ವೀರಾಜಪೇಟೆ, ಜು. ೨೭: ವೀರಾಜಪೇಟೆಯ ಐತಿಹಾಸಿಕ ಗೌರಿ-ಗಣೇಶೋತ್ಸವವನ್ನು ಶಾಂತಿಯುತ, ಸಾಂಪ್ರದಾಯಿಕ ಹಾಗೂ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗದ ರೀತಿಯಲ್ಲಿ ಆಚರಿಸುವ ಉದ್ದೇಶದಿಂದ ವೀರಾಜಪೇಟೆ ತಾಲೂಕು ಪೊಲೀಸ್ ಉಪ ಅಧೀಕ್ಷಕರಾದ ಮಹೇಶ್ ಕುಮಾರ್ ಅವರ ನೇತೃತ್ವದಲ್ಲಿ ವೀರಾಜಪೇಟೆ ನಗರ ಪೊಲೀಸ್ ಠಾಣೆಯ ಸಭಾಂಗಣದಲ್ಲಿ ಪೂರ್ವಭಾವಿ ಸಭೆ ನಡೆಯಿತು.
ಸಭೆಯಲ್ಲಿ ಉತ್ಸವದ ವೇಳೆ ಸಾರ್ವಜನಿಕರಿಗೆ ತೊಂದರೆಯಾಗದAತೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವುದು, ಕರ್ಕಶ ಶಬ್ದ ಉಂಟುಮಾಡುವ ಧ್ವನಿವರ್ಧಕ(ಡಿಜೆ) ಬಳಕೆಯನ್ನು ನಿಯಂತ್ರಿಸುವುದು ಹಾಗೂ ಸಾಂಪ್ರದಾಯಿಕ ಆಚರಣೆಗೆ ಹೆಚ್ಚಿನ ಆದ್ಯತೆ ನೀಡುವ ಕುರಿತು ಸುದೀರ್ಘ ಚರ್ಚೆ ನಡೆಯಿತು.
ಈ ಸಂಬAಧ ವಿವಿಧ ಉತ್ಸವ ಸಮಿತಿಗಳ ಅಧ್ಯಕ್ಷರು ಹಾಗೂ ಮುಖಂಡರ ಅಭಿಪ್ರಾಯಗಳನ್ನು ಪೊಲೀಸ್ ಇಲಾಖೆ ಆಲಿಸಿತು. ಯಾವುದೇ ಕಾರಣಕ್ಕೂ ಡಿಜೆ ಬಳಸದೇ ಉತ್ಸವವನ್ನು ಆಚರಿಸುವಂತೆ ಪೊಲೀಸ್ ಉಪ ಅಧೀಕ್ಷಕರು ಮನವಿ ಮಾಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಕೆಲವು ಉತ್ಸವ ಸಮಿತಿಯ ಪ್ರತಿನಿಧಿಗಳು ಪೊಲೀಸ್ ಇಲಾಖೆ ವಿಧಿಸುವ ಎಲ್ಲ ನಿಯಮಗಳು ಹಾಗೂ ಮಾನದಂಡಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಷರತ್ತಿನಡಿ ಡಿಜೆ ಬಳಸಲು ಅವಕಾಶ ನೀಡಬೇಕು. ಕಳೆದ ವರ್ಷವೂ ಪೊಲೀಸ್ ಇಲಾಖೆಯ ಮಾರ್ಗಸೂಚಿಗಳನ್ನು ಸಂಪೂರ್ಣವಾಗಿ ಪಾಲಿಸಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಉತ್ಸವವನ್ನು ಯಶಸ್ವಿಯಾಗಿ ನಡೆಸಿದ್ದೇವೆ. ಈ ಬಾರಿಯೂ ಅದೇ ರೀತಿಯಲ್ಲಿ ಆಚರಿಸಲು ಅವಕಾಶ ನೀಡಬೇಕು ಎಂದು ಮನವಿ ಮಾಡಿದರು. ಪಂಜರಪೇಟೆಯ ವಿನಾಯಕ ಸೇವಾ ಸಮಿತಿಯವರು ಡಿಜೆ ಬಳಸಲ್ಲ ಎಂದು ಸಭೆಯಲ್ಲಿ ತಿಳಿಸಿದರು.
ಇನ್ನಿತರ ಗಣೇಶೋತ್ಸವ ಸಮಿತಿಯವರು ಡಿಜೆ ಬಳಕೆ ಸೇರಿದಂತೆ ಹಲವು ವಿಷಯಗಳ ಕುರಿತು ಚರ್ಚೆ ನಡೆದರೂ ಯಾವುದೇ ಅಂತಿಮ ಒಮ್ಮತದ ನಿರ್ಧಾರಕ್ಕೆ ಬರಲು ಸಾಧ್ಯವಾಗಲಿಲ್ಲ. ಹೀಗಾಗಿ ಎಲ್ಲಾ ಸಮಿತಿಗಳ ಅಭಿಪ್ರಾಯಗಳನ್ನು ಮತ್ತೊಮ್ಮೆ ಪರಿಗಣಿಸಿ ಅಂತಿಮ ತೀರ್ಮಾನ ಕೈಗೊಳ್ಳುವ ಉದ್ದೇಶದಿಂದ ಆಗಸ್ಟ್ ೩ ರಂದು ಸಂಜೆ ೪ ಗಂಟೆಗೆ ಮತ್ತೊಂದು ಸಭೆ ನಡೆಸಲು ನಿರ್ಧರಿಸಲಾಯಿತು.
