ಗೋಣಿಕೊಪ್ಪಲು, ಜು. ೨೯: ಮುಂದಿನ ಆಗಸ್ಟ್ ೭ ರಂದು ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಚಲೋ ಕಾರ್ಯಕ್ರಮವನ್ನು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ವತಿಯಿಂದ ಹಮ್ಮಿಕೊಳ್ಳಲಾಗಿದೆ. ಹೋರಾಟಕ್ಕೆ ಜಿಲ್ಲೆಯ ೧೭ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ ಎಂದು ಕೊಡಗು ಜಿಲ್ಲಾ ರೈತ ಸಂಘದ ಅಧ್ಯಕ್ಷ ಕಾಡ್ಯಮಾಡ ಮನುಸೋಮಯ್ಯ ತಿಳಿಸಿದ್ದಾರೆ.
ಗೋಣಿಕೊಪ್ಪಲುವಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ರೈತರ ಪೂರ್ವಭಾವಿ ಸಭೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ತಿಳಿಸಿದ ಮನುಸೋಮಯ್ಯ, ಇತ್ತೀಚೆಗೆ ಬಿಡದಿಯ ರೈತರ ಚಳವಳಿಯಲ್ಲಿ ಭಾಗವಹಿಸಲು ಕೊಡಗು ಜಿಲ್ಲೆಯ ವಿವಿಧ ಭಾಗದಿಂದ ರೈತರು ತೆರಳುತ್ತಿದ್ದ ಸಂದರ್ಭ ರೈತರನ್ನು ರಸ್ತೆ ಮಧ್ಯದಲ್ಲಿಯೇ ತಡೆದು ಹೋರಾಟದ ಜಾಗಕ್ಕೆ ತೆರಳಲು ಅಡ್ಡಿಪಡಿಸಿದ್ದಲ್ಲದೆ ರೈತರನ್ನು ಬಂಧಿಸಿ ಸಂಜೆಯ ವೇಳೆ ಬಿಡುಗಡೆಗೊಳಿಸಿದ್ದಾರೆ. ಇದರಿಂದ ರೈತರು ನೋವನ್ನು ಅನುಭವಿಸಿದ್ದಾರೆ. ಜಿಲ್ಲೆಯ ನಾನಾ ಭಾಗದಿಂದ ಬಿಡದಿಯ ಪ್ರತಿಭಟನಾ ಸ್ಥಳಕ್ಕೆ ಸಾವಿರಾರು ರೈತರು ತೆರಳಿ ತಮ್ಮ ಬೆಂಬಲ ಸೂಚಿಸಿದ್ದಾರೆ. ಆದರೆ ಕೊಡಗು ಜಿಲ್ಲೆಯಲ್ಲಿ ಮಾತ್ರ ಪೊಲೀಸರು ರೈತರನ್ನು ತಡೆಯುವ ಮೂಲಕ ಹೋರಾಟದಲ್ಲಿ ಭಾಗವಹಿಸದಂತೆ ಮಾಡಿದ್ದರು. ಇದರ ಬಗ್ಗೆ ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸಮಂಜಸವಾದ ಉತ್ತರ ನೀಡಬೇಕು.
ಕೊಡಗು ಜಿಲ್ಲೆಯ ರೈತರು ಕಳೆದ ೧೪ ವರ್ಷಗಳಿಂದ ಉತ್ತಮ ರೀತಿಯಲ್ಲಿ ಶಾಂತಿಯುತವಾಗಿ ಪ್ರತಿಭಟನೆಯನ್ನು ನಡೆಸುತ್ತ ಬಂದಿದ್ದಾರೆ. ಇತ್ತೀಚೆಗೆ ಪೊಲೀಸರು ರೈತರನ್ನು, ಹೋರಾಟಗಾರರನ್ನು ನಡೆಸಿಕೊಂಡ ರೀತಿ ಸರಿಯಲ್ಲ. ರೈತ ಸಂಘದ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನ ಎಂದಿಗೂ ನಡೆಯುವುದಿಲ್ಲ ಎಂದು ಹೇಳಿದರು.
ಈ ಹಿಂದೆ ಮುಖ್ಯಮಂತ್ರಿಗಳಾಗಿದ್ದ ಕೊಡಗಿನ ಗುಂಡೂರಾವ್‌ರವರ ಅವಧಿಯಲ್ಲಿ ಅತೀ ದೊಡ್ಡ ಹೋರಾಟವನ್ನು ನಡೆಸಿ ಸರ್ಕಾರದ ನಡೆಯನ್ನು ಖಂಡಿಸಲಾಗಿತ್ತು. ಈ ಬಾರಿಯೂ ಸರ್ಕಾರದ ನಡೆಯನ್ನು ರೈತ ಸಂಘವು ಖಂಡಿಸುತ್ತದೆ. ಈಗಾಗಲೇ ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಗೆ ಚಲೋ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ಸಂದರ್ಭದಲ್ಲಿ ೪ಐದನೇ ಪುಟಕ್ಕೆ
(ಮೊದಲ ಪುಟದಿಂದ) ಪೊಲೀಸ್ ವರಿಷ್ಠಾಧಿಕಾರಿಗಳು ಸರ್ಕಾರದಿಂದ ರೈತರನ್ನು ತಡೆಯಲು ನೀಡಿರುವ ಆದೇಶ ಪತ್ರವನ್ನು ರೈತ ಸಂಘಕ್ಕೆ ನೀಡಬೇಕು. ಆಗಿಂದ್ದಾಗಿಯೇ ರೈತರ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನಕ್ಕೆ ವಿರಾಮ ಹಾಕಬೇಕು.
ಜಿಲ್ಲೆಯಲ್ಲಿ ಆನೆ-ಮಾನವ ಸಂಘರ್ಷ, ರೈತರ ಬೆಳೆ ನಾಶ, ಸೇರಿದಂತೆ ಹತ್ತಾರು ಸಮಸ್ಯೆಗಳಿದ್ದರೂ ಇವುಗಳ ಬಗ್ಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಸರಿಯಾದ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುತ್ತಿಲ್ಲ. ರೈತರು ಸಮಸ್ಯೆಯಿಂದ ಬಳಲುತ್ತಿದ್ದಾರೆ. ರೈತ ಸಂಘವು ಜನಪರ ಹೋರಾಟವನ್ನು ಕೈಗೆತ್ತಿಕೊಂಡು ಹಲವು ಹೋರಾಟದಲ್ಲಿ ಪರಿಹಾರವನ್ನು ಜನತೆಗೆ ನೀಡಿದ್ದೇವೆ. ನಮ್ಮ ಹೋರಾಟವು ಯಾವುದೇ ಜನಪ್ರತಿನಿಧಿಗಳ ವಿರುದ್ದವಾಗಿರುವುದಿಲ್ಲ. ವ್ಯವಸ್ಥೆಯ ಬದಲಾವಣೆಗೆ ಅನಿವಾರ್ಯವಾಗಿ ಹೋರಾಟವನ್ನು ಕೈಗೆತ್ತಿಕೊಳ್ಳಬೇಕಾಗಿದೆ. ಈ ನಿಟ್ಟಿನಲ್ಲಿ ಆಗಸ್ಟ್ ೭ರ ಹೋರಾಟವು ಅತ್ಯಂತ ಪ್ರಾಮುಖ್ಯತೆಯನ್ನು ಪಡೆದಿದೆ ಎಂದರು.
ಆಗಸ್ಟ್ ೭ರಂದು ಪೊಲೀಸ್ ವರಿಷ್ಠಾಧಿಕಾರಿಗಳು ನೀಡುವ ಉತ್ತರದ ಮೇಲೆ ನಮ್ಮ ಮುಂದಿನ ಕೊಡಗು ಬಂದ್ ಕಾರ್ಯಕ್ರಮದ ರೂಪುರೇಷೆಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಕೊಡಗು ಬಂದ್‌ನಿAದ ಜನತೆಗೆ ತೊಂದರೆ ಮಾಡುವ ಉದ್ದೇಶ ನಮ್ಮದಲ್ಲ ಎಂದು ಮನುಸೋಮಯ್ಯ ತಿಳಿಸಿದರು.
ಈ ವೇಳೆ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚೆಟ್ರುಮಾಡ ಸುಜಯ್ ಬೋಪಯ್ಯ, ಜಿಲ್ಲಾ ಸಂಚಾಲಕ ಪುಚ್ಚಿಮಾಡ ಸುಭಾಶ್ ಸುಬ್ಬಯ್ಯ, ಮಾಯಮುಡಿ ಅಧ್ಯಕ್ಷ ಪುಚ್ಚಿಮಾಡ ರಾಯ್ ಮಾದಪ್ಪ, ಅಮ್ಮತ್ತಿ ಹೋಬಳಿ ರೈತ ಸಂಘದ ಅಧ್ಯಕ್ಷ ಚೇನಂಡ ಪೂಣಚ್ಚ ಉಪಸ್ಥಿತರಿದ್ದರು.