾಗ, ಸಂಜೆ ಅದು ಸುರಕ್ಷಿತವಾಗಿ ಮನೆಗೆ ಮರಳುತ್ತದೆ ಎಂಬ ವಿಶ್ವಾಸದಿಂದ ಕಳುಹಿಸುತ್ತಾನೆ.

ಒಬ್ಬ ತಾಯಿ ಮಗುವಿನ ಬ್ಯಾಗಿನಲ್ಲಿ ಪುಸ್ತಕಗಳ ಜೊತೆಗೆ ತನ್ನ ಆಶೀರ್ವಾದವನ್ನೂ ತುಂಬಿರುತ್ತಾಳೆ.

ಆದರೆ ಪ್ರತಿದಿನ ಸುದ್ದಿಗಳಲ್ಲಿ ವಿದ್ಯಾರ್ಥಿಗಳ ದುರ್ಘಟನೆಗಳು, ಹಿಂಸಾಚಾರ, ಆತ್ಮಹತ್ಯೆಗಳು ಅಥವಾ ಸುರಕ್ಷತೆಯ ಪ್ರಶ್ನೆಗಳು ಕಾಣಿಸಿಕೊಂಡಾಗ, ಪ್ರತಿಯೊಬ್ಬ ಪೋಷಕರ ಹೃದಯದಲ್ಲಿ ಒಂದು ಭಯ ಮನೆ ಮಾಡುತ್ತದೆ.

"ನನ್ನ ಮಗುವೂ ಸುರಕ್ಷಿತವಾಗಿದೆಯೇ?"

ಈ ಪ್ರಶ್ನೆಗೆ ಉತ್ತರ ಕೇವಲ ಮನೆಯಲ್ಲಿಲ್ಲ; ಅದು ಸರ್ಕಾರದ ನೀತಿಗಳಲ್ಲಿ, ಶಿಕ್ಷಣ ಸಂಸ್ಥೆಗಳ ಜವಾಬ್ದಾರಿಯಲ್ಲಿ ಮತ್ತು ಸಮಾಜದ ಜಾಗೃತಿಯಲ್ಲಿ ಅಡಗಿದೆ. ಪ್ರತಿಭಟನೆ ಹಿಂಸೆಗೆ ತಿರುಗಬಾರದು ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆ ಒಂದು ಹಕ್ಕು. ಆದರೆ ಹಿಂಸಾಚಾರ ಯಾವತ್ತೂ ಪರಿಹಾರವಲ್ಲ. ವಿದ್ಯಾರ್ಥಿಗಳು ತಮ್ಮ ಧ್ವನಿಯನ್ನು ಶಾಂತಿಯುತವಾಗಿ ವ್ಯಕ್ತಪಡಿಸಬೇಕು.

ಅದೇ ಸಮಯದಲ್ಲಿ, ಆಡಳಿತ ವ್ಯವಸ್ಥೆಯೂ ಸಂವಾದಕ್ಕೆ ಆದ್ಯತೆ ನೀಡಬೇಕು. ಮಾತುಕತೆಯ ಬಾಗಿಲು ಮುಚ್ಚಿದಾಗ ಮಾತ್ರ ಘರ್ಷಣೆಯ ಸಾಧ್ಯತೆ ಹೆಚ್ಚುತ್ತದೆ. ಕಾನೂನು ಸುವ್ಯವಸ್ಥೆ ಕಾಪಾಡುವ ಹೊಣೆಗಾರಿಕೆ ಪೊಲೀಸರದ್ದು. ಆದರೆ ಆ ಹೊಣೆಗಾರಿಕೆಯನ್ನು ಮಾನವೀಯತೆಯೊಂದಿಗೆ ನಿರ್ವಹಿಸುವುದು ಸಹ ಅಷ್ಟೇ ಮುಖ್ಯ. ವಿದ್ಯಾರ್ಥಿಗಳು ಶತ್ರುಗಳಲ್ಲ; ಅವರು ಈ ದೇಶದ ಭವಿಷ್ಯ.

ಮಾಧ್ಯಮ - ಸತ್ಯದ ಸೇತುವೆ

ಪ್ರತಿಭಟನೆಗಳ ಸಂದರ್ಭಗಳಲ್ಲಿ ಮಾಧ್ಯಮವು ಜನ ಮತ್ತು ಘಟನೆಯ ನಡುವಿನ ಸೇತುವೆಯಾಗಿ ಕಾರ್ಯನಿರ್ವಹಿಸುತ್ತದೆ.

ಕರ್ತವ್ಯ ನಿರ್ವಹಿಸುತ್ತಿರುವ ಪತ್ರಕರ್ತರಿಗೆ ಯಾವುದೇ ರೀತಿಯ ಅಡ್ಡಿ, ಬೆದರಿಕೆ ಅಥವಾ ಹಲ್ಲೆ ಆಗಬಾರದು. ಮಹಿಳಾ ಪತ್ರಕರ್ತೆಯರು ಸೇರಿದಂತೆ ಪ್ರತಿಯೊಬ್ಬ ಮಾಧ್ಯಮ ಸಿಬ್ಬಂದಿಗೂ ಸುರಕ್ಷಿತ ವಾತಾವರಣ ಒದಗಿಸುವುದು ಎಲ್ಲರ ಜವಾಬ್ದಾರಿ. ಸ್ವತಂತ್ರ ಮಾಧ್ಯಮವಿಲ್ಲದೆ ಪ್ರಜಾಪ್ರಭುತ್ವದ ಆರೋಗ್ಯವನ್ನು ಕಾಪಾಡಲು ಸಾಧ್ಯವಿಲ್ಲ.

ಇಂದು ದೇಶಕ್ಕೆ ಬೇಕಾಗಿರುವುದು ಏನು?

ಇಂದು ದೇಶಕ್ಕೆ ಬೇಕಾಗಿರುವುದು ಮತ್ತಷ್ಟು ಘರ್ಷಣೆ ಅಲ್ಲ; ಮತ್ತಷ್ಟು ಸಂವಾದ. ಮತ್ತಷ್ಟು ಆರೋಪಗಳಲ್ಲ; ಮತ್ತಷ್ಟು ಪಾರದರ್ಶಕತೆ.

ಮತ್ತಷ್ಟು ಭಯವಲ್ಲ; ಮತ್ತಷ್ಟು ವಿಶ್ವಾಸ. ಪ್ರತಿಯೊಂದು ಶಿಕ್ಷಣ ಸಂಸ್ಥೆಯಲ್ಲೂ ಪರಿಣಾಮಕಾರಿ ದೂರು ನಿವಾರಣಾ ವ್ಯವಸ್ಥೆ ಇರಬೇಕು.

ಮಹಿಳಾ ಸುರಕ್ಷತೆ, ವಿದ್ಯಾರ್ಥಿಗಳ ಮಾನಸಿಕ ಆರೋಗ್ಯ, ಸಮಾಲೋಚನಾ ಕೇಂದ್ರಗಳು ಮತ್ತು ತ್ವರಿತ ತನಿಖಾ ವ್ಯವಸ್ಥೆ ಕಡ್ಡಾಯವಾಗಬೇಕು. ಯಾವುದೇ ವಿದ್ಯಾರ್ಥಿಯ ದೂರನ್ನು ನಿರ್ಲಕ್ಷಿಸುವ ಸಂಸ್ಕೃತಿಗೆ ಅಂತ್ಯ ಹಾಡಬೇಕು.

ಒಂದು ರಾಷ್ಟ್ರದ ಭವಿಷ್ಯ ಅದರ ಯುವಜನತೆಯಲ್ಲಿದೆ. ಆದ್ದರಿಂದ ವಿದ್ಯಾರ್ಥಿಯೊಬ್ಬನು ನ್ಯಾಯಕ್ಕಾಗಿ ಬೀದಿಗಿಳಿಯುವ ಪರಿಸ್ಥಿತಿ ಮರುಕಳಿಸದಂತೆ ಎಲ್ಲರೂ ಸೇರಿ ಕೆಲಸ ಮಾಡಬೇಕು.

ಇಂತಹ ಘಟನೆಗಳು ಸಂಭವಿಸಿದಾಗ ಸಾಮಾಜಿಕ ಜಾಲತಾಣಗಳಲ್ಲಿ ಅಭಿಪ್ರಾಯಗಳು ಎರಡು ಬಣಗಳಾಗಿ ವಿಭಜನೆಯಾಗುತ್ತವೆ. ಆದರೆ ನೋವಿಗೆ ಪಕ್ಷವಿರುವುದಿಲ್ಲ. ಕಣ್ಣೀರಿಗೆ ಧರ್ಮವಿರುವುದಿಲ್ಲ. ನ್ಯಾಯಕ್ಕೆ ರಾಜಕೀಯ ಬಣ್ಣ ಇರಬಾರದು. ಪ್ರತಿಯೊಂದು ಜೀವವೂ ಸಮಾನ ಮೌಲ್ಯದ್ದೇ.

ಪ್ರತಿಯೊಂದು ಗಂಭೀರ ಘಟನೆಯ ತನಿಖೆ ಸಮಯ ಮಿತಿಯೊಳಗೆ ಪೂರ್ಣಗೊಳ್ಳಬೇಕು. ತಪ್ಪಿತಸ್ಥರು ಯಾರೇ ಆಗಿದ್ದರೂ ಕಾನೂನಿನ ಮುಂದೆ ಸಮಾನವಾಗಿ ಉತ್ತರಿಸಬೇಕು. ವಿದ್ಯಾರ್ಥಿಗಳ ಮಾನಸಿಕ ಆರೋಗ್ಯಕ್ಕಾಗಿ ಸಮಾಲೋಚನಾ ಕೇಂದ್ರಗಳು ಕಡ್ಡಾಯವಾಗಬೇಕು. ವಿದ್ಯಾರ್ಥಿ ಸಂಘಟನೆಗಳು ಮತ್ತು ಆಡಳಿತದ ನಡುವೆ ನಿಯಮಿತ ಸಂವಾದ ನಡೆಯಬೇಕು.

ಕರ್ತವ್ಯ ನಿರ್ವಹಿಸುವ ಪತ್ರಕರ್ತರ ಸುರಕ್ಷತೆಗೆ ಸ್ಪಷ್ಟ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಇವು ಕೇವಲ ಸಲಹೆಗಳಲ್ಲ; ಭವಿಷ್ಯದ ಶಿಕ್ಷಣ ವ್ಯವಸ್ಥೆಯ ಅವಶ್ಯಕತೆಗಳು.

ವಿದ್ಯಾರ್ಥಿಗಳಿಗೆ ಒಂದು ಮಾತು...

ಪ್ರಿಯ ವಿದ್ಯಾರ್ಥಿಗಳೇ...

ನಿಮ್ಮ ಧ್ವನಿ ಈ ದೇಶದ ಶಕ್ತಿಯಾಗಿದೆ. ಆದರೆ ನಿಮ್ಮ ಹೋರಾಟದಲ್ಲಿ ಶಾಂತಿ ಇರಲಿ. ನಿಮ್ಮ ಪ್ರತಿಭಟನೆಯಲ್ಲಿ ಪ್ರಜ್ಞೆ ಇರಲಿ. ನಿಮ್ಮ ಕೋಪದಲ್ಲಿ ಮಾನವೀಯತೆ ಇರಲಿ. ಯಾಕೆಂದರೆ ನೀವು ನಾಳೆಯ ಭಾರತದ ನಿರ್ಮಾತೃಗಳು. ಪುಸ್ತಕ ಬಿಟ್ಟು ಕಲ್ಲು ಹಿಡಿದರೆ ಸಮಾಜ ಸೋಲುತ್ತದೆ. ಆದರೆ ಪುಸ್ತಕದ ಜೊತೆಗೆ ಸತ್ಯ ಮತ್ತು ನ್ಯಾಯವನ್ನು ಹಿಡಿದರೆ ದೇಶ ಗೆಲ್ಲುತ್ತದೆ.

ಪೋಷಕರಿಗೆ ಒಂದು ಮಾತು...

ನಿಮ್ಮ ಮಕ್ಕಳಿಗೆ ಅಂಕಗಳ ಜೊತೆಗೆ ಆತ್ಮವಿಶ್ವಾಸವನ್ನೂ ಕಲಿಸಿ. ಭಯವನ್ನು ಮರೆಮಾಚುವ ಬದಲು ಮಾತನಾಡಲು ಪ್ರೋತ್ಸಾಹಿಸಿ. ಸಮಸ್ಯೆ ಬಂದಾಗ ಮೌನವಾಗದೆ ನ್ಯಾಯಕ್ಕಾಗಿ ನಿಲ್ಲುವ ಧೈರ್ಯವನ್ನು ಬೆಳೆಸಿ. ಮಕ್ಕಳಿಗೆ ದೊಡ್ಡ ಆಸ್ತಿ ಹಣವಲ್ಲ; ನಿಮ್ಮ ನಂಬಿಕೆ. ಸರ್ಕಾರ ಮತ್ತು ಶಿಕ್ಷಣ ಸಂಸ್ಥೆಗಳಿಗೆ ಒಂದು ಮನವಿ ಯುವಜನರ ಧ್ವನಿಯನ್ನು ವಿರೋಧವೆಂದು ನೋಡಬೇಡಿ.

ಅದು ಭವಿಷ್ಯದ ಎಚ್ಚರಿಕೆ. ಸಂವಾದಕ್ಕೆ ಬಾಗಿಲು ತೆರೆಯಿರಿ. ಪಾರದರ್ಶಕ ತನಿಖೆ ನಡೆಸಿ. ನ್ಯಾಯವನ್ನು ತ್ವರಿತವಾಗಿ ಒದಗಿಸಿ. ವಿಶ್ವಾಸ ಕಳೆದುಕೊಂಡ ಶಿಕ್ಷಣ ವ್ಯವಸ್ಥೆಯನ್ನು ಪುನಃ ಕಟ್ಟುವುದು ಕಟ್ಟಡಗಳನ್ನು ನಿರ್ಮಿಸುವುದಕ್ಕಿಂತ ದೊಡ್ಡ ಕೆಲಸ.

ಕೊನೆಯ ಮಾತು

ಒಂದು ದೇಶದ ಭವಿಷ್ಯ ಅದರ ಸಂಸತ್ತಿನಲ್ಲಿ ಮಾತ್ರ ನಿರ್ಧಾರವಾಗುವುದಿಲ್ಲ. ಅದು ತರಗತಿ ಕೊಠಡಿಗಳಲ್ಲಿ ರೂಪುಗೊಳ್ಳುತ್ತದೆ. ಗ್ರಂಥಾಲಯಗಳಲ್ಲಿ ಬೆಳೆಯುತ್ತದೆ. ವಿದ್ಯಾರ್ಥಿಗಳ ಕನಸುಗಳಲ್ಲಿ ಜೀವಿಸುತ್ತದೆ. ಆ ಕನಸುಗಳಿಗೆ ಅನ್ಯಾಯದ ನೆರಳು ಬೀಳದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ. ಜಂತರ್ ಮಂತರ್‌ನಲ್ಲಿ ಕೇಳಿಬರುತ್ತಿರುವ ಧ್ವನಿ ಇಂದು ದೆಹಲಿಯಲ್ಲಿರಬಹುದು.

ಆದರೆ ಅದರ ಪ್ರತಿಧ್ವನಿ ದೇಶದ ಪ್ರತಿಯೊಂದು ಶಾಲೆ, ಕಾಲೇಜು, ಪ್ರತಿಯೊಂದು ಮನೆಯ ಹೃದಯವನ್ನು ತಟ್ಟುತ್ತಿದೆ.

ಈ ಧ್ವನಿಯನ್ನು ಕೇಳೋಣ. ಈ ನೋವನ್ನು ಅರ್ಥಮಾಡಿಕೊಳ್ಳೋಣ. ಈ ಕಣ್ಣೀರನ್ನು ಒರೆಸೋಣ.

ಏಕೆಂದರೆ...

"ವಿದ್ಯಾರ್ಥಿಯ ಕಣ್ಣೀರು ಒಣಗಿದ ದಿನವೇ ರಾಷ್ಟçದ ಭವಿಷ್ಯ ಅರಳುತ್ತದೆ. ನ್ಯಾಯವು ಕೇವಲ ನ್ಯಾಯಾಲಯದ ತೀರ್ಪಾಗಿರಬಾರದು; ಪ್ರತಿಯೊಬ್ಬ ವಿದ್ಯಾರ್ಥಿಯ ಬದುಕಿನಲ್ಲಿ ಮೂಡುವ ವಿಶ್ವಾಸವಾಗಬೇಕು. ಯುವಜನತೆಯ ಕನಸುಗಳನ್ನು ಉಳಿಸುವುದೇ ನಿಜವಾದ ರಾಷ್ಟçಸೇವೆ."

- ಈರಮಂಡ ಹರಿಣಿ ವಿಜಯ್,

ಕೋಡಂಬೂರು.