ಮಡಿಕೇರಿ, ಜು. ೩೦; ಮಡಿಕೇರಿ ನಗರದ ಹಳೆ ಖಾಸಗಿ ಬಸ್ ನಿಲ್ದಾಣ ಹಾಗೂ ಸಾರಿಗೆ ಸಂಸ್ಥೆ ಬಸ್ ನಿಲ್ದಾಣವನ್ನು ಸಂಪರ್ಕಿಸುವ ರಸ್ತೆಯ ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಲಾಗಿದೆ. ಇಳಿಮುಖ ಸಂಚಾರದ ಬದಲಿಗೆ ಏರುಮುಖವಾಗಿ ಸಂಚರಿಸಲು ವ್ಯವಸ್ಥೆ ಮಾಡಲಾಗಿದೆ.

ಎರಡು ಬಸ್ ನಿಲ್ದಾಣವನ್ನು ಸಂಪರ್ಕಿಸುವ ರಸ್ತೆಯ ಪಾದಚಾರಿ ಮಾರ್ಗ ಕುಸಿದು ಬಿದ್ದು ಹಾನಿಯಾಗಿದ್ದ ಹಿನ್ನೆಲೆಯಲ್ಲಿ ಈ ರಸ್ತೆಯನ್ನು ಸಂಪೂರ್ಣ ಬಂದ್ ಮಾಡಿ ದುರಸ್ತಿ ಕಾರ್ಯ ಕೈಗೊಳ್ಳಲಾಗಿತ್ತು. ನಿನ್ನೆ ಅಧಿಕಾರಿಗಳು, ನಗರಸಭಾ ಪ್ರತಿನಿಧಿಗಳು ಪರಿಶೀಲನೆ ಮಾಡಿ ಹಳೆ ಖಾಸಗಿ ಬಸ್ ನಿಲ್ದಾಣದಿಂದ ಇಳಿಮುಖವಾಗಿ ಸಾರಿಗೆ ಸಂಸ್ಥೆ ಕಡೆಗೆ ಲಘು ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದರು. ಆದರೆ, ಇದರಿಂದ ಯಾರಿಗೂ ಅಷ್ಟೊಂದು ಅನುಕೂಲವಾಗುವದಿಲ್ಲ, ಬದಲಿಗೆ ಸಾರಿಗೆ ಸಂಸ್ಥೆ ನಿಲ್ದಾಣದ ಕಡೆಯಿಂದ ಏರುಮುಖವಾಗಿ ಸಂಚಾರಕ್ಕೆ ಅವಕಾಶ ಕಲ್ಪಿಸುವಂತೆ ಸಲಹೆಗಳು ಬಂದ ಮೇರೆಗೆ ಇಂದು ಏರುಮುಖವಾಗಿ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ.

ತಜ್ಞರ ಸಲಹೆ ಮೇರೆಗೆ ನಿನ್ನೆ ದಿನ ಇಳಿಮುಖವಾಗಿ ಲಘು ವಾಹನಗಳಿಗೆ ಸಂಚಾರಕ್ಕೆ ಅವಕಾಶ ನೀಡಲಾಗಿತ್ತು. ಇಂದು ಮತ್ತೆ ತಜ್ಞರ ಪರಿಶೀಲನೆಯೊಂದಿಗೆ ಬದಲಾವಣೆ ಮಾಡಿ ಲಘು ವಾಹನ ಹಾಗೂ ಬಸ್‌ಗಳಿಗೆ ಮಾತ್ರ ಏರುಮುಖವಾಗಿ ಸಂಚರಿಸಲು ಅವಕಾಶ ಕಲ್ಪಿಸಲಾಗಿದೆ. ಟ್ಯಾಂಕರ್ ಸೇರಿದಂತೆ ಸರಕು ತುಂಬಿದ ಭಾರೀ ವಾಹನಗಳಿಗೆ ಅವಕಾಶವಿಲ್ಲ

ಬಸ್‌ಗಳಿಗೆ ಅವಕಾಶವಿಲ್ಲ..!

ಈ ಹಿನ್ನೆಲೆಯಲ್ಲಿ ಬೆಳಿಗ್ಗೆ ಕೆಲವೊಂದು ಸಾರಿಗೆ ಸಂಸ್ಥೆ ಬಸ್‌ಗಳು ಈ ರಸ್ತೆ ಮೂಲಕ ಸಂಚಾರ ಆರಂಭಿಸಿದವು. ಈ ನಡುವೆ ನಗರ ಸಂಚಾರಿ ಪೊಲೀಸರು ಈ ರಸ್ತೆಯಲ್ಲಿ ಬಸ್‌ಗಳ ಸಂಚಾರ ನಿಷೇಧಿಸಿ ಲಘುವಾಹನಗಳ ಸಂಚಾರಕ್ಕೆ ಮಾತ್ರ ಅವಕಾಶ ಮಾಡಿಕೊಟ್ಟಿದ್ದಾರೆ. ಬಸ್‌ಗಳ ಸಂಚಾರವನ್ನು ನಿಷೇಧಿಸಿದ್ದಾರೆ. ರಸ್ತೆ ಸುರಕ್ಷತೆ, ಸಾರ್ವಜನಿಕರ ಹಿತದೃಷ್ಟಿಯಿಂದ ಬಸ್ ಹಾಗೂ ಭಾರೀ ವಾಹನಗಳ ಸಂಚಾರಕ್ಕೆ ಅವಕಾಶ ನೀಡುವದಿಲ್ಲ. ಬಸ್‌ಗಳು ಎಂದಿನAತೆ ಈ ಹಿಂದಿನ ವ್ಯವಸ್ಥೆಯಂತೆ ಸಂಚರಿಸಲಿವೆ ಎಂದು ನಗರ ಸಂಚಾರಿ ಠಾಣಾಧಿಕಾರಿ ಶ್ರೀಧರ್ ತಿಳಿಸಿದ್ದಾರೆ.

ಜನರಿಗೆ ಅನುಕೂಲ

ಈ ಬದಲಾವಣೆಯಿಂದ ಜನರಿಗೆ ಸಾಕಷ್ಟು ಅನುಕೂಲವಾಗಲಿದೆ. ಸಾರಿಗೆ ಸಂಸ್ಥೆ ಕಡೆಯಿಂದ ಹಳೆ ಖಾಸಗಿ ಬಸ್ ನಿಲ್ದಾಣಕ್ಕೆ ತೆರಳುವ ರಸ್ತೆ ಸಂಪೂರ್ಣ ಬಂದ್ ಆಗಿದ್ದರಿಂದ ಬಸ್ ನಿಲ್ದಾಣ, ಚೌಕಿ, ಜೂನಿಯರ್ ಕಾಲೇಜು, ಓಂಕಾರೇಶ್ವರ ದೇವಾಲಯ, ಅಂಚೆ ಕಚೇರಿ ಸೇರಿದಂತೆ ಬಹುತೇಕ ಕಡೆಗಳಿಗೆ ತೆರಳಲು ಸಾರ್ವಜನಿಕರು, ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ ತೀರಾ ಅನಾನುಕೂಲವಾಗುತ್ತಿತ್ತು. ಹಿಲ್ ರಸ್ತೆ, ಮಾರುಕಟ್ಟೆಗಾಗಿ ಮಹದೇವಪೇಟೆ ಮೂಲಕ ಅಥವಾ ಗೌಳಿಬೀದಿ, ಮುತ್ತಣ್ಣ ವೃತ್ತವನ್ನು ಬಳಸಿಕೊಂಡು ಬರಬೇಕಿತ್ತು. ಇದೀಗ ಬದಲಾವಣೆಯಿಂದಾಗಿ ನೇರವಾಗಿ ತೆರಳಲು ಅನುಕೂಲವಾದಂತಾಗಿದೆ.