ಕಣಿವೆ, ಜು. ೨೭: ಕೊಡಗು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ವತಿಯಿಂದ ಜೂನ್ ೨೩ ರಂದು ಕುಶಾಲನಗರದಲ್ಲಿ ನಡೆದ ಪ್ರಪ್ರಥಮ ಶರಣ ಸಾಹಿತ್ಯ ಸಮ್ಮೇಳನ ಕೊಡಗು ಜಿಲ್ಲೆಯಲ್ಲಿ ಶರಣ ಸಾಹಿತ್ಯದ ಅಲೆಯನ್ನು ಎಬ್ಬಿಸಿತು ಎಂದು ಶರಣ ಸಾಹಿತ್ಯ ಪರಿಷತ್ತು ಗೌರವಾಧ್ಯಕ್ಷರೂ ಆದ ಕೊಡ್ಲಿಪೇಟೆ ಕಿರಿಕೊಡ್ಲಿ ಮಠದ ಶ್ರೀ ಸದಾಶಿವ ಸ್ವಾಮೀಜಿ ಶ್ಲಾಘಿಸಿದರು.
ಕುಶಾಲನಗರ ಶರಣ ಸಾಹಿತ್ಯ ಪರಿಷತ್ತು ಕಛೇರಿಯಲ್ಲಿ ನಡೆದ ಸಮ್ಮೇಳನದ ಲೆಕ್ಕಪತ್ರ ಮಂಡನೆ ಸಭೆಯ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಸಮ್ಮೇಳನದ ಯಶಸ್ಸಿಗೆ ತಿಂಗಳ ಕಾಲ ಶ್ರಮಿಸಿದ ಪರಿಷತ್ತು ಪದಾಧಿಕಾರಿಗಳು ಹಾಗು ಜಿಲ್ಲಾ ವೀರಶೈವ ಮಹಾಸಭಾದ ಪದಾಧಿಕಾರಿಗಳನ್ನು ಅಭಿನಂದಿಸಿ ದರು.
ಪರಿಷತ್ತಿನ ಕೇಂದ್ರ ಸಮಿತಿಯ ಗೌರವಾಧ್ಯಕ್ಷರಾದ ಸುತ್ತೂರು ಶ್ರೀಗಳು ಸಮ್ಮೇಳನದ ಸಂಘಟನೆಯ ಕುರಿತು ಶ್ಲಾಘನೆ ವ್ಯಕ್ತಪಡಿಸಿದ್ದನ್ನು ಸದಾಶಿವ ಸ್ವಾಮೀಜಿ ಸ್ಮರಿಸಿದರು. ಪರಿಷತ್ತಿನ ಚಟುವಟಿಕೆಗಳು ನಿರಂತರವಾಗಿ ನಡೆವ ಮೂಲಕ ಶರಣರ ಚಿಂತನೆಗಳನ್ನು ಜನಮಾನಸದಲ್ಲಿ ಬಿತ್ತುವಂತೆ ಸದಾಶಿವ ಸ್ವಾಮೀಜಿ ಕರೆಕೊಟ್ಟರು.
ಸಮ್ಮೇಳನಕ್ಕೆ ಭಕ್ತ ಜನ ಶರಣರಿಂದ ಒಟ್ಟು ೫.೭೫ ಲಕ್ಷ ಸಂಗ್ರಹವಾಗಿದ್ದು, ೫.೪೩ ಲಕ್ಷ ಖರ್ಚಾಗಿದೆ.
ಎಲ್ಲಾ ಖರ್ಚು ವೆಚ್ಚಗಳನ್ನು ಶಿಸ್ತು ಬದ್ಧವಾಗಿ ಹಾಗೂ ಪ್ರಾಮಾಣಿಕತೆಯಿಂದ ನಿರ್ವಹಿಸಿ ರುವ ಬಗ್ಗೆ ಸದಾಶಿವ ಸ್ವಾಮೀಜಿ ಮೆಚ್ಚುಗೆ ವ್ಯಕ್ತಪಡಿಸಿದರು.
ಸಾರ್ವಜನಿಕರ ಸಹಕಾರ ಪಡೆದು ಹಮ್ಮಿ ಕೊಳ್ಳುವ ಸಾರ್ವಜನಿಕ ಕಾರ್ಯಕ್ರಮ ಗಳ ಲೆಕ್ಕ ಪತ್ರಗಳು ಪಾರದರ್ಶಕ ವಾಗಿರವಾಗಿರಬೇಕು ಎಂಬ ಆಶಯದೊಂದಿಗೆ ಶರಣ ಸಾಹಿತ್ಯ ಸಮ್ಮೇಳನದ ಖರ್ಚು ವೆಚ್ಚಗಳನ್ನು ನಿರ್ವಹಿಸಿದ್ದನ್ನು ಕೊಡಗು ಜಿಲ್ಲೆ ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷರಾದ ಹೆಚ್.ವಿ.ಶಿವಪ್ಪ ಶ್ಲಾಘಿಸಿದರು.
ಜಿಲ್ಲೆಯ ಎಲ್ಲಾ ಶ್ರೀಮಠಗಳ ಮಠಾಧೀಶರು, ವಿವಿಧ ಸಮಾಜಗಳ ಗಣ್ಯರು ಹಾಗೂ ಸಾಹಿತ್ಯದ ಅಭಿರುಚಿಯುಳ್ಳ ಎಲ್ಲರನ್ನು ಸಂಪರ್ಕಿಸಿ ಸರ್ವಜನರ ಸಹಭಾಗಿತ್ವದಲ್ಲಿ ಸಮ್ಮೇಳನ ಸಂಘಟಿಸಲಾಯಿತು.
ಸಮ್ಮೇಳನಕ್ಕೆ ಎಲ್ಲಾ ರೀತಿಯಲ್ಲಿ ಸಹಕಾರ ನೀಡಿದ ಸರ್ವ ಶರಣ ಬಂಧುಗಳ ಸಹಕಾರ ಅನನ್ಯವಾದುದು ಎಂದು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ.ಎಸ್.ಮೂರ್ತಿ ಹೇಳಿದರು.
ಜಿಲ್ಲಾ ಕದಳಿ ವೇದಿಕೆ ಅಧ್ಯಕ್ಷೆ ಸರೋಜ ಆರಾಧ್ಯ, ಯುವ ಘಟಕದ ಜಿಲ್ಲಾ ಅಧ್ಯಕ್ಷ ಮೋಹನ್ ಹಕ್ಕೆ, ಪರಿಷತ್ತಿನ ಜಿಲ್ಲಾ ಕಾರ್ಯದರ್ಶಿ ಬಿ.ನಟರಾಜು, ಕೋಶಾಧಿಕಾರಿ ಕೆ.ಪಿ.ಪರಮೇಶ್, ಉಪಾಧ್ಯಕ್ಷ ಬಿ.ಲೋಕೇಶ್, ವರುಣ್, ದಿವಾಕರ್, ರೇಖಾ ನಟರಾಜು ಮತ್ತಿತರರು ಇದ್ದರು.