ಸಿದ್ದಾಪುರ, ಜು. ೨೬: ಸಿದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಟ್ಟಣ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಸದ ರಾಶಿಗಳು ತುಂಬಿ ತುಳುಕುತ್ತಿದ್ದು, ದುರ್ವಾಸನೆ ಮತ್ತು ಅಶುಚಿತ್ವತೆಯಿಂದ ಸಾರ್ವಜನಿಕರು ಸಂಕಷ್ಟ ಎದುರಿಸುತ್ತಿದ್ದಾರೆ. ಮಳೆಗಾಲದಲ್ಲಿ ತ್ಯಾಜ್ಯ ನೀರಿನೊಂದಿಗೆ ಹರಿದು ರೋಗಗಳು ಹರಡುವ ಭೀತಿ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಗ್ರಾಮಸ್ಥರು ತಕ್ಷಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ಜಿಲ್ಲೆಯಲ್ಲೇ ಅಧಿಕ ಆದಾಯ ಮತ್ತು ಹೆಚ್ಚಿನ ಸದಸ್ಯರನ್ನು ಹೊಂದಿರುವ ಗ್ರಾಮ ಪಂಚಾಯಿತಿ ಎಂದು ಗುರುತಿಸಿಕೊಂಡಿರುವ ಸಿದ್ದಾಪುರ ಗ್ರಾಮ ಪಂಚಾಯಿತಿಯಲ್ಲಿ ಸಮರ್ಪಕ ಕಸ ವಿಲೇವಾರಿ ವ್ಯವಸ್ಥೆ ಇಲ್ಲದ ಕಾರಣ ಪಟ್ಟಣದ ಹಲವು ಕಡೆಗಳಲ್ಲಿ ಕಸದ ರಾಶಿಗಳು ಕಂಡು ಬರುತ್ತಿವೆ. ಕಸ ಕೊಳೆತು ಹುಳ, ನೊಣಗಳ ಕಾಟ ಹೆಚ್ಚಾಗಿದ್ದು, ದುರ್ವಾಸನೆಯಿಂದ ಸಾರ್ವಜನಿಕರು ಮೂಗು ಮುಚ್ಚಿಕೊಂಡು ಸಂಚರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ವ್ಯಾಪಾರಸ್ಥರೂ ಈ ಸಮಸ್ಯೆಯಿಂದ ತೊಂದರೆ ಅನುಭವಿಸುತ್ತಿದ್ದಾರೆ.
ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಕಸ ಮತ್ತು ತ್ಯಾಜ್ಯಗಳು ಮಳೆ ನೀರಿನೊಂದಿಗೆ ಹರಿದು ಪರಿಸರ ಮಾಲಿನ್ಯ ಉಂಟುಮಾಡುತ್ತಿವೆ. ಗ್ರಾಮ ಪಂಚಾಯಿತಿಯು ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬಿದ ತ್ಯಾಜ್ಯವನ್ನು ಪಟ್ಟಣದ ಹೃದಯ ಭಾಗದಲ್ಲೇ ರಾಶಿ ಹಾಕಿರುವುದರಿಂದ ಸಾರ್ವಜನಿಕರ ಆಕ್ರೋಶ ಮತ್ತಷ್ಟು ಹೆಚ್ಚಾಗಿದೆ.
ಕಳೆದ ಹಲವು ವರ್ಷಗಳಿಂದ ಕಸ ವಿಲೇವಾರಿಗೆ ಲಕ್ಷಾಂತರ ರೂಪಾಯಿ ವೆಚ್ಚ ಮಾಡಿದ್ದರೂ ಶಾಶ್ವತ ಪರಿಹಾರ ಕಂಡುಕೊಳ್ಳಲು ಗ್ರಾಮ ಪಂಚಾಯಿತಿ ವಿಫಲವಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಅಧಿಕಾರಿಗಳು ಕೂಡ ಸಮಸ್ಯೆ ಕುರಿತು ಗಮನ ಹರಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಗ್ರಾ.ಪಂ. ಸದಸ್ಯರು ಕಸ ವಿಲೇವಾರಿಗೆ ಶಾಶ್ವತ ಪರಿಹಾರ ಕಲ್ಪಿಸುವಲ್ಲಿ ವಿಫಲರಾಗಿದ್ದಾರೆ ಎಂದು ಗ್ರಾಮಸ್ಥರು ದೂರಿದ್ದಾರೆ. ಗ್ರಾಮಾಭಿವೃದ್ಧಿ ಹಾಗೂ ಸ್ವಚ್ಛತೆಗೆ ಆದ್ಯತೆ ನೀಡದೆ ಕೇವಲ ಸಭೆಗಳಲ್ಲಿ ಔಪಚಾರಿಕ ಚರ್ಚೆಗೆ ಸೀಮಿತವಾಗಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ. ಸಿದ್ದಾಪುರ ಗ್ರಾಮ ಪಂಚಾಯಿತಿಯಲ್ಲಿ ಕಳೆದ ಹಲವು ವರ್ಷಗಳಿಂದ ಖಾಯಂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಇಲ್ಲದಿರುವುದರಿಂದ ಆಡಳಿತಾತ್ಮಕ ಸಮಸ್ಯೆಗಳು ಹೆಚ್ಚಾಗಿವೆ. ಪ್ರಭಾರ ಅಧಿಕಾರಿಗಳಿಂದ ಪಂಚಾಯಿತಿ ಕಾರ್ಯನಿರ್ವಹಿಸುತ್ತಿದ್ದು, ಇತ್ತೀಚೆಗೆ ಕಾರ್ಯನಿರ್ವಹಿಸುತ್ತಿದ್ದ ಪ್ರಭಾರ ಪಿಡಿಓ ಕೂಡ ವರ್ಗಾವಣೆಯಾಗಿದ್ದಾರೆ.
ಜಿಲ್ಲೆಯ ಪ್ರಮುಖ ಗ್ರಾಮ ಪಂಚಾಯಿತಿಯಾಗಿರುವ ಸಿದ್ದಾಪುರಕ್ಕೆ ಖಾಯಂ ಪಿಡಿಒ ನೇಮಕ ಮಾಡಿದರೆ ಕಸ ವಿಲೇವಾರಿ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ವೇಗ ಸಿಗಲಿದೆ ಎಂದು ಗ್ರಾಮಸ್ಥರು ಅಭಿಪ್ರಾಯಪಟ್ಟಿದ್ದಾರೆ. ಸಂಬAಧಪಟ್ಟ ಇಲಾಖೆಯ ಹಿರಿಯ ಅಧಿಕಾರಿಗಳು ತಕ್ಷಣ ಗಮನಹರಿಸಿ ಶಾಶ್ವತ ಪಿಡಿಒ ನೇಮಕ ಹಾಗೂ ಕಸ ವಿಲೇವಾರಿಗೆ ಶಾಶ್ವತ ಪರಿಹಾರ ಕಲ್ಪಿಸಬೇಕೆಂದು ಒತ್ತಾಯಿಸಿದ್ದಾರೆ.