ಡಿವೈಎಸ್ಪಿ ಮಹೇಶ್ ಕುಮಾರ್ ಮಾತನಾಡಿ, ಐತಿಹಾಸಿಕ ಗೌರಿ-ಗಣೇಶೋತ್ಸವವು ವೀರಾಜಪೇಟೆಯಲ್ಲಿ ಬಹಳ ವಿಜೃಂಭಣೆಯಿAದ ನಡೆಸಿಕೊಂಡು ಬರಲಾಗುತ್ತಿದೆ. ಎಲ್ಲ ಸಮಿತಿಗಳು ಪರಸ್ಪರ ಸಹಕಾರ, ಕಾನೂನು ಪಾಲನೆ ಹಾಗೂ ಸಾಮಾಜಿಕ ಜವಾಬ್ದಾರಿಯೊಂದಿಗೆ ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದ ರೀತಿಯಲ್ಲಿ ಉತ್ಸವವನ್ನು ಆಚರಿಸಿ, ಶಾಂತಿ, ಸೌಹಾರ್ದತೆ ಮತ್ತು ಸಾಂಪ್ರದಾಯಿಕತೆಯ ಪ್ರತೀಕವಾಗುವಂತೆ ಯಶಸ್ವಿಗೊಳಿಸಬೇಕು. ಈ ನಿಟ್ಟಿನಲ್ಲಿ ಸಮಿತಿಯವರು ಕೈ ಜೋಡಿಸಬೇಕು. ಡಿಜೆ ಬಳಸಿ ಕರ್ಕಶ ಶಬ್ದದೊಂದಿಗೆ ಸಾರ್ವಜನಿಕರಿಗೆ ತೊಂದರೆ ಯಾಗುವುದು ಬೇಡ. ಇದರಿಂದ ಅನೇಕ ಸಮಸ್ಯೆಗಳು ಉಂಟಾಗುತ್ತದೆ. ಹಬ್ಬವನ್ನು ಸಾಂಪ್ರಾದಾಯಿಕವಾಗಿ ಆಚರಣೆ ಮಾಡುತ್ತಾ ಸಂಸ್ಕೃತಿ ಉಳಿಸಿಕೊಳ್ಳಬೇಕು. ಜನರಿಗೆ ಮನರಂಜನೆ ಬೇಕು ಅನ್ನುವವರು ಇಲ್ಲಿನ ಸಾಂಪ್ರದಾಯಿಕ ವಾದ್ಯಗಳನ್ನೆ ಬಳಸಿಕೊಳ್ಳಿ. ಡಿಜೆ ಬಳಕೆಗೆ ಅವಕಾಶವಿಲ್ಲ. ಎಲ್ಲರೂ ಒಮ್ಮತದಿಂದ ಒಂದು ತೀರ್ಮಾನಕ್ಕೆ ಬಂದಲ್ಲಿ ಸಮಸ್ಯೆ ಬಗೆ ಹರಿಯುತ್ತದೆ. ಒಂದು ಸಮಿತಿಯವರು ಡಿಜೆ ಬಳಸುತ್ತೇವೆ ಎಂದರೆ ಉಳಿದ ಸಮಿತಿಯವರು ಪ್ರಶ್ನೆ ಮಾಡುತ್ತಾರೆ. ಹಾಗಾಗಿ ಎಲ್ಲರೂ ಒಟ್ಟಾಗಿ ಡಿಜೆಯನ್ನು ವಿರೋಧಿಸಬೇಕಿದೆ. ಇದಕ್ಕೆ ಈಗಲೇ ನಾಂದಿ ಹಾಡಿದರೆ ಮುಂದಿನ ದಿನಗಳಲ್ಲಿ ಎಲ್ಲರೂ ಇದೇ ನಿಯಮ ಪಾಲಿಸುತ್ತಾರೆ. ಎಂದರು. ಸಭೆಯಲ್ಲಿ ವೀರಾಜಪೇಟೆ ವೃತ್ತ ನಿರೀಕ್ಷಕರಾದ ಅನೂಪ್ ಮಾದಪ್ಪ, ನಗರ ಪೊಲೀಸ್ ಠಾಣಾಧಿಕಾರಿ ಪ್ರಮೋದ್ ಮಾತನಾಡಿದರು. ಅಪರಾಧ ವಿಭಾಗದ ಪಿಎಸ್ಐ ಕಾವೇರಪ್ಪ, ಹಾಗೂ ಪೊಲೀಸ್ ಸಿಬ್ಬಂದಿಗಳು, ವಿವಿಧ ಗೌರಿ-ಗಣೇಶೋತ್ಸವ ಸಮಿತಿಗಳ ಅಧ್ಯಕ್ಷರು, ಪದಾಧಿಕಾರಿಗಳು ಮತ್ತು ಮುಖಂಡರು ಉಪಸ್ಥಿತರಿದ್ದರು.