ಕಣಿವೆ, ಜು. ೨೬: ಈ ಬಾರಿ ಹೆಬ್ಬಾಲೆ ತೊರೆನೂರು, ಕಣಿವೆ, ಚಿನ್ನೇನಹಳ್ಳಿ, ಹಳಗೋಟೆ, ಮರೂರು ಮೊದಲಾದ ಗ್ರಾಮಗಳ ಹಸಿಮೆಣಸಿನಕಾಯಿ ಕೃಷಿಕರು ಅರೆ ನೀರಾವರಿ ಪ್ರದೇಶದಲ್ಲಿ ಬೆಳೆದಿರುವ ಮೆಣಸಿನಕಾಯಿ ಫಸಲಿಗೆ ಇದೀಗ ಮಾರುಕಟ್ಟೆಯಲ್ಲಿ ದರ ಕುಸಿತಗೊಂಡಿರುವುದರಿAದ ಅಪಾರ ಪ್ರಮಾಣದ ನಷ್ಟಕ್ಕೆ ಬೆಳೆಗಾರರು ಸಿಲುಕಿದ್ದಾರೆ.

ನಾಲ್ಕರಿಂದ ನಾಲ್ಕುವರೆ ತಿಂಗಳ ಅವಧಿಯ ಹಸಿ ಮೆಣಸಿನ ಕಾಯಿ ಕೃಷಿಯಲ್ಲಿ ಹೆಬ್ಬಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅನೇಕ ಗ್ರಾಮಗಳ ರೈತರು ತೊಡಗಿಸಿಕೊಂಡಿದ್ದಾರೆ. ಒಂದು ಎಕರೆ ಪ್ರದೇಶದಲ್ಲಿ ಹಸಿಮೆಣಸಿನಕಾಯಿ ಫಸಲು ತೆಗೆಯಲು ೨೫ ರಿಂದ ೩೦ ಸಾವಿರ ವ್ಯಯ ಆಗುತ್ತದೆ. ಆದರೆ ಈಗ ಮಾರುಕಟ್ಟೆಯಲ್ಲಿ ರೈತರಿಗೆ ಕೆ.ಜಿ. ಒಂದಕ್ಕೆ ಕೇವಲ ಹನ್ನೆರಡರಿಂದ ಹದಿನೈದು ರೂಪಾಯಿಗಳು ದೊರಕುತ್ತಿರುವುದು ರೈತರ ನೆಮ್ಮದಿಯನ್ನು ಹಾಳು ಮಾಡಿದೆ. ರೈತರು ತಾವು ತಮ್ಮ ಹೊಲದಲ್ಲಿ ಬೆಳೆದ ಹಸಿಮೆಣಸಿನ ಕಾಯಿ ಕಟಾವು ಮಾಡಲು ಕಾರ್ಮಿಕ ಮಹಿಳೆಯರಿಗೆ ನೀಡುವ ಕೂಲಿಯ ದರ ಕೂಡ ಮೆಣಸಿನಕಾಯಿ ಮಾರಾಟದಿಂದ ದೊರಕುತ್ತಿಲ್ಲ. ಹಾಗಾಗಿ ಕೆಲವು ರೈತರು ಹಸಿಮೆಣಸಿನ ಕಾಯಿಯನ್ನು ಕಟಾವು ಮಾಡದೆ ಬಳ್ಳಿಯಲ್ಲಿ ಹಾಗೆಯೇ ಬಿಟ್ಟಿರುವುದು ಕಂಡು ಬರುತ್ತಿದೆ.

ಒಂದು ಎಕರೆ ಭೂಮಿಯಲ್ಲಿ ನಾಲ್ಕು ಸಾವಿರ ಗಿಡಗಳನ್ನು ನೆಡಲಾಗುತ್ತದೆ. ರೈತರಿಗೆ ಕೆ.ಜಿ.ಗೆ ಕನಿಷ್ಟ ೨೦ ದೊರಕಿದರೂ ಕೂಡ ಬೆಳೆಗೆ ಮಾಡಿದ ಖರ್ಚು ಕೈಗೆ ಬರುವುದಿಲ್ಲ. ರೈತರು ಯಾವುದೇ ಕೃಷಿ ಕೈಗೊಂಡರೂ ಕೂಡ ಖರ್ಚಿನ ಪ್ರಮಾಣ ಜಾಸ್ತಿಯೇ ಇರುತ್ತದೆ. ಹಾಗಾಗಿ ರೈತರಿಗೆ ದೊರಕುವ ಈ ಅಲ್ಪ ದರ ಯಾವುದಕ್ಕೂ ಸಾಲುತ್ತಿಲ್ಲ. ಆದ್ದರಿಂದ ಕೃಷಿ, ತೋಟಗಾರಿಕೆ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ರೈತರ ನೆರವಿಗೆ ಧಾವಿಸಬೇಕು. ರೈತರು ಉತ್ಪಾದಿಸುವ ತೋಟಗಾರಿಕಾ ಬೆಳೆಗಳಿಗೆ ಕನಿಷ್ಟ ಬೆಂಬಲ ೪ಐದನೇ ಪುಟಕ್ಕೆ

(ಮೊದಲ ಪುಟದಿಂದ) ಬೆಲೆಯನ್ನಾದರೂ ನೀಡಬೇಕು. ರೈತರು ಯಾವ ಬೆಳೆ ಬೆಳೆಯ ಹೊರಟರೂ ಕೂಡ ಬಿತ್ತನೆ ಬೀಜ ಹಾಗೂ ರಸಗೊಬ್ಬರಗಳ ಬೆಲೆ ಗಗನಕ್ಕೇರಿದೆ.

ಕೃಷಿ ಕಾರ್ಮಿಕರ ವೇತನ ದುಪ್ಪಟ್ಟು ಪ್ರಮಾಣದಲ್ಲಿದೆ. ತರಕಾರಿ, ಕಾಯಿ ಪಲ್ಯೆಗಳನ್ನು ಬೆಳೆಯಲು ಕೂಲಿ ಕೊಟ್ಟು ಪೂರೈಸಲು ಆಗುತ್ತಿಲ್ಲ. ಮನೆ ಮಂದಿ ಕಷ್ಟಪಟ್ಟು ಬೆಳೆದ ಬೆಳೆಗೆ ಕೀಟಬಾಧೆ ಹೆಚ್ಚಿದ್ದು ರೋಗ ಹತೋಟಿಗೆ ರಸಾಯನಿಕ ಔಷಧಿ ಸಿಂಪಡಿಸಲೇ ಬೇಕಾದ ದುಸ್ಥಿತಿ ಇದೆ. ಹಾಗಾಗಿ ಸರ್ಕಾರ ರೈತರು ಬೆಳೆಯುವ ಬೆಳೆಗಳಿಗೆ ರಿಯಾಯಿತಿ ದರದ ರಸಗೊಬ್ಬರ ಹಾಗೂ ಬಿತ್ತನೆ ಬೀಜ ನೀಡಬೇಕು. ಬೆಂಬಲ ಬೆಲೆಯನ್ನೂ ಕೂಡ ನೀಡಬೇಕು ಎಂಬುದು ಪ್ರಗತಿಪರ ಕೃಷಿಕರಾದ ಮರೂರು ಗ್ರಾಮದ ಮಹದೇವ್, ಮಹೇಶ್ ಮತ್ತಿತರರ ಆಗ್ರಹವಾಗಿದೆ.

- ಕೆ.ಎಸ್. ಮೂರ್ತಿ