ನಾಪೋಕ್ಲು, ಜು. ೨೯: ಇತ್ತೀಚೆಗೆ ನಿಧನರಾದ ಭಾರತದ ಖ್ಯಾತ ಹಿನ್ನೆಲೆ ಗಾಯಕಿ ಎಸ್. ಜಾನಕಿ ಅವರಿಗೆ ನಾಪೋಕ್ಲುವಿನ ಓಂಕಾರ್ ಮ್ಯೂಸಿಕ್ಸ್ ವತಿಯಿಂದ ಇಲ್ಲಿನ ಮಹಿಳಾ ಸಮಾಜದಲ್ಲಿ ಗಾನ ನಮನ ಕಾರ್ಯಕ್ರಮ ಆಯೋಜಿಸಲಾಯಿತು.

ಕಾರ್ಯಕ್ರಮವನ್ನು ಪುಷ್ಪಾರ್ಚನೆ ಮೂಲಕ ಉದ್ಘಾಟಿಸಿದ ಮಡಿಕೇರಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷೆ ಕಡ್ಲೆರ ತುಳಸಿ ಮೋಹನ್ ಅವರು ಮಾತನಾಡಿ, ಎಸ್. ಜಾನಕಿ ಅವರ ಜೀವನ ಸಾಧನೆ, ಸಂಗೀತ ಕ್ಷೇತ್ರಕ್ಕೆ ನೀಡಿದ ಅಪಾರ ಕೊಡುಗೆ ಹಾಗೂ ಅವರ ಗಾಯನ ವೈಶಿಷ್ಟ್ಯದ ಕುರಿತು ಸವಿಸ್ತಾರವಾಗಿ ತಿಳಿಸಿದರು. ಬಳಿಕ ಅವರ ಜನಪ್ರಿಯ ಹಾಡೊಂದನ್ನು ಹಾಡುವ ಮೂಲಕ ಗಾನ ನಮನ ಸಲ್ಲಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಓಂಕಾರ್ ಮ್ಯೂಸಿಕ್ಸ್ ನಾಪೋಕ್ಲು ಸಂಸ್ಥಾಪಕ ರವಿ ಓಂಕಾರ್ ಮಾತನಾಡಿ, ಎಸ್. ಜಾನಕಿ ಅವರು ಭಾರತೀಯ ಸಂಗೀತ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ ಅವರಿಗೆ ಭಾರತರತ್ನ ಪ್ರಶಸ್ತಿ ದೊರೆಯಬೇಕಾಗಿತ್ತು ಎಂದರು.

ನಾಪೋಕ್ಲು ಎಸ್‌ಎನ್‌ಡಿಪಿ ಅಧ್ಯಕ್ಷ ಲವ ಟಿ.ಸಿ., ಗಾಯಕಿ ಡೆರಿನಾ ಲೂಯಿಸ್ ಉಪಸ್ಥಿತರಿದ್ದರು. ಆಕಾಶ್ ಪ್ರಾರ್ಥಿಸಿ, ಮುಬಾರಕ್ ನಿರೂಪಿಸಿದರು. ಈ ಸಂದರ್ಭ ಗಾಯಕಿ ಪ್ರಮೀಳಾ, ವನಿತಾ, ಅನಿಲ್, ರವಿ, ಜಲೇಂದ್ರ, ಸೀಮಾ, ಹರ್ಷಿತಾ, ಮನ್ವಿತ್ ಸೇರಿದಂತೆ ಅನೇಕ ಸಂಗೀತಾಭಿಮಾನಿಗಳು ಭಾಗವಹಿಸಿದ್ದರು.