ಮಡಿಕೇರಿ, ಜು. ೨೯: ಕಾವೇರಿ ಮುನಿದರೆ... ಇದು ಊಹಿಸಲಸಾಧ್ಯವಾದ ಸನ್ನಿವೇಶ. ಸಾಧಾರಣವಾಗಿ ಮುಂಗಾರು ಸಂದರ್ಭದಲ್ಲಿ ಕೊಡಗಿನ ಜನತೆಗೆ ಕಾವೇರಿಯದ್ದು ಒಂದು ಕಥೆಯಾದರೆ, ಕರ್ನಾಟಕ ರಾಜ್ಯಕ್ಕೆ ಇದು ಭಿನ್ನವಾದದ್ದು... ಧಾರಾಕಾರ ಮಳೆಗೆ ಕೊಡಗು ಜರ್ಜರಿತವಾದರೆ ರಾಜ್ಯದಲ್ಲಿ ಇದು ಕನಿಷ್ಟವಾದ ಸುದ್ದಿ… ಕೊಡಗಿನಲ್ಲಿ ಭಾರೀ ಮಳೆಯಾಗುತ್ತಿದೆ ಎಂದಷ್ಟೆ ಪ್ರಚಾರವಾಗುತ್ತದೆ. ಆದರೆ ಕೊಡಗು ಜಿಲ್ಲೆ ಮಾತ್ರ ಹಲವು ತಿಂಗಳು ಮಳೆ - ಗಾಳಿಯಿಂದ ತತ್ತರಿಸುವುದು ಕೊಡಗಿನ ಜನತೆಯನ್ನು ಹೊರತಾಗಿ ಇತರರ ಅನುಭವಕ್ಕೆ ಬಾರದು. ಆದರೆ ಅದೇ ಕಾವೇರಿ ಮತ್ತೊಂದು ರೀತಿಯಲ್ಲಿ ಮುನಿದರೆ ಇಡೀ ರಾಜ್ಯವೇ ಅಲ್ಲೋಲ ಕಲ್ಲೋಲ!
ಇಂತಹ ಪರಿಸ್ಥಿತಿ ಕಳೆದ ಕೆಲವು ವರ್ಷಗಳಿಂದ ಎದುರಾಗಿರಲಿಲ್ಲ. ಆದರೆ ಪ್ರಸಕ್ತ ವರ್ಷ ಇದು ಗಂಭೀರ ಪರಿಣಾಮದ ಮುನ್ಸೂಚನೆ ಕಂಡು ಬರುತ್ತಿದೆ. ಮುಂಗಾರು ಮಳೆ ಈ ಬಾರಿ ದುರ್ಬಲವಾಗಿರುವುದು ಈಗಾಗಲೇ ಆತಂಕದ ಛಾಯೆಯನ್ನು ಸೃಷ್ಟಿಸಿದೆ. ನಿರೀಕ್ಷಿತ ಮಳೆಯಾಗದೆ ರಾಜ್ಯದಲ್ಲಿ ಬರಗಾಲದ ಆತಂಕ ಎದುರಾಗುತ್ತಿದೆ. ಇಡೀ ರಾಜ್ಯಾದ್ಯಂತ ರೈತರು… ಇವರೊಂದಿಗೆ ರಾಜ್ಯ ಸರಕಾರಕ್ಕೂ ಈ ಬಾರಿಯ ಮುಂಗಾರು ಬಿಸಿ ಮೂಡಿಸುತ್ತಿದೆ. ಆಂತರಿಕವಾಗಿ ರಾಜ್ಯದ ಪರಿಸ್ಥಿತಿಯೇ ಅಧೋಗತಿಯಲ್ಲಿದ್ದರೆ, ಕೊಡಗಿನಲ್ಲಿ ಮಳೆಯ ಕೊರತೆಯಾದರೆ ಕರ್ನಾಟಕ- ತಮಿಳುನಾಡು ರಾಜ್ಯಗಳ ನಡುವೆ ಎದುರಾಗುವ ಕಾವೇರಿ ಜಲವಿವಾದದ ಕಾವು ಮೆಲ್ಲ... ಮೆಲ್ಲಗೆ ಆರಂಭಗೊಳ್ಳುತ್ತಿದೆ.
ಈಗಾಗಲೇ ತಮಿಳುನಾಡು ರಾಜ್ಯ ಕಾವೇರಿ ನೀರು ಬಿಡುಗಡೆಗೆ ಒತ್ತಾಯವನ್ನೂ ಮಾಡಿದೆ. ಕಾವೇರಿ ನಿರ್ವಹಣಾ ಸಮಿತಿಯು ೧೫ ದಿನ ತಮಿಳುನಾಡಿಗೆ ಪ್ರತಿನಿತ್ಯ ೩೫೦೦ ಕ್ಯೂಸೆಕ್ಸ್ ನೀರು ಬಿಡುವಂತೆ ಕರ್ನಾಟಕಕ್ಕೆ ಸೂಚಿಸಿದೆ. ಕುಡಿಯಲಿಕ್ಕೇ ನೀರಿಲ್ಲದ ಸಂದರ್ಭ ತಮಿಳುನಾಡಿಗೆ ನೀರು ಬಿಡುವುದು ಹೇಗೆ ಎಂಬ ಜಿಜ್ಞಾಸೆ ರಾಜ್ಯದ್ದಾಗಿದೆ. ಈಗಾಗಲೇ ಮಂಡ್ಯ ಹಾಗೂ ಇತರೆಡೆ ರೈತ ಚಳುವಳಿ ಆರಂಭಗೊAಡಿದೆ.
ರಾಜ್ಯದಲ್ಲಿನ ಪರಿಸ್ಥಿತಿಯೇ ಆತಂಕಕಾರಿಯಾಗಿದೆ. ಮುಂಗಾರು ಆರಂಭದ ಬಳಿಕ ಇದೇ ಮೊದಲ ಬಾರಿಗೆ ಮೊನ್ನೆಯಷ್ಟೆ ಹಾರಂಗಿ ಜಲಾಶಯದಿಂದ ನೀರು ಬಿಡಲಾಗಿದೆ. ಆದರೆ ಮುಂಗಾರಿನ ಪರಿಸ್ಥಿತಿಯನ್ನು ಅವಲೋಕಿಸಿದಲ್ಲಿ ಮುಂದಿನ ದಿನಗಳಲ್ಲಿ ಇದು ಮತ್ತೆ ಕಷ್ಟಸಾಧ್ಯ ಎನಿಸುವಂತಾಗಿದೆ. ಏಕೆಂದರೆ ಕೊಡಗು ಜಿಲ್ಲೆಯಲ್ಲೇ ಈ ಬಾರಿ ನಿರೀಕ್ಷಿತ ಮಳೆಯಾಗಿಲ್ಲ ಮಳೆಯ ಪ್ರಮಾಣ ತೀರಾ ಕಡಿಮೆಯಾಗಿದೆ. ಇದೀಗ ಜುಲೈ ತಿಂಗಳೂ ಪೂರ್ಣವಾಗುವ ಹಂತ ತಲುಪಿದೆ.
ಈಗಿನ ಸನ್ನಿವೇಶ ಗಮನಿಸಿದಲ್ಲಿ ಈ ಬಾರಿ ಕಾವೇರಿಯ ಕಾವು ಏರುವ ಎಲ್ಲಾ ಲಕ್ಷಣಗಳು ಕಂಡುಬರುತ್ತಿವೆ. ರಾಜ್ಯದಲ್ಲಿನ ಬರಗಾಲದ ಪರಿಸ್ಥಿತಿಯ ಬಗ್ಗೆ ಮುಖ್ಯಮಂತ್ರಿಗಳೂ ರಾಜ್ಯದ ಸಂಸದರ ಸಭೆ ಕರೆದು ಕೇಂದ್ರದೊAದಿಗೆ ವ್ಯವಹರಿಸುವ ಪ್ರಯತ್ನ ನಡೆಸಿದ್ದಾರೆ.
ಜಿಲ್ಲೆಯಲ್ಲಿ ಸದ್ಯದ ಮಟ್ಟಿಗೆ ಒಂದಷ್ಟು ಮಳೆಯಾಗುತ್ತಿದೆ ಆದರೆ ಇದು ಜಿಲ್ಲೆಯ ಮಟ್ಟಿಗೇ ಸಾಕಾಗುತ್ತಿಲ್ಲ. ಮುಂದಿನ ದಿನಗಳಲ್ಲಿ ಕೊಡಗು ಜಿಲ್ಲೆಯಲ್ಲಿಯೂ ನೀರಿಗಾಗಿ ಹಾಹಾಕಾರ ಎದುರಾಗುವ ಆತಂಕವೂ ಕೊಡಗಿನ ಜನತೆಯನ್ನು ಕಾಡುತ್ತಿದೆ. ಕೆರೆ - ಬಾವಿಗಳಲ್ಲಿ ಈ ಹಿಂದಿನ ವರ್ಷಗಳಂತೆ ನೀರು ಇನ್ನೂ ತುಂಬಿಲ್ಲ. ಅಂತರ್ಜಲವೂ ಏಳದಿರುವುದು ಮಳೆಯ ವಾತಾವರಣವಿದ್ದರೂ ಆತಂಕ ಮೂಡಿಸುವಂತಿದೆ.
ಜಿಲ್ಲೆಯಲ್ಲಿ ೫೦ ಇಂಚು ಕಡಿಮೆ
ಕಳೆದ ವರ್ಷಕ್ಕೆ ಹೋಲಿಸಿದರೆ, ಕೊಡಗು ಜಿಲ್ಲೆಯಲ್ಲಿ ಸುಮಾರು ೫೦ ಇಂಚು ಮಳೆ ಕಡಿಮೆಯಾಗಿದೆ. ಕಳೆದ ವರ್ಷ ಜನವರಿಯಿಂದ ಈ ತನಕದ ಅವಧಿಯಲ್ಲಿ ಸರಾಸರಿ ೮೪.೫೦ ಇಂಚು ಮಳೆಯಾಗಿದ್ದರೆ ಈ ಬಾರಿ ಸರಾಸರಿ ೩೪ ಇಂಚು ಮಾತ್ರ ದಾಖಲಾಗಿದೆ. ಜಿಲ್ಲೆಯಲ್ಲಿ ಅತ್ಯಧಿಕ ಮಳೆಯಾಗುವ ತಲಕಾವೇರಿ, ಭಾಗಮಂಡಲ ವಿಭಾಗವೂ ಒಳಗೊಂಡಿರುವ ಮಡಿಕೇರಿ ತಾಲೂಕಿನಲ್ಲಿ ಸರಿ ಸುಮಾರು ೭೪ ಇಂಚುಗಳಷ್ಟು ಕಡಿಮೆ ಮಳೆ ಕಳೆದ ವರ್ಷಕ್ಕೆ ಹೋಲಿಸಿದರೆ ಕಂಡು ಬಂದಿದೆ. ಕಳೆದ ವರ್ಷ ಈ ಅವಧಿಯಲ್ಲಿ ೧೨೪ ಇಂಚು ಮಳೆಯಾಗಿದ್ದರೆ ಈ ಬಾರಿ ೫೦ ಇಂಚುಗಳಷ್ಟು ಮಾತ್ರ ಮಳೆ ಸುರಿದಿದೆ. ಈ ಬಾರಿ ವೀರಾಜಪೇಟೆ ತಾಲೂಕಿನಲ್ಲಿ ೩೩ ಇಂಚು, ಪೊನ್ನಂಪೇಟೆ ೩೪.೭೨, ಸೋಮವಾರಪೇಟೆ ೩೫.೭೬ ಹಾಗೂ ಕುಶಾಲನಗರ ತಾಲೂಕಿನಲ್ಲಿ ೧೪ ಇಂಚು ಮಳೆಯಾಗಿದೆ.
ಕಳೆದ ವರ್ಷ ಈ ಪ್ರಮಾಣ ಈತನಕದ ಅವಧಿಯಲ್ಲಿ ವೀರಾಜಪೇಟೆ ತಾಲೂ ಕಿನಲ್ಲಿ ೭೬.೩೩, ಪೊನ್ನಂಪೇಟೆ ೭೯.೬೪, ಸೋಮವಾರಪೇಟೆ ೯೩.೫೩ ಹಾಗೂ ಕುಶಾಲನಗರ ತಾಲೂಕಿನಲ್ಲಿ ೪೧.೩೧ ಇಂಚುಗಳಷ್ಟಾಗಿತ್ತು.
- ಶಶಿ ಸೋಮಯ್ಯ