ಗೋಣಿಕೊಪ್ಪ ವರದಿ, ಜು. ೩೦: ಅತ್ತೂರು ನ್ಯಾಷನಲ್ ಅಕಾಡೆಮಿ ಶಾಲೆಯಲ್ಲಿ ಕೌಶಲ್ ವಿಕಾಸ್ ಕಾರ್ಯಕ್ರಮದ ಅಂಗವಾಗಿ ನೈಜ ಅನುಭವದ ಚಟುವಟಿಕೆಯನ್ನು ಆಯೋಜಿಸಲಾಯಿತು. ವಿದ್ಯಾರ್ಥಿಗಳಿಗೆ ಜೀವನ ಕೌಶಲ್ಯಗಳನ್ನು ಬೆಳೆಸುವ ಉದ್ದೇಶದಿಂದ ವಿಶಿಷ್ಟವಾದ ಕಾರ್ಯಕ್ರಮದ ಮೂಲಕ ಗಮನ ಸೆಳೆಯಿತು. ೯ ಮತ್ತು ೧೦ ನೇ ತರಗತಿಯ ವಿದ್ಯಾರ್ಥಿಗಳಿಗೆ ಸ್ಥಳೀಯ ಆಹಾರವಾದ ಕಡ್‌ಂಬುಟ್ಟ್, ಮತ್ತು ಕೋಳಿ ಸಾರು ತಯಾರಿಸುವ ಸಂಪೂರ್ಣ ಮಾಹಿತಿ ನೀಡಲಾಯಿತು. ಅಡುಗೆಗೆ ಬೇಕಾದ ಸಾಮಗ್ರಿಗಳ ಆಯ್ಕೆ, ತಯಾರಿ, ಅಡುಗೆ ಮಾಡುವ ಪ್ರತಿಯೊಂದು ಹಂತ, ಸ್ವಚ್ಛತೆ, ಸುರಕ್ಷತಾ ಕ್ರಮಗಳು ಸೇರಿದಂತೆ ಎಲ್ಲ ಅಂಶಗಳನ್ನು ವಿದ್ಯಾರ್ಥಿಗಳು ಕಲಿತುಕೊಂಡರು.

ವಿದ್ಯಾರ್ಥಿಗಳು ತಯಾರಿಸಿದ ಆಹಾರವನ್ನು ಮಧ್ಯಾಹ್ನದ ಭೋಜನವಾಗಿ ನೀಡಲಾಯಿತು. ಅಡುಗೆ ಮುಗಿದ ಬಳಿಕ ಬಳಸಿದ ಎಲ್ಲಾ ಪಾತ್ರೆಗಳು ಹಾಗೂ ಅಡುಗೆ ಸಾಮಗ್ರಿಗಳನ್ನು ಸ್ವಚ್ಛಗೊಳಿಸಿ ಜವಾಬ್ದಾರಿಯುತ ಕಾರ್ಯನಿರ್ವಹಣೆಯ ಮಹತ್ವವನ್ನು ಅರಿತುಕೊಂಡರು.

ಶಾಲೆಯ ಸಂಸ್ಥಾಪಕಿ ಡಾ. ಅಪ್ಪನೆರವಂಡ ಶಾಂತಿ ಅಚ್ಚಪ್ಪ, ಟ್ರಸ್ಟಿ ಅಯ್ಯಪ್ಪ ಅಚ್ಚಪ್ಪ ಹಾಗೂ ಪ್ರಾಂಶುಪಾಲ ಪುಷ್ಪ ಸುಬ್ಬಯ್ಯ ಮಾರ್ಗದರ್ಶನ ನೀಡಿದರು. ಸಂಪೂರ್ಣ ಚಟುವಟಿಕೆಯಲ್ಲಿ ಶಾಲೆಯ ಎಲ್ಲಾ ಶಿಕ್ಷಕರು ಹಾಗೂ ಶಿಕ್ಷಕೇತರ ಸಿಬ್ಬಂದಿ ವಿದ್ಯಾರ್ಥಿಗಳೊಂದಿಗೆ ನಿಂತು ಸೂಕ್ತ ಮಾರ್ಗದರ್ಶನ ನೀಡಿದರು.