ಸೋಮವಾರಪೇಟೆ, ಜು. ೩೦: ತಾಲೂಕಿನ ತೋಳೂರುಶೆಟ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂತಿ ಗ್ರಾಮದ ಹೊನ್ನೇರು ಬೈಲು ಪ್ರದೇಶದಲ್ಲಿ ಅರಣ್ಯ ಇಲಾಖೆ ಹಿಟಾಚಿ ಯಂತ್ರದ ಮೂಲಕ ಗುಂಡಿ ತೆಗೆಸಿ ಬಿದಿರು ನೆಡುವ ಕಾರ್ಯಕ್ಕೆ ಮುಂದಾದ ವೇಳೆ ಗ್ರಾಮಸ್ಥರು ಅದನ್ನು ತಡೆದು ಅರಣ್ಯ ಇಲಾಖೆ ಅಧಿಕಾರಿಗಳನ್ನು ಪ್ರಶ್ನಿಸಿ ತರಾಟೆಗೆ ತೆಗೆದುಕೊಂಡ ಘಟನೆ ಇಂದು ನಡೆದಿದೆ.

ಗ್ರಾಮಸ್ಥರಿಗೆ ಯಾವುದೇ ಪೂರ್ವ ಮಾಹಿತಿ ನೀಡದೇ, ಹೊನ್ನೇರು ಬೈಲು ಪ್ರದೇಶವು ಅರಣ್ಯ ಇಲಾಖೆಗೆ ಸೇರಿದ ಜಾಗ ಎಂದು ಹೇಳಿ ಗುಂಡಿ ತೆಗೆದು ಬಿದಿರು ನೆಡುವ ಕಾರ್ಯ ಆರಂಭಿಸಲಾಗಿತ್ತು. ವಿಷಯ ತಿಳಿದ ಗ್ರಾಮಸ್ಥರು ಸ್ಥಳಕ್ಕೆ ಧಾವಿಸಿ ಕಾಮಗಾರಿಯನ್ನು ತಕ್ಷಣವೇ ಸ್ಥಗಿತಗೊಳಿಸಿ ಮೇಲಧಿಕಾರಿ ತಕ್ಷಣವೇ ಸ್ಥಳಕ್ಕೆ ಬರಬೇಕೆಂದು ಪಟ್ಟುಹಿಡಿದ ನಂತರ ಸ್ಥಳಕ್ಕೆ ಆಗಮಿಸಿದ್ದ ಡಿಸಿಎಫ್ ಅಭಿಷೇಕ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ನವೀನ್, ಸೋಮವಾರಪೇಟೆ ವಲಯ ಅರಣ್ಯಾಧಿಕಾರಿ ಮಲ್ಲೇಶ್, ಉಪ ವಲಯ ಅರಣ್ಯಾಧಿಕಾರಿ ಕಿರಣ್ ಹಾಗೂ ಸಿಬ್ಬಂದಿಯನ್ನು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡರು.

ಈ ವೇಳೆ ಮಾತನಾಡಿದ ರೈತ ಹೋರಾಟ ಸಮಿತಿಯ ಅಧ್ಯಕ್ಷ ಕೆ.ಬಿ. ಸುರೇಶ್, ಸ್ಥಳೀಯ ರೈತರನ್ನು ಒಕ್ಕಲೆಬ್ಬಿಸುವ ರೀತಿಯಲ್ಲಿ ಅರಣ್ಯ ಇಲಾಖೆ ನಡೆದುಕೊಳ್ಳುತ್ತಿದೆ. ಕೂತಿ ಗ್ರಾಮದಲ್ಲಿ ಸೆಕ್ಷನ್-೪ ಅನ್ನೋದೇ ಇಲ್ಲ. ಇದ್ದಿದ್ದರೆ ಗ್ರಾಮಸ್ಥರಿಗೆ ನೋಟೀಸ್ ನೀಡಬೇಕಿತ್ತು ಎಂದರು. ಸರ್ಕಾರ ಸಮಯ ಕೇಳಿರುವವರೆಗೆ ಅರಣ್ಯ ಇಲಾಖೆ ರೈತರಿಗೆ ಯಾವುದೇ ರೀತಿಯ ತೊಂದರೆ ನೀಡಬಾರದು. ಮೊದಲು ಜಂಟಿ ಸರ್ವೇ ನಡೆಸಿ, ಬಳಿಕ ಮುಂದಿನ ಕ್ರಮ ಕೈಗೊಳ್ಳಬೇಕು. ಗ್ರಾಮಸ್ಥರು ಈಗಾಗಲೇ ನಮೂನೆ ೫೦ ಮತ್ತು ೫೩ನೇ ಕಲಂಗಳಡಿ ಅರ್ಜಿ ಸಲ್ಲಿಸಿದ್ದಾರೆ. ಅದನ್ನು ಪರಿಶೀಲಿಸಿ ನಂತರ ಗ್ರಾಮಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಬರಬೇಕು ಎಂದರು.

ರೈತ ಸಂಘದ ಸೋಮವಾರಪೇಟೆ ತಾಲೂಕು ಅಧ್ಯಕ್ಷ ಕೆ.ಎಂ. ದಿನೇಶ್ ಮಾತನಾಡಿ, ಗ್ರಾಮಸ್ಥರು ಹಾಗೂ ಗ್ರಾಮ ಸಮಿತಿಗೆ ಯಾವುದೇ ಮಾಹಿತಿ ನೀಡದೇ ಹಿಟಾಚಿ ಯಂತ್ರದ ಮೂಲಕ ಗುಂಡಿ ತೆಗೆದು ಗಿಡ ನೆಡುವ ಕೆಲಸ ನಡೆಸಲಾಗಿದೆ. ಆದೇಶದ ಪ್ರತಿಯನ್ನು ಕೇಳಿದರೂ ಅಧಿಕಾರಿಗಳು ನೀಡಿಲ್ಲ. ಕಾಡುಪ್ರಾಣಿಗಳ ಸಮಸ್ಯೆ ಎದುರಾದಾಗ ಸ್ಪಂದಿಸದ ಅರಣ್ಯ ಇಲಾಖೆ, ಈಗ ಏಕಾಏಕಿ ಈ ರೀತಿಯ ಕ್ರಮ ಕೈಗೊಂಡಿರುವುದು ವಿಪರ್ಯಾಸ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಡಿಸಿಎಫ್ ಅಭಿಷೇಕ್ ಜಂಟಿ ಸರ್ವೆ ನಡೆಸಲಾಗುವುದು. ಸರ್ಕಾರಕ್ಕೆ ವರದಿ ನೀಡಲಾಗುವುದು ಎಂಬ ಭರವಸೆ ನೀಡಿದ ಬಳಿಕ ಅಧಿಕಾರಿಗಳು ಸ್ಥಳದಿಂದ ತೆರಳಿದರು. ಈ ಸಂದರ್ಭ ಗ್ರಾಮದ ಪ್ರಕಾಶ್, ಜಿತೇಂದ್ರ, ದಿನೇಶ್, ದರ್ಶನ್, ವಿಜಯ್, ಲೋಹಿತ್, ವಿನೋದ್ ಕುಮಾರ್ ಸೇರಿದಂತೆ ಹಲವಾರು ಗ್ರಾಮಸ್ಥರು ಇದ್ದರು.