ಗೋಣಿಕೊಪ್ಪಲು, ಜು. ೨೬: ದ.ಕೊಡಗಿನ ಪೊನ್ನಂಪೇಟೆ ತಾಲೂಕಿನ ದೇವರಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಲಾರಿ ಹಾಗೂ ಕಾರಿನ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಇಬ್ಬರು ಯುವಕರು ದಾರುಣವಾಗಿ ಸಾವನ್ನಪ್ಪಿದ್ದು, ಮೂವರು ಯುವಕರು ಗಂಭೀರ ಗಾಯಗೊಂಡು ಮೈಸೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬೆಂಗಳೂರಿನ ಬನಶಂಕರಿಯ ಗೋಕುಲ್ (೨೦) ಹಾಗೂ ಚೇತನ್ (೧೯) ಮೃತ ಯುವಕರಾಗಿದ್ದಾರೆ. ಶ್ರೀಶೈಲಾ, ನಾಗೇಂದ್ರ ಹಾಗೂ ಚಿನ್ಮಯಿ ಗಂಭೀರ ಗಾಯಗೊಂಡವರಾಗಿದ್ದಾರೆ.
ಬೆಂಗಳೂರಿನ ಬನಶಂಕರಿಯಿAದ ಶನಿವಾರ ರಾತ್ರಿ ೧೦-೩೦ ಗಂಟೆಗೆ ಯುವಕರ ತಂಡ ಕೇರಳ ರಾಜ್ಯದ ಮುನ್ನಾರ್ ಪ್ರವಾಸಿ ತಾಣಕ್ಕೆ ತಮ್ಮ ಸ್ವಿಫ್ಟ್ ಕಾರಿನಲ್ಲಿ ಹೊರಟ್ಟಿತ್ತು. ಭಾನುವಾರ ಮುಂಜಾನೆ ೬-೩೦ ಗಂಟೆಗೆ ದೇವರಪುರ ಬಳಿಯ ತಿರುವಿನಲ್ಲಿ ಬರುತ್ತಿದ್ದಂತೆ ಕಾರು ಹಾಗೂ ಗೋಣಿಕೊಪ್ಪದಿಂದ ಮೈಸೂರಿಗೆ ತೆರಳುತ್ತಿದ್ದ ಪೆಟ್ರೋಲ್ ಟ್ಯಾಂಕರ್ ಲಾರಿ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ.
ತಿತಿಮತಿ - ದೇವರಪುರ ಬಳಿಯ ತಿರುವಿನಲ್ಲಿ ಈ ದುರ್ಘಟನೆ ಸಂಭವಿಸಿದ್ದು, ಡಿಕ್ಕಿಯ ರಭಸಕ್ಕೆ ಕಾರಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ಪರಿಣಾಮ ಕಾರಿನಲ್ಲಿದ್ದ ಶ್ರೀಶೈಲಾ, ನಾಗೇಂದ್ರ ಹಾಗೂ ಚಿನ್ಮಯಿ ಎಂಬವÀರಿಗೆ ಗಂಭೀರ ಗಾಯಗಳಾಗಿದ್ದು, ಗೋಕುಲ್ ಹಾಗೂ ಚೇತನ್ ಮೃತಪಟ್ಟಿದ್ದಾರೆ.
ಸುದ್ದಿ ತಿಳಿದ ಕೂಡಲೇ ವೀರಾಜಪೇಟೆ ಡಿವೈಎಸ್ಪಿ ಮಹೇಶ್ ಕುಮಾರ್, ಗೋಣಿಕೊಪ್ಪ ಸಿಪಿಐ ಶಿವರಾಜ್ ಮುಧೋಳ್, ಎಸ್.ಐ. ಕಾಳೆಗೌಡ ಹಾಗೂ ಪೊಲೀಸ್ ಸಿಬ್ಬಂದಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮೃತಪಟ್ಟ ಯುವಕರ ಮೃತದೇಹವನ್ನು ಗೋಣಿಕೊಪ್ಪ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಯಿತು. ಸಂಜೆಯ ವೇಳೆ ಮೃತರ ಕುಟುಂಬಸ್ಥರು ಆಸ್ಪತ್ರೆಗೆ ಆಗಮಿಸಿದರು. ಮರಣೋತ್ತರ ಪರೀಕ್ಷೆ ನಂತರ ಮೃತದೇಹವನ್ನು ಬೆಂಗಳೂರಿಗೆ ಸಾಗಿಸಿದರು. ಗೋಣಿಕೊಪ್ಪ-ತಿತಿಮತಿ ರಾಜ್ಯ ಹೆದ್ದಾರಿಯಲ್ಲಿ ಪೊಲೀಸ್ ಇಲಾಖೆಯು ‘ಅಪಘಾತದ ವಲಯ’ ಎಂದು ನಾಮಫಲಕಗಳನ್ನು ಅಳವಡಿಸಿದ್ದರೂ, ಇಂತಹ ದುರಂತಗಳು ಮರುಕಳಿಸುತ್ತಿದ್ದು, ವಾಹನ ಚಾಲಕರು ಎಚ್ಚರವಹಿಸಬೇಕಾಗಿದೆ.
- ಹೆಚ್.ಕೆ.ಜಗದೀಶ